DK Shivakumar: ಇದು ನನ್ನ ವೈಯಕ್ತಿಕ ವಿಚಾರ; ಟೀಕೆಗಳಿಗೆ ಡಿಕೆ ಶಿವಕುಮಾರ್ ಖಡಕ್ ಉತ್ತರ
ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ ಎನಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಮಹಾಶಿವರಾತ್ರಿ ಹಬ್ಬದ ದಿನ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಪಕ್ಷದ ನಾಯಕರಿಂದ ಟೀಕೆಗೆ ಗುರಿಯಾಗಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಟ್ವೀಟ್ ಮಾಡಿದವರಿಗೆಲ್ಲಾ ಉತ್ತರ ಕೊಡಲು ಆಗಲ್ಲ ಎಂದು ಹೇಳಿದ್ದಾರೆ.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರೋ ಟ್ವೀಟ್ ಮಾಡಿದರೆ ನಾನೇಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು, ನನ್ನ ಮುಂದೆ ಬಂದು ಮಾತನಾಡಿದರೆ ಉತ್ತರ ಕೊಡುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರ, ಶಿವನ ರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಇದನ್ನು ಕಾಂಗ್ರೆಸ್ ಅಥವಾ ಬಿಜೆಪಿ ಸ್ವಾಗತಿಸುತ್ತದೆಯೋ ಅದೆಲ್ಲಾ ನನಗೆ ಬೇಕಾಗಿಲ್ಲ, ಮಾಧ್ಯಮಗಳಲ್ಲಿ ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿದ್ದ ಪಿ.ವಿ ಮೋಹನ್
ಡಿಕೆ ಶಿವಕುಮಾರ್ ಇಶಾ ಫೌಂಡೇಶನ್ ಆಯೋಜಿಸಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಎಐಸಿಸಿ ಕಾರ್ಯದರ್ಶಿ ಪಿ.ವಿ ಮೋಹನ್ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, ಡಿ.ಕೆ ಶಿವಕುಮಾರ್ ಅವರ ನಡೆಯು ಪಕ್ಷದ ಸಿದ್ಧಾಂತಕ್ಕೆ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದ್ದರು.
ಬುಧವಾರ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ನೀವು ರಾಹುಲ್ ಗಾಂಧಿ ಅವರಿಗೆ ಅವಮಾನ ಮಾಡಿದವರಿಗೆ ಧನ್ಯವಾದ ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು.
ತಮ್ಮ ಮೇಲಿನ ಟೀಕೆಗಳಿಗೆ ಡಿ.ಕೆ ಶಿವಕುಮಾರ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಜಗ್ಗಿ ವಾಸುದೇವ್ ಅವರು ಖುದ್ದಾಗಿ ಬಂದು ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಅದಕ್ಕಾಗಿ ಹೋಗಿದ್ದೆ. ಇದು ನನ್ನ ವೈಯಕ್ತಿಕ ವಿಚಾರ ಪಕ್ಷದ ವಿಚಾರ ಇಲ್ಲಿ ಬರುವುದಿಲ್ಲ, ರಾಹುಲ್ ಗಾಂಧಿ ಅವರೇ ನನ್ನ ನಾಯಕ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಂತೆ ಅವರು ಬಿಜೆಪಿ ಸೇರುತ್ತಾರಾ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿತ್ತು. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆ ಸಿಗದ ಕಾರಣ ಅವರು ಅಸಮಾಧಾನಗೊಂಡ್ರಾ ಅಥವಾ ಕಾಂಗ್ರೆಸ್ ಒಳಜಗಳದಿಂದ ಬೇಸತ್ತಿದ್ದಾರಾ ಎನ್ನುವ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದ್ದವು. ಆದರೆ ಈಗ ಡಿಕೆ ಶಿವಕುಮಾರ್ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.
ಇದಕ್ಕೂ ಮುನ್ನ ಮಹಾಕುಂಭಮೇಳದಲ್ಲಿ ಸ್ನಾನ ಮಾಡಿದರೆ ಅಭಿವೃದ್ಧಿಯಾಗುತ್ತಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ ಬಳಿಕ ಡಿಕೆ ಶಿವಕುಮಾರ್ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದ್ದರು.












Click it and Unblock the Notifications