ಚಟಗಳ ಹಾದಿಯನ್ನು ತುಳಿದ- ಸರಳುಗಳನ್ನು ಮುರಿದ- ಪೊಲೀಸರಿಗೆ ಸಿಕ್ಕಿಬಿದ್ದ..
ಬೆಂಗಳೂರು, ಏಪ್ರಿಲ್ 22: ದುಶ್ಚಟವಿದ್ದವನಿಗೆ ಕೋಟಿ ಹಣವಿದ್ದರೂ ಸಾಕಾಗಲ್ಲ. ಹಣವೇ ಇಲ್ಲದವನು ದುಶ್ಚಟದ ಗೀಳಿಗೆ ಬಿದ್ದರೆ ಹಣದ ದಾರಿ ಹುಡುಕುವುದೇ ಮಹಾನ್ ಕಾರ್ಯ. ಕಳ್ಳತನವನ್ನು ಮಾಡುವ ಸಲುವಾಗಿ ಒಬ್ಬೊಬ್ಬ ಒಂದೊಂದು ದಾರಿಯನ್ನು ಹುಡುಕಿಕೊಳ್ಳುತ್ತಾನೆ. ಇಂತಹದ್ದೇ ದಾರಿ ತುಳಿದ ಕಳ್ಳನೊಬ್ಬ ಸಂಜಯ್ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಕಳ್ಳನ ಹಾದಿಯೇ ಡಿಫರೆಂಟ್.
ತಮಿಳುನಾಡು ಮೂಲದ ಇಸಯ್ ರಾಜ್ ಬಂಧಿತ ಕಳ್ಳ. ಈತ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್. ಕಳ್ಳತನ ಮಾಡಿದ ಮೇಲೆಯೂ ಮನೆ ಮಾಲೀಕರಿಗೂ ತಿಳಿಯದಂತೆ ಸೈಲೆಂಟ್ ಅವರ ಮನೆಯ ಮೇಲೆಯೇ ಮಲಗಿರುತ್ತಿದ್ದ. ಇಂತಹ ಖತರ್ನಾಕ್ ಆರೋಪಿಯನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಗೆ ದಾಸ- ಎಲ್ಲೆಂದರಲ್ಲಿ ವಾಸ..!
ಇಸಯ್ ರಾಜ್ ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ಅಮೃತಹಳ್ಳಿಯಲ್ಲಿ ವಾಸವಾಗಿದ್ದ. ಜೀವನಕ್ಕಾಗಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಡ್ರಗ್ಸ್ ದಾಸನಾಗಿದ್ದ ಈತನ ವಿರುದ್ಧ ಸಂಪಿಗೆಹಳ್ಳಿ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡ್ರಗ್ಸ್ ಚಟ ಬಿಡಿಸಲು ಕುಟುಂಬಸ್ಥರು ಈತನನ್ನು ಹತ್ತಿರದ ರಿಹಾಬಿಲೇಷನ್ ಸೆಂಟರ್ ಸೇರಿಸಿದ್ದರು. ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೊರಬಂದಿದ್ದ. ಕೈಯಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ದಿನದ ಖರ್ಚಿಗೆ ಹಣ ಹೊಂದಿಸಲು ಪರದಾಡುತ್ತಿದ್ದ ಇಸಯ್ ರಾಜ್‌ಗೆ ಹೊಳೆದಿದ್ದ ಕಳ್ಳತನ ದಾರಿ ಹಿಡಿದು ಎಲ್ಲೆಂದರಲ್ಲಿ ವಾಸವನ್ನು ಮಾಡುತ್ತಿದ್ದ.

ಅಪಾರ್ಟ್‌ಮೆಂಟ್‌ಗಳೇ ಇವನ ಟಾರ್ಗೆಟ್..!
ಹಣಕ್ಕಾಗಿ ಕಳ್ಳತನ ಮಾಡಲು ಪ್ಲ್ಯಾನ್ ರೂಪಿಸಿಕೊಳ್ಳುತ್ತಿದ್ದ. ಅಪಾರ್ಟ್‌ಮೆಂಟ್ ಗಳನ್ನೇ ಗುರಿಯಾಗಿಸಿಕೊಂಡಿದ್ದ. ಪ್ಲಂಬರ್, ಎಲೆಕ್ಟ್ರಿಕಲ್ , ಪೇಪರ್ ಹಾಕುವ ಸೋಗಿನಲ್ಲಿ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗುತ್ತಿದ್ದ. ಕಿಟಕಿ ಪಕ್ಕದಲ್ಲಿರುವ ಬೀಗ ಹಾಕಿದ ಮನೆಯನ್ನು ಟಾರ್ಗೆಟ್ ಮಾಡಿಕೊಂಡು ಅದೇ ಅಪಾರ್ಟ್‌ಮೆಂಟ್‌ನ ಟೆರೇಸ್‌ನಲ್ಲಿ ಉಳಿದುಕೊಳ್ಳುತ್ತಿದ್ದ. ರಾತ್ರಿ ವೇಳೆ ಮನೆಯ ಕಿಟಕಿ ಮುರಿದು ಕಳ್ಳತನ ಮಾಡುತ್ತಿದ್ದ. ಕೃತ್ಯವೆಸಗುವಾಗ ಮನೆಯ ಯಾವುದೇ ವಸ್ತು ಚೆಲ್ಲಾಪಿಲ್ಲಿಯಾಗದಂತೆ ನಿಗಾವಹಿಸುತ್ತಿದ್ದ. ಕಳ್ಳತನ ಬಳಿಕ ಒಬ್ಬಂಟಿಗನಾಗಿ ಹೊರ ಹೋದರೆ ಅನುಮಾನ ಬರುವುದಾಗಿ ಭಾವಿಸಿ ಆ ರಾತ್ರಿ ಟೇರೆಸ್ ನಲ್ಲಿ ಉಳಿದುಕೊಂಡು ಮಾರನೇ ದಿನ ಬೆಳಗ್ಗೆ ಹಾಲು ಹಾಕುವವರು, ಕೆಲಸಗಾರರು ಬರುವುದನ್ನು ಕಂಡು ಅವರ ಜೊತೆಯಲ್ಲಿ ಎಸ್ಕೇಪ್ ಆಗುತ್ತಿದ್ದ.

ಲಾಕರ್ ಸಮೇತ ಚಿನ್ನಾಭರಣವನ್ನು ದೋಚಿದ್ದ ಕಿರಾತಕ..!
ಅದೇ ರೀತಿ ಕಳೆದ ಮಾರ್ಚ್‌ನಲ್ಲಿ ಸಂಜಯ್ ನಗರದ ಮನೆಯೊಂದರಲ್ಲಿ ಲಾಕರ್ ಸಮೇತ ಚಿನ್ನಾಭರಣ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಬಾಲರಾಜ್ ತನಿಖೆಯನ್ನು ನಡೆಸಿದ್ದರು.

ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಆರೋಪಿಯ ಚಲನವಲನ..
ಅಪಾರ್ಟ್‌ಮೆಂಟ್ ಅಂದಮೇಲೆ ಸಿಸಿಟಿವಿಗಳು ಸರ್ವೇ ಸಾಮಾನ್ಯವಾಗಿರುತ್ತದೆ. ಸಂಜಯ್ ನಗರ ಪೊಲೀಸರು ಪ್ರಕರಣ ದಾಖಲಾಗಿದ್ದೇ ಮೊದಲು ಸಿಸಿಟಿವಿಯನ್ನು ಜಾಲಾಡಿದರು. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯ ಮತ್ತು ಕೆಲವು ತಾಂತ್ರಿಕ ವಿಧಾನದಿಂದಾಗಿ ಆರೋಪಿ ಇಸಯ್ ರಾಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಇಸಯ್ ರಾಜ್ ನನ್ನು ಬಂಧಿಸಿರುವ ಕಾರಣದಿಂದಾಗಿ ಬೆಂಗಳೂರು ನಗರದ ವಿವಿಧೆಡೆ ದಾಖಲಾಗಿರುವ 12ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದಂತೆ ಆಗಿದೆ. ಇಸಯ್ ರಾಜ್ ಬಂಧನದಿಂದ ಆತನ ಬಳಿಯಲ್ಲಿದ್ದ 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್ ಗಳ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications