ನಿರ್ಲಕ್ಷ್ಯಕ್ಕೆ ಮಹಿಳಾ ರೋಗಿ ಸಾವು: ವೈದ್ಯ ಪರಾರಿ
ಬೆಂಗಳೂರು, ಡಿಸೆಂಬರ್ 6: ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯ ಪರಾರಿಯಾಗಿರುವ ಘಟನೆ ಯಲಹಂಕದ ಅಪೂರ್ವ ಆಸ್ಪತ್ರೆಯಲ್ಲಿ ನಡೆದಿದೆ.
ವಿಜಯ ಮೃತಪಟ್ಟ ಮಹಿಳೆ. ನಿನ್ನೆ ಸಂಜೆ ಹೈ ಬಿಪಿಯಿಂದ ಬಳಲುತ್ತಿದ್ದ ವಿಜಯರನ್ನು ತಕ್ಷಣ ಮನೆಯವರು ಅಪೂರ್ವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ತೆರಳಿ ಗಂಟೆಗಳಾದರೂ ಚಿಕಿತ್ಸೆ ನೀಡದೆ ವೈದ್ಯರು ಸತಾಯಿಸಿದ್ದರು ಎನ್ನಲಾಗಿದೆ. ಬಳಿಕ ವೈದ್ಯರೊಬ್ಬರು ಮಹಿಳೆಗೆ ಚಿಕಿತ್ಸೆ ನೀಡಿದ್ದರು. ಆದರೂ ಮಹಿಳೆ ಸಾವನ್ನಪ್ಪಿದ್ದು, ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದೇ ಸಾವಿಗೆ ಕಾರಣ ಎಂದು ಮೃತಳ ಪೋಷಕರು ಆರೋಪಿಸುತ್ತಿದ್ದಾರೆ.
ಮೃತ ಮಹಿಳೆ ಕುಟುಂಬದವರು,ಸಂಬಂಧಿಕರು ಮತ್ತು ಸ್ಥಳೀಯರು ಅಪೂರ್ವ ಆಸ್ಪತ್ರೆಗೆ ನುಗ್ಗಿ ಆಸ್ಪತ್ರೆಯ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಯ ಗ್ಲಾಸ್ಗಳನ್ನು ಒಡೆದಿದ್ದಾರೆ.

ಗಲಾಟೆ ಆದ ಬೆನ್ನಲ್ಲೇ ಹಿಂದಿನ ಬಾಗಿಲಿನಿಂದ ವೈದ್ಯ ಪರಾರಿಯಾಗಿದ್ದಾನೆ ಎನ್ನಲಾಗಿದೆ ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.












Click it and Unblock the Notifications