ಬಿಜೆಪಿ & ಜೆಡಿಎಸ್ ನಾಯಕರಿಗೆ ಡಿ.ಕೆ. ಸುರೇಶ್ ಖಡಕ್ ಉತ್ತರ!
ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ ಈಗ ಬಹು ಚರ್ಚೆಯಲ್ಲಿರುವ ಕ್ಷೇತ್ರ ಅಂದರೆ ಅದು ಬೆಂಗಳೂರು ಗ್ರಾಮಾಂತರ. ಇಲ್ಲಿಂದ ಕಳೆದ 3 ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ, ಡಿ.ಕೆ. ಸುರೇಶ್ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆದರೆ 2024ರ ಚುನಾವಣೆಯ ಅಖಾಡದಲ್ಲಿ ಡಿ.ಕೆ. ಸುರೇಶ್ ಅವರಿಗೆ ಸೋಲಿನ ಪಾಠ ಕಲಿಸಲು ಜೆಡಿಎಸ್ & ಬಿಜೆಪಿಯ ವರಿಷ್ಠರು ತಂತ್ರ ರೂಪಿಸುತ್ತಿದ್ದಾರೆ. ಈ ಬಗ್ಗೆ ಖುದ್ದು ಡಿ.ಕೆ. ಸುರೇಶ್ ಅವರು ಹೇಳಿದ್ದೇನು ಗೊತ್ತೆ? ಬನ್ನಿ ತಿಳಿಯೋಣ.
ಲೋಕಸಭೆ ಚುನಾವಣೆ 2024 ಹತ್ತಿರ ಬರುತ್ತಿದ್ದಂತೆ ಸೀನ್ ಯು ಟರ್ನ್ ಆಗುತ್ತಿದ್ದು, ಸಿಕ್ಕಾಪಟ್ಟೆ ಕುತೂಹಲವೂ ಸೃಷ್ಟಿಯಾಗಿದೆ. ಅದರಲ್ಲೂ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ತಮ್ಮ ಬಲ ಪ್ರದರ್ಶನ ಮಾಡಲು ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ. ಇದೆ ವೇಳೆ 'ಡಿಕೆ' ಸಹೋದರರನ್ನ ಕಟ್ಟಿಹಾಕಲು ದೇವೇಗೌಡರ ಅಳಿಯನನ್ನೇ ಲೋಕಸಭೆಯಲ್ಲಿ ಚುನಾವಣೆ ಅಖಾಡಕ್ಕೆ ಇಳಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ರಣತಂತ್ರ ರೂಪಿಸಿದೆ ಎನ್ನಲಾಗಿತ್ತು. ಈ ಬಗ್ಗೆ ಇದೀಗ, ಖುದ್ದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದರಾದ ಡಿ.ಕೆ. ಸುರೇಶ್ ಅವರೇ, ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಎಸ್ & ಬಿಜೆಪಿಗೆ ಖಡಕ್ ಉತ್ತರ!
ನಮಗೆ ನಮ್ಮ ಕೆಲಸ ಕಾರ್ಯ ಮುಖ್ಯ, ಯಾರೇ ಅಭ್ಯರ್ಥಿ ಆದರೂ ಹೋರಾಟ ಮಾಡಬೇಕು. ಹಳೇ ವೈರಿಗಳು ಒಂದಾಗ್ತಿದ್ದಾರೋ, ಕಿತ್ತಾಡ್ತಿದ್ದಾರೋ ಗೊತ್ತಿಲ್ಲ. ಟಾರ್ಗೆಟ್ ಮಾಡೋದೆಲ್ಲವು ರಾಜಕಾರಣದಲ್ಲಿ ಸ್ವಾಭಾವಿಕ. ಇದಕ್ಕೆಲ್ಲಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಉತ್ತರ ಕೊಡುತ್ತಾರೆ. ಕೆಲವೇ ದಿನಗಳಲ್ಲಿ ಯಾರು ನಿಲ್ಲಬೇಕು ಅನ್ನೋದನ್ನ ಹೈಕಮಾಂಡ್ ತಿಳಿಸುತ್ತೆ. ಹೀಗಾಗಿ ಹೈಕಮಾಂಡ್ ಹೇಳಿದವರು ಸ್ಪರ್ಧೆ ಮಾಡ್ತಾರೆ ಅಂತಾ ಡಿ.ಕೆ. ಸುರೇಶ್ ಅವರು ಈಗ ಹೇಳಿದ್ದಾರೆ. ಈ ಮೂಲಕ ಜೆಡಿಎಸ್ & ಬಿಜೆಪಿ ವರಿಷ್ಠರ ತಂತ್ರಕ್ಕೆ ಖಡಕ್ ಉತ್ತರ ನೀಡಿದ್ದಾರೆ, ಸಂಸದ ಡಿ.ಕೆ. ಸುರೇಶ್.
ದೇವರು ಒಳ್ಳೆಯದು ಮಾಡಲಿ...
ಹಾಗೇ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಡಿ.ಕೆ. ಸುರೇಶ್ ಅವರು ಈಗ ತಮ್ಮ ಎದುರಾಳಿ ನಾಯಕರಿಗೆ ಉತ್ತರ ನೀಡಿದ್ದಾರೆ. ಹಾಗೇ ಚುನಾವಣೆಗೆ ನಿಂತ ಮೇಲೆ ಹೋರಾಟ ಮಾಡಲೇಬೇಕಲ್ವಾ? ಅವರದ್ದು ದೋಸ್ತಿ ಹೋರಾಟವೋ ಅಥವಾ, ಅವರ ಕಾಲನ್ನು ಇವರು ಎಳೆಯುತ್ತಿದ್ದಾರೋ ಗೊತ್ತಿಲ್ಲ. ನನ್ನ ಸ್ಪರ್ಧೆ ಬಗ್ಗೆಯೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ ಹೈಕಮಾಂಡ್ ಸೂಚನೆ ಪ್ರಕಾರವೇ ನಾವು ಕೆಲಸವನ್ನ ಮಾಡುತ್ತೇವೆ ಅಂತಾ ಡಿ.ಕೆ. ಸುರೇಶ್ ಅವರು ಇದೀಗ ರಾಮನಗರದಲ್ಲಿ ಹೇಳಿದ್ದಾರೆ.

ಡಿಕೆ ಸುರೇಶ್ ಕ್ಷೇತ್ರ ಬದಲಾವಣೆ?
ಇದು ಒಂದ್ಕಡೆಯಾದ್ರೆ ಇನ್ನೊಂದು ಕಡೆ ಕರ್ನಾಟಕದ ಹಾಲಿ ಉಪಮುಖ್ಯಮಂತ್ರಿ ಅವರ ತಮ್ಮ ಅಂದ್ರೆ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಕ್ಷೇತ್ರ ಬದಲಾವಣೆ ಮಾಡ್ತಾರಾ? ಅಂತಾನೂ ಚರ್ಚೆ ಶುರುವಾಗಿದೆ. ಈಗ ಓಡಾಡುತ್ತಿರುವ ಸುದ್ದಿಗಳ ಪ್ರಕಾರ, ಡಿ.ಕೆ. ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಬಿಟ್ಟು ಬೆಂಗಳೂರು ಉತ್ತರಕ್ಕೆ ಬರುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ. ಆದರೆ ಈ ಮಾತುಗಳಿಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಾಗಿ, ಈ ಸುದ್ದಿಗಳು ಗಾಳಿ ಸುದ್ದಿಯಾಗಿವೆ. ಇಷ್ಟೆಲ್ಲದರ ನಡುವೆ ತಮ್ಮ ರಾಜಕೀಯ ವಿರೋಧಿಗಳ ಮಾತಿಗೆ ಖಡಕ್ ಉತ್ತರ ನೀಡಿದ್ದಾರೆ ಸಂಸದ ಡಿ.ಕೆ. ಸುರೇಶ್.












Click it and Unblock the Notifications