ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನನ್ನು ಭ್ರಷ್ಟ ಅನ್ನಬೇಡಿ, ಪ್ಲೀಸ್: ಬಿಎಸ್ ಯಡಿಯೂರಪ್ಪ

By Srinath
|
Google Oneindia Kannada News

ಬೆಂಗಳೂರು, ಮಾ.29: ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಟ್ಟು ಮಾಡಿಕೊಂಡಿದ್ದಾರೆ. ಅದರಲ್ಲೂ ಯಡಿಯೂರಪ್ಪ ಭ್ರಷ್ಟ/ ಕಳಂಕಿತ ಎಂದೆಲ್ಲಾ ಸಂಬೋಧಿಸುವ/ಉದ್ಘರಿಸುವ ಮಾಧ್ಯಮಗಳ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ನಾನು ಭ್ರಷ್ಟ ಅಲ್ಲ; ದೇಶದ ಯಾವುದೇ ನ್ಯಾಯಾಲಯವೂ ದೋಷಿ ಅಂದಿಲ್ಲ. ಹಾಗಾಗಿ ದಯವಿಟ್ಟು ಭ್ರಷ್ಟ ಎಂಬ ಹಣೆಪಟ್ಟಿಯನ್ನು ನನಗೆ ಹಚ್ಚಬೇಡಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಭಿನ್ನವಿಸಿಕೊಂಡಿದ್ದಾರೆ. ಈ ಸಂಬಂಧ ಎಲ್ಲ ಮಾಧ್ಯಮ ಕಚೇರಿಗಳಿಗೆ ಉದ್ದನೆಯ ಪತ್ರ ಬರೆದಿದ್ದಾರೆ.

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಯಡಿಯೂರಪ್ಪ ಅವರು ದೇಶದ ಕಾನೂನು ಹೇಳುವ ಪ್ರಕಾರ, 'ಒಬ್ಬ ವ್ಯಕ್ತಿಯು ದೋಷಿ ಎಂದು ಸಾಬೀತಾಗುವವರೆಗೂ ಆತ ಅಮಾಯಕ. ನನ್ನ ವಿಷಯದಲ್ಲೂ ಅಷ್ಟೆ. ನನ್ನ ವಿರುದ್ಧ ಆರೋಪಗಳಿರಬಹುದು. ಆದರೆ ನನ್ನನ್ನು ತಪ್ಪಿತಸ್ಥ ಎಂದು ಕೋರ್ಟಿನಲ್ಲಿ ಸಾಬೀತುಪಡಿಸಿಲ್ಲ. ಹಾಗಾಗಿ ದಯವಿಟ್ಟು ನನ್ನನ್ನು 'ಭ್ರಷ್ಟ' ಎಂದು ಕರೆಯುವುದನ್ನು ನಿಲ್ಲಿಸಿ ಎಂದು ವಿನಂತಿಸಿದ್ದಾರೆ.

do-not-call-me-as-corrupt-yeddyurappa-urges-media

ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಬರೆದಿರುವ 3 ಪುಟಗಳ ಸುದೀರ್ಘ ಪತ್ರದಲ್ಲಿ 'ಮಾಧ್ಯಮಗಳು ಚರ್ಚೆ, ಸಂವಾದದ ವೇಳೆ ನನ್ನನ್ನು ಭ್ರಷ್ಟ ಎಂದು ಸಂಬೋಧಿಸುತ್ತಿರುವುದರಿಂದ ನನಗೆ ಅತೀವ ನೋವಾಗಿದೆ. ದಯವಿಟ್ಟು ನನ್ನನ್ನು ಇನ್ನು ಮುಂದೆ ಆ ರೀತಿ ಕರೆಯಬೇಡಿ' ಎಂದು ಅವರು ಮನವಿ ಮಾಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಅದೊಂದು ವ್ಯವಸ್ಥಿತ ಸಂಚು: 'ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಸ್ಥಾಪಿತ ಹಿತಾಸಕ್ತಿಗಳು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದವು. ಇದೆಲ್ಲ ನನ್ನ ರಾಜಕೀಯ ವಿರೋಧಿಗಳು ನಡೆಸಿದ ವ್ಯವಸ್ಥಿತ ಸಂಚು' ಎಂದು ಬಿಎಸ್ವೈ ಗುಡುಗಿದ್ದಾರೆ.

ಜತೆಗೆ, ನಾನು ನನ್ನ ಅಧಿಕಾರಾವಧಿಯಲ್ಲಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಸಿಗುವಂತೆ ನೋಡಿಕೊಂಡಿದ್ದೇನೆ. ನನ್ನ ಪರಿಶ್ರಮ, ಸೇವೆ ಮತ್ತು ತ್ಯಾಗ ಮನೋಭಾವದ ಮೂಲಕ ಕಳೆದ 4 ದಶಕಗಳಿಂದ ನಾನು ಗಳಿಸಿದ್ದ ವ್ಯಕ್ತಿತ್ವವನ್ನು ಈ ಪಟ್ಟಭದ್ರ ಹಿತಾಸಕ್ತಿಗಳ ಸಂಚಿನಿಂದಾಗಿ ಕಳೆದುಕೊಳ್ಳಬೇಕಾಗಿ ಬಂತು. ಆದರೂ ನಾನು ಧೃತಿಗೆಟ್ಟಿಲ್ಲ. ನನ್ನ ಮೇಲಿನ ಎಲ್ಲ ಪ್ರಕರಣಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನನಗಿದೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.

ಈಗಾಗಲೇ ನನಗೆ ಹಲವು ಪ್ರಕರಣಗಳಲ್ಲಿ ಕಾನೂನುರೀತ್ಯ ರಿಲೀಫ್ ಸಿಕ್ಕಿದೆ. ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಎಲ್ಲ ಆರೋಪಗಳಿಂದ ಮುಕ್ತನಾಗುವ ನಂಬಿಕೆ/ ವಿಶ್ವಾಸ ನನಗಿದೆ. ಹಾಗಾಗಿ ಮಾಧ್ಯಮಗಳು ದಯವಿಟ್ಟು ನನ್ನನ್ನು 'ಭ್ರಷ್ಟ' ಎಂದು ಕರೆಯುವುದನ್ನು ನಿಲ್ಲಿಸಿ.

ಸಂವಾದ ಕಾರ್ಯಕ್ರಮಗಳಲ್ಲಿ ನನ್ನ ವಿರೋಧಿಗಳು 'ಯಡಿಯೂರಪ್ಪ ಭ್ರಷ್ಟ' ಎಂದು ಕರೆದರೆ ನೀವೇನೂ ಮಾಡಲಾಗದು. ಆದರೆ, ನಿಮ್ಮ ಪತ್ರಿಕೆಯಲ್ಲಿ ನನ್ನನ್ನು ಆ ರೀತಿ ಸಂಬೋಧಿಸಬೇಡಿ, ನನ್ನನ್ನು 'ಭ್ರಷ್ಟ' ಎನ್ನದಂತೆ ನಿಮ್ಮ ಆ್ಯಂಕರುಗಳಿಗೆ, ವರದಿಗಾರರಿಗೆ ಸೂಚಿಸಿ ಎನ್ನುವುದು ನನ್ನ ಕಳಕಳಿಯ ವಿನಂತಿ' ಎಂದು ಯಡಿಯೂರಪ್ಪ ತಮ್ಮ ಪತ್ರದಲ್ಲಿ ಕೋರಿದ್ದಾರೆ.

English summary
Lok Sabha Election 2014: Do not call me as corrupt Shimoga BJP candidate BS Yeddyurappa urges media. In a letter of request to print and electronic media the former chief minister B S Yeddyurappa urged media persons not to call him 'corrupt' on television, newspapers and online news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X