ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆ ಚುನಾವಣೆ: ಬಿಗ್ ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 07: ನವೆಂಬರ್ 1 ರ ಒಳಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ಪಾಲಿಕೆಗಳ ಚುನಾವಣೆ ಪೂರ್ವಸಿದ್ಧತೆ ಮಾಡಲಾಗುವುದು. ನೋಂದಣಿ ನಿಯಮಗಳನ್ನು ಯಾವ ರೀತಿ ರೂಪಿಸಬೇಕು ಎಂಬ ಬಗ್ಗೆ ಚುನಾವಣಾ ಆಯೋಗದ ಅಭಿಪ್ರಾಯ ಕೇಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆಯ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಚುನಾವಣೆಯ ಮತದಾನದ ಹಕ್ಕನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದ್ದೇವೆ. ಬ್ಲಾಕ್ ಅಧ್ಯಕ್ಷರು ಹಾಗೂ ಶಾಸಕರನ್ನು ಕರೆದು ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಡಿಯಾ ಒಕ್ಕೂಟ ಸಭೆಗೆ ತೆರಳುತ್ತಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇಂಡಿಯಾ ಒಕ್ಕೂಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿದೆ. ನಾನು ಇಲ್ಲಿ ಪ್ರತಿಭಟನೆ ಸಭೆ ಸಿದ್ಧತೆಯ ಉಸ್ತುವಾರಿ ನೋಡಬೇಕು. ಅದಕ್ಕಾಗಿ ಇಲ್ಲೇ ಇರುತ್ತೇನೆ ಎಂದು ಹೇಳಿದರು.
ಪ್ರತಿಯೊಂದು ಸಂದರ್ಭದಲ್ಲಿ ಬೆಂಗಳೂರು ಮತ್ತು ಕರ್ನಾಟಕ ಈ ದೇಶಕ್ಕೆ ಪ್ರಬಲ ಸಂದೇಶವನ್ನು ನೀಡಿವೆ. ಇಂಡಿಯಾ ಒಕ್ಕೂಟ ಸಹ ಜನ್ಮ ತಳೆದಿದ್ದು ಬೆಂಗಳೂರಿನಲ್ಲಿ. ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಐತಿಹಾಸಿಕ ಸ್ಥಳವಾದ ಸ್ವಾತಂತ್ರ ಉದ್ಯಾನದಲ್ಲಿ ಮತಗಳ್ಳತನದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು. ಸಚಿವರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಬೆಂಗಳೂರು ಹೊರತುಪಡಿಸಿ ಪ್ರತಿ ಜಿಲ್ಲೆಯಿಂದ 50 ಜನ ಕಾರ್ಯಕರ್ತರು ಹಾಗೂ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದೇವೆ ಎಂದು ತಿಳಿಸಿದರು.
ಮತಗಳ್ಳತನ ವಿಚಾರವನ್ನು ನಮ್ಮ ಹೈಕಮಾಂಡ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಮತದಾರರ ಹಕ್ಕಿನ ರಕ್ಷಣೆ ಮಾಡಬೇಕಾಗಿರುವುದು ರಾಜಕೀಯ ಪಕ್ಷಗಳ ಕರ್ತವ್ಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ನಮ್ಮ ಮೈತ್ರಿ ನಾಯಕ ಶಿಬು ಸೊರೇನ್ ಅವರ ನಿಧನವಾದ ಕಾರಣಕ್ಕೆ ಆಗಸ್ಟ್ 5ರಂದು ನಡೆಸಬೇಕಾಗಿದ್ದ ಪ್ರತಿಭಟನೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಯಿತು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 8ರ ಬೆಳಗ್ಗೆ 10.30ಕ್ಕೆ ಆಗಮಿಸಲಿದ್ದು, ಚುನಾವಣೆ ಸಮಯದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ದಾಖಲೆಗಳ ಸಮೇತ ಆಯೋಗಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಆಯೋಗಕ್ಕೆ ಯಾವ ದಾಖಲೆಗಳನ್ನು ನೀಡುತ್ತೀರಿ ಎಂದು ಕೇಳಿದಾಗ, ಈ ವಿಚಾರವನ್ನು ನಾನು ಬಹಿರಂಗಪಡಿಸುವುದಿಲ್ಲ. ಇದು ರಾಷ್ಟ್ರೀಯ ವಿಚಾರ ಆಗಿರುವ ಹಿನ್ನೆಲೆಯಲ್ಲಿ ನಮ್ಮ ನಾಯಕರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಡಿ ಕೆ ಶಿವಕುಮಾರ್ ಅವರು ತಿಳಿಸಿದರು.












Click it and Unblock the Notifications