ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನಿಸಿದ ಡಿಕೆಶಿ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಮೇ 20 ರಂದು ಮಧ್ಯಾಹ್ನ 12.30 ಗಂಟೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ, ಡಿಸಿಎಂ ಮತ್ತು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ದೇಶದಲ್ಲಿ ಸೋತಿದ್ದ ಕಾಂಗ್ರೆಸ್‌ಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಗೆಲುವು ದೊಡ್ಡ ರಿಲೀಫ್ ನೀಡಿದೆ. ಹೀಗಾಗಿ ಪ್ರಮಾಣ ವಚನ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ನೀಡಿದ್ದಾರೆ.

"ಕರ್ನಾಟಕದ ಮಹಾಜನತೆ ಕಾಂಗ್ರೆಸ್‌ಗೆ ಈ ಬಾರಿ ಆಶೀರ್ವಾದ ಮಾಡಿದ್ದೀರಾ, ಬದಲಾವಣೆ ತಂದಿದ್ದೀರಾ. ಮೇ 20 ರಂದು ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿಜ್ಞಾ ಸಮಾರಂಭ ನಡೆಯಲಿದ್ದು, ನೀವೆಲ್ಲರೂ 11 ಗಂಟೆಯ ಒಳಗೆ ಬಂದು ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು, ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಡಲು ಸಮಯವಿಲ್ಲ ಇದನ್ನೇ ಆಹ್ವಾನ ಪತ್ರಿಕೆ ಎಂದು ತಿಳಿದು, ತಾವೆಲ್ಲರೂ ಬರಬೇಕು," ಎಂದು ಮನವಿ ಮಾಡಿದ್ದಾರೆ.
ದೆಹಲಿಗೆ ತೆರಳಿದ ಸಿದ್ದರಾಮಯ್ಯ, ಡಿಕೆಶಿ
"ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ರಚನೆ ಚರ್ಚೆಗೆ ದೆಹಲಿಗೆ ಹೋಗುತ್ತಿದ್ದೇವೆ. ಆದ್ದರಿಂದ ಯಾರನ್ನೂ ಭೇಟಿ ಮಾಡಲು ಆಗಲಿಲ್ಲ, ನೀವೇ ನಮ್ಮ ಪರವಾಗಿ, ಸರ್ಕಾರದ ಪರವಾಗಿ ಆಗಮಿಸಿ ಬಂದು ಆಶೀರ್ವಾದ ಮಾಡಬೇಕು, ಸಮಾರಂಭ ಮುಗಿದ ಕೂಡಲೇ, ಎಲ್ಲಾ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ನಾವು ನೀಡಿದ ಗ್ಯಾರಂಟಿಗಳ ಬಗ್ಗೆ ಸಂದೇಶ ನೀಡುತ್ತೇವೆ" ಎಂದು ಡಿಕೆಶಿ ಹೇಳಿದ್ದಾರೆ.
ಅಖಂಡ ಕರ್ನಾಟಕ ಕಾತುರದಿಂದ ಕಾಯುತ್ತಿರುವ ಐತಿಹಾಸಿಕ ಘಳಿಗೆ ಬಂದಿದೆ. ನಾಳೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಎಲ್ಲರನ್ನೂ ಹೃದಯಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. pic.twitter.com/bZ0Wiic1uY
— DK Shivakumar (@DKShivakumar) May 19, 2023
20 ಸಚಿವರ ಪ್ರಮಾಣ ವಚನ?
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಯಲ್ಲಿ ಸುಮಾರು 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಡಿಸಿಎಂ ಹುದ್ದೆಗೆ ಹಲವು ಹಿರಿಯ ನಾಯಕರು ಬೇಡಿಕೆ ಇಟ್ಟಿದ್ದರೂ ಸದ್ಯ ಒಬ್ಬರೇ ಡಿಸಿಎಂ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದ್ದು, ಹಲವು ಹಿರಿಯ ಶಾಸಕರು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಲಿದ್ದು, ಅಲ್ಲಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಎಲ್ಲಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು, ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ಬಣಕ್ಕೆ ಹೆಚ್ಚಿನ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.












Click it and Unblock the Notifications