Breaking:ಇಡಿ ವಿಚಾರಣೆ ನಂತರ ಬೆಂಗಳೂರಲ್ಲಿ ಡಿಕೆಶಿ ಪ್ರತಿಕ್ರಿಯೆ
ಬೆಂಗಳೂರು, ಅಕ್ಟೋಬರ್ 07: ಜಾರಿ ನಿರ್ದೇಶನಾಲಯದ ವಿಚಾರಣೆ ಇಂದು ಒಂದು ಹಂತಕ್ಕೆ ಮುಕ್ತಾಯವಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಕೆಲವು ದಾಖಲೆ ನೀಡುವಂತೆ ಕೇಳಿದ್ದಾರೆ. ಅದಕ್ಕಾಗಿ ನಾನು ಸಮಯಾವಕಾಶ ಕೋರಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅವ್ಯವಹಾರ ಕುರಿತು ಶುಕ್ರವಾರ ಜಾರಿ ನಿರ್ದೇಶನಾಲಯ ವಿಚಾರಣೆ ಎದುರಿಸಿದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದರು.
ಯಂಗ್ ಇಂಡಿಯಾ ಸಂಸ್ಥೆಗೆ ಹಣ ನೀಡಿರುವ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಕೇಳಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಮಹಾತ್ಮ ಗಾಂಧೀಜಿ ಅವರ ಕಾಲದಲ್ಲಿ ನಮ್ಮ ಮುಖಂಡರು ಮಾಡಿರುವ ಸಂಸ್ಥೆಗಳಿಗೆ ನಾವು ಹಣ ನೀಡಿದ್ದೇವೆ ಎಂದು ಹೇಳಿದ್ದೇವೆ. ಅವರು ನೀವು ಹಣ ಯಾಕೆ ಕೊಟ್ಟಿರಿ? ಹೇಗೆ ಕೊಟ್ಟಿರಿ? ಅದರ ಮೂಲ ಏನು ಎಂದು ಪ್ರಶ್ನಿಸಿದ್ದರು ಎಂದರು.

ಅ.23 ನಂತರ ವಿಚಾರಣೆಗೆ ಅವಕಾಶ ನೀಡಿಲ್ಲ
ಭಾರತ ಜೋಡೋ ಪಾದಯಾತ್ರೆ ನಿಮಿತ್ತ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಕೈ ನಾಯಕರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದರೂ ನಾನು ಇವತ್ತು ಯಾತ್ರೆಯಲ್ಲಿ ಭಾಗವಹಿಸಲು ಆಗಿಲ್ಲ. ಇವತ್ತೇ ಈ ವಿಚಾರಣೆ ಮಾಡುವ ಅಗತ್ಯ ಏನಿತ್ತು? ನಾನು ಅ. 23ರ ನಂತರ ಯಾವುದೇ ದಿನ ವಿಚಾರಣೆಗೆ ಕರೆದರೂ ಬರುತ್ತೇನೆ ಎಂದು ಸಮಯ ಕೇಳಿದ್ದರೂ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಇವತ್ತೇ ಹಾಜರಾಗುವಂತೆ ಸೂಚಿಸಿದ್ದರು ಎಂದು ಹೇಳಿದರು.
ವಿಚಾರಣೆ ಬಳಿಕ ಬೆಳಗ್ಗೆಯೆ ಬಿಜೆಪಿ ವಿರುದ್ಧ ಹರಿಹಾಯ್ದ ಡಿಕೆ ಶಿವಕುಮಾರ್, ರಾಜಕಾರಣವನ್ನು ರಾಜಕೀಯ ಕ್ಷೇತ್ರದಲ್ಲೇ ಮಾಡಬೇಕು ಹೊರತು ತನಿಖಾ ಸಂಸ್ಥೆಯ ಕಚೇರಿಯಲ್ಲಿ ಅಲ್ಲ. ತನಿಖಾ ಸಂಸ್ಥೆಗಳನ್ನು ಬಿಜೆಪಿ ಬಳಸಿಕೊಂಡು ಬೆದರಿಕೆ ಒಡ್ಡುತ್ತಿದೆ ಎಂದು ದೂರಿದರು. ಈ ಕುರಿತು ಟ್ವಿಟ್ ಮಾಡಿದ ಅವರು, ಬಿಜೆಪಿ ಎದುರಾಳಿಗಳಿಗೆ ಕಿರುಕುಳ ನೀಡಿ ಹೆದರಿಸಲು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ರಾಜ್ಯ ಜನರೇ 2023ಮೇ ತಿಂಗಳಿನಲ್ಲಿ ಉತ್ತರಿಸಲಿದ್ದಾರೆ ಎಂದರು.
ಅಲ್ಲದೇ ಇಡಿ ಮೂಲಕ ನಿರುದ್ಯೋಗ, ಬೆಲೆ ಏರಿಕೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎನ್ನುವುದನ್ನು ಬಿಜೆಪಿಗೆ ಅರಿವಾಗಬೇಕಿದೆ ಎಂದು ಅವರು ಕಿಡಿ ಕಾರಿದ್ದಾರೆ.











Click it and Unblock the Notifications