Bengaluru-Pune Expressway: ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇನಿಂದ ಕರ್ನಾಟಕಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತಾ?-ಮಾಹಿತಿ
Bengaluru-Pune Expressway: ಈಗಾಗಲೇ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗಿದ್ದು, ಇದರಿಂದ ಅನುಕೂಲಗಳು, ಅನಾನುಕೂಲಗಳು ಎರಡು ಆಗುತ್ತಿವೆ. ಅಲ್ಲದೆ, ಈ ಹೆದ್ದಾರಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೂ ಇದೆ. ಇದೀಗ 2028ರ ವೇಳೆಗೆ ಉದ್ಘಾಟನೆ ಆಗುತ್ತದೆ ಎನ್ನಲಾಗುತ್ತಿರುವ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇನಿಂದ ಕರ್ನಾಟಕಕ್ಕೆ ಏನೆಲ್ಲಾ ಉಪಯೋಗಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರತ್ ಮಾಲಾ ಪರಿಯೋಜನೆಯಡಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಲಿದ್ದು, ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ಮೂಲಕ ಹಾದು ಹೋಗಲಿದೆ. ಇದರ ನಿರ್ಮಾಣದ ಅಂದಾಜು ವೆಚ್ಚ 40,000 ಕೋಟಿ ರೂಪಾಯಿಗೂ ಹೆಚ್ಚು ಆಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಮಧ್ಯ, ಕಲ್ಯಾಣ ಹಾಗೂ ಉತ್ತರ ಕರ್ನಾಟಕದ 9, ಮಹಾರಾಷ್ಟ್ರದ ಮೂರು ಸಹಿತ ಒಟ್ಟು 12 ಜಿಲ್ಲೆಗಳ ಮೂಲಕ ಈ ಹೆದ್ದಾರಿ ಹಾದು ಹೋಗಲಿದೆ. ಹಾಗೆಯೇ ಈ ಎಲ್ಲಾ ಜಿಲ್ಲೆಗಳಿಗೂ ಸಹ ಈ ಹೆದ್ದಾರಿಯಿಂದ ತುಂಬಾ ಅನುಕೂಲ ಆಗಲಿದೆ. ಹಾಗಾದರೆ ಯಾವ ರೀತಿಯಲ್ಲಿ ಅನುಕೂಲವಾಗಲಿದ ಎಂದು ಇಲ್ಲಿ ಗಮನಿಸಿ.
ಈ ಹೆದ್ದಾರಿ ಬೆಳಗಾವಿ ಜಿಲ್ಲೆ, ಜಮಖಂಡಿ, ಬಾಗಲಕೋಟೆ, ಬಾದಾಮಿ, ಮುಧೋಳ, ನರಗುಂದ, ಗದಗ ಜಿಲ್ಲೆಯ ರೋಣ, ಯಲಬುರ್ಗಾ, ಕೊಪ್ಪಳ ಜಿಲ್ಲೆ, ವಿಜಯನಗರ ಜಿಲ್ಲೆಯ ಕೂಡ್ಲಿಗಿ, ದಾವಣಗೆರೆ ಜಿಲ್ಲೆಯ ಜಗಳೂರು, ಮಧುಗಿರಿ, ಚಿತ್ರದುರ್ಗ, ಕೊರರಟಗೆರೆ, ನೆಲಮಂಗಲ, ತುಮಕೂರು ಜಿಲ್ಲೆ, ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ಅದರಲ್ಲೂ ಬೆಂಗಳೂರು-ಪುಣೆ ವಾಸಿಸಲು, ಉದ್ಯೋಗ ಕಲ್ಪಿಸುವ ಭಾರತದ ಅತ್ಯುತ್ತಮ ಸ್ಥಳಗಳಾಗಿವೆ. ಆದ್ದರಿಂದ ಈ ಹೆದ್ದಾರಿ ಹಾದು ಹೋಗುವ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್‌ನಲ್ಲಿ ಗಣನೀಯವಾಗ ಪ್ರಗತಿ, ಉದ್ಯೋಗಾವಕಾಶ ಸೃಷ್ಟಿಗೆ ಅನುಕೂಲ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರಿನ ಮುತಗಂಡಹಳ್ಳಿಯ ಸ್ಯಾಟ್‌ಲೈಟ್ ರಿಂಗ್ ರಸ್ತೆಯಿಂದ ಪ್ರಾರಂಭವಾಗಲಿದ್ದು, ಪುಣೆಯ ಕಂಜೆ ಬಳಿಯ ರಿಂಗ್ ರಸ್ತೆಗೆ ಮುಕ್ತಾಯವಾಗಲಿದೆ.
ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು-ಪುಣೆ ಸಮೀಪ 5 ಕಿಲೋ ಮೀಟರ್ ಉದ್ದದ ಎರಡು ಏರ್‌ಸ್ಟ್ರಿಪ್‌ಗಳನ್ನು ಕೂಡ ನಿರ್ಮಿಸುವ ಯೋಜನೆ ಇದರಲ್ಲಿ ಒಳಗೊಂಡಿದೆ.
ರಾಜ್ಯದ ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಕೃಷ್ಣಾ, ವೇದಾವತಿ, ಮಹಾರಾಷ್ಟ್ರದ ನೀರಾ, ಯೆರಳ, ಚಂದನಾಡಿ, ಅಗ್ರಣಿ, ಚಿಕ್ಕಹಗರ ನದಿಗಳ ಮೂಲಕ ಹಾದು ಹೋಗಲಿದೆ. 6 ಸೇತುವೆ, 55 ಮೇಲ್ಸೇತುವೆಗಳು, 22 ಇಂಟರ್‌ಚೇಂಜ್‌ಗಳು, 14 ರಾಷ್ಟ್ರೀಯ, ರಾಜ್ಯ ಹೆದ್ದಾರಿ ಕ್ರಾಸಿಂಗ್ ಪಾಯಿಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಇದೀಗ ಬೆಂಗಳೂರಿನಿಂದ ಪುಣೆಗೆ ಚತುಷ್ಪಥ ಸಂಪರ್ಕ ರಸ್ತೆ ಇದೆ. ಸುದೀರ್ಘ 15 ಗಂಟೆಗಳ ಪ್ರಯಾಣ ಇದೆ. ಇದನ್ನು ಅಗಲಗೊಳಿಸುವುದು ಇದೀಗ ಅನಿವಾರ್ಯವಾಗಿದ್ದು, ಆದರೆ ಇದರ ಬದಲು ಹೊಸ ಹೆದ್ದಾರಿ ನಿರ್ಮಾಣವೇ ಸೂಕ್ತ ಎಂದು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದರು.
ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. 12 ಲೈನ್ ಹೆದ್ದಾರಿ ಪೈಕಿ ಸದ್ಯ 8 ಲೇನ್‌ಗಳನ್ನು ನಿರ್ಮಾಣ ಮಾಡಲಾಗುವುದು. 700 ಕಿಲೋ ಮೀಟರ್ ರಸ್ತೆಯನ್ನು 7 ಗಂಟೆಗಳಲ್ಲಿ ತಲುಪಬಹುದು. ಕೊರಟಗೆರೆ ತಾಲೂಕು ಸಹಿತ ಕೆಲವೆಡೆ ಭೂಸ್ವಾಧೀನಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದು, ಮನವೊಲಿಕೆ ಮಾಡಲಾಗುತ್ತಿದೆ. ಹೊಸ ಸರ್ಕಾರ ರಚನೆ ಆಗುತ್ತಿದ್ದಂತೆ ಕಾಮಗಾರಿಗೆ ಚಾಲನೆ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications