ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಕ್ರಿಯೆಗೆ ತಕರಾರು
ಬೆಂಗಳೂರು, ನವೆಂಬರ್ 25: ಅಂಬರೀಶ್ ಅವರ ಅಂತಿಮಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಮಾಡಬಾರದು ಎಂದು ವಕೀಲರೊಬ್ಬರು ತಕರಾರು ತೆಗೆದಿದ್ದಾರೆ.
ಅಂಬರೀಶ್ ಅವರ ಅಂತಿಮ ಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಬಾರದು ಎಂದು ವಕೀಲ ಪಿ.ಆರ್.ದೇಸಾಯಿ ಅವರು ಇಂದು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪಿಐಎಲ್ ಸಲ್ಲಿಸಿದ್ದಾರೆ.
ಕಂಠೀರವ ಸ್ಟುಡಿಯೋ ಇರುವುದು ಸಿನಿತಾರೆಗಳ ಅಂತಿಮ ಸಂಸ್ಕಾರಕ್ಕಲ್ಲ ಸಿನಿಮಾ ಕಾರ್ಯಕ್ಕಾಗಿ ಆ ಸ್ಟುಡಿಯೋ ಇದೆ ಅದನ್ನು ಅದೇ ಕಾರಣಕ್ಕೇ ಬಳಸಬೇಕು ಎಂದು ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಿದ್ದಾರೆ.

ಹೀಗೆ ನಟ-ನಟಿಯರ ಅಂತಿಮ ಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡುತ್ತಾ ಹೋದರೆ ಕೊನೆಗೆ ಅದು ರುದ್ರಭೂಮಿ ಆಗಿ ಬಿಡುತ್ತದೆ ಎಂದು ವಕೀಲರು ತಮ್ಮ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರವಾದ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ವಕೀಲರಿಗೆ ಮೌಖಿಕವಾಗಿ ಸೂಚನೆ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಅವರು, ಈ ಅರ್ಜಿಯು ಇತರೆ ಸಾಮಾನ್ಯ ಅರ್ಜಿಗಳಂತೆ ವಿಚಾರಣೆಗೆ ಬರಲಿದೆ ಎಂದು ಹೇಳಿದ್ದಾರೆ.
ನಾಳೆ ಅಂಬರೀಶ್ ಅವರ ಅಂತಿಮ ಸಂಸ್ಕಾರ ಮುಗಿದ ನಂತರವೇ ಪಿಐಎಲ್ ವಿಚಾರಣೆಗೆ ಬರಲಿದೆ.












Click it and Unblock the Notifications