'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ಬಗ್ಗೆ ಫುಲ್ ಡಿಟೇಲ್ಸ್ ಕೊಟ್ಟ ಡಿಕೆ ಶಿವಕುಮಾರ್
ಬೆಂಗಳೂರು, ಜುಲೈ 23: ನಾಡಪ್ರಭು ಕೆಂಪೇಗೌಡರು ಹಾಕಿದ್ದ ಗಡಿಯನ್ನು ಮೀರಿ ಬೆಳೆಯುತ್ತಿರುವ ಬೆಂಗಳೂರಿನ ಸಮರ್ಪಕ ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಬಿಲ್ ತರಲಾಗಿದೆ. ಸುಮಾರು 70 ಸಾವಿರ ಸಲಹೆಗಳನ್ನು ಕ್ರೋಢಿಕರಿಸುವ ಮೂಲಕ ಅಂತಿಮವಾದ ಬಿಲ್‌ನ್ನ ಪ್ರಸ್ತುತಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿವರಿಸಿದರು.
ಮಂಗಳವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ನೌಕರರ ಸಂಘ ಹಾಗೂ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಳಗ, ಬೆಂಗಳೂರು ಜಲಮಂಡಳಿ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರೇಟರ್ ಬೆಂಗಳೂರು ಬಿಲ್
ಬೆಂಗಳೂರು ನಗರಾಭಿವೃದ್ದಿ ಸಚಿವನಾಗಿ, ನಗರವನ್ನು ಸಮಗ್ರ ಆಭಿವೃದ್ದಿ ಮಾಡುವ ನಿಟ್ಟಿನಲ್ಲಿ ಹಲವಾರು ಕನಸನ್ನ ಹೊಂದಿದ್ದೇನೆ. ಬ್ರಾಂಡ್ ಬೆಂಗಳೂರು ಯೋಜನೆಯ ಅಡಿಯಲ್ಲಿ ಸ್ವೀಕೃತಿಯಾಗಿರುವ ಸುಮಾರು 70 ಸಾವಿರಕ್ಕೂ ಹೆಚ್ಚು ಸಲಹೆಗಳನ್ನ ಕ್ರೋಢೀಕರಿಸಿ, ಬೆಂಗಳೂರು ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗ್ರೇಟರ್ ಬೆಂಗಳೂರು ಬಿಲ್ ನ್ನ ಸಿದ್ದಪಡಿಸಲಾಗಿದೆ.
ವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿಗೆ ಅಗತ್ಯ ಸೌಲಭ್ಯಗಳ ಅಳವಡಿಕೆಗೆ ಇದು ಇಂಬು ನೀಡಲಿದೆ. ಭವಿಷ್ಯಕ್ಕೆ ನಮ್ಮ ನಗರ ಸಜ್ಜಾಗಿರಬೇಕು ಎನ್ನುವ ದೂರದೃಷ್ಟಿಯನ್ನು ಇಲ್ಲಿ ಹೊಂದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
BWSSB ಕಾರ್ಯಕ್ಕೆ ಡಿಕೆಶಿ ಮೆಚ್ಚುಗೆ
ಬೆಂಗಳೂರು ಜಲಮಂಡಳಿ ಸಿಬ್ಬಂದಿಗಳು ಹಾಗೂ ನೌಕರರು ನಗರದಲ್ಲಿ ಎದುರಾಗಿದ್ದ ಬರಗಾಲವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದೀರಿ. ಚುನಾವಣೆಯ ಸಂಧರ್ಭದಲ್ಲಿ ದಿನಪೂರ್ತಿ ತೊಂದರೆ ಆಗದಂತೆ ಕೆಲಸ ಮಾಡಿದ್ದಾರೆ.ಕಷ್ಟಕಾಲದಲ್ಲಿ ಸುಮಾರು 1.40 ಕೋಟಿ ಜನರಿಗೆ ಸಮರ್ಪಕ ನೀರು ಒದಗಿಸುವ ಹಾಗೂ ಒಳಚರಂಡಿ ವ್ಯವಸ್ಥೆ ಮೂಲಕ ಸೇವೆ ನೀಡಿದ ರೀತಿ ಬಹಳ ಶ್ಲಾಘನೀಯ ಎಂದು BWSSB ಕಾರ್ಯ ಶ್ಲಾಘಿಸಿದರು.

ನೀರಿನ ದರದ ಬಗ್ಗೆ ಸದ್ಯದಲ್ಲೇ ಅಂತಿಮ ತೀರ್ಮಾನ
ಬೆಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಲಾಗಿಲ್ಲ. ಇದರಿಂದ ಜಲಮಂಡಳಿಯ ಆರ್ಥಿಕ ಸ್ಥಿತಿಯ ಮೇಲೆ ಬಹಳಷ್ಟು ಒತ್ತಡ ಉಂಟಾಗಿದೆ. ಇದರ ಬಗ್ಗೆ ಸದ್ಯದಲ್ಲೇ ಸರಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಕೆರೆಗಳ ರಕ್ಷಣೆಗೆ, ಅಭಿವೃದ್ಧಿಗೆ ಹೊಸ ಯೋಜನೆ
ಬೆಂಗಳೂರು ನಗರದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ನಾಡಪ್ರಭು ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ಕೆರೆಗಳನ್ನು ನಿರ್ಮಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಕೆರೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಮೂಲಕ ನಿಧಾನವಾಗಿ ಕಣ್ಮರೆಯಾಗುತ್ತಿವೆ. ನಗರ ಹಾಗೂ ಹೊರವಲಯ ವ್ಯಾಪ್ತಿಯಲ್ಲಿ ಇರುವಂತಹ ಕೆರೆಗಳನ್ನು ಉಳಿಸಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಕೆರೆ ಅಭಿವೃದ್ದಿ ಪ್ರಾಧಿಕಾರದ ಜೊತೆ ಸಭೆಯನ್ನು ನಡೆಸಿ, ನಗರ ಹಾಗೂ ಹೊರವಲಯ ವ್ಯಾಪ್ತಿಯಲ್ಲಿ ಇರುವಂತಹ ಕೆರೆಗಳನ್ನು ಬೆಂಗಳೂರು ಜಲಮಂಡಳಿ ವಶಕ್ಕೆ ತಗೆದುಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಇವುಗಳನ್ನ ಸಂಸ್ಕರಿಸಿದ ನೀರಿನಿಂದ ತುಂಬಿಸುವ ಮೂಲಕ ಕೆರೆಗಳನ್ನು ಉಳಿಸುವುದು ಹಾಗೂ ಅಂತರ್ಜಲವನ್ನು ಅಭಿವೃದ್ದಿಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
BWSSB ಸಿಬ್ಬಂದಿ ನೇಮಕಾತಿಗೆ ಕ್ರಮ
ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲದೇ ಇರುವ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಜಲಮಂಡಳಿಯಲ್ಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಅಧಿವೇಶನ ಮುಗಿದ ನಂತರ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಿಬ್ಬಂದಿಗಳ ನೇಮಕಾತಿ ಹಾಗೂ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.
ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿಲ್ಲ
ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರು ನೀಡಿದ ಕೊಡುಗೆ ಎಲ್ಲರಿಗೂ ಸಲ್ಲುತ್ತದೆ. ಅವರು ಕಟ್ಟಿದ ನಗರವನ್ನ ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್, ಎಂಎಲ್‌ಸಿ ಎಸ್.ರವಿ, ಜಲಮಂಡಳಿಯ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.












Click it and Unblock the Notifications