ಸಿಬಿಐ ತನಿಖೆ ಸರಕಾರ ಏಕೆ ಬೇಡ ಎನ್ನುತ್ತಿದೆ ಎಂದರೆ...
ಬೆಂಗಳೂರು, ಮಾ. 19 : ಕೋಲಾರದ ಮಾಜಿ ಜಿಲ್ಲಾಧಿಕಾರಿ ಡಿ.ಕೆ. ರವಿಯವರ ಸಾವಿನ ಪ್ರಕರಣವನ್ನು ಸಿಐಡಿ ಬದಲು ಸಿಬಿಐಗೆ ಒಪ್ಪಿಸಬೇಕೆಂಬ ಕೂಗು ರಾಜ್ಯವನ್ನು ದಾಟಿ ದೆಹಲಿಯನ್ನೂ ಮುಟ್ಟಿದೆ. ಸಿಬಿಐ ತನಿಖೆಗೆ ರಾಜ್ಯ ಕಾಂಗ್ರೆಸ್ ಸರಕಾರ ಏಕೆ ಹಿಂದೇಟು ಹಾಕುತ್ತಿದೆ ಎಂಬುದು ಚಿದಂಬರ ರಹಸ್ಯವಾಗೇನೂ ಉಳಿದಿಲ್ಲ. ರಾಜ್ಯ ಒಪ್ಪಿದರೆ ಸಿಐಡಿ ತನಿಖೆಗೂ ಸೈ ಎಂದು ಕೇಂದ್ರ ಬಿಜೆಪಿ ಸರಕಾರ ತನ್ನ ಇಂಗಿತ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಏಕೆ ಹಿಂದೇಟು ಹಾಕುತ್ತಿದೆ? : ಕಾಂಗ್ರೆಸ್‌ನ ಒಂದು ಬಣ ಸಿಬಿಐ ತನಿಖೆ ಏಕಾಗಬಾರದು ಎಂದು ತನ್ನ ಸರಕಾರವನ್ನೇ ಪ್ರಶ್ನಿಸುತ್ತಿದ್ದರೆ, ಮತ್ತೊಂದು 'ಪ್ರಭಾವಿ' ಮಂತ್ರಿಗಳ ಬಣ 'ರವಿ ವೈಯಕ್ತಿಕ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂಬ ಮಂತ್ರವನ್ನೇ ಪಠಿಸುತ್ತಿದ್ದು, ಸಿಐಡಿನೇ ಸಾಕು ಎಂದು ಪಟ್ಟು ಹಿಡಿದು ಕೂತಿದೆ. ಸಾಕ್ಷ್ಯ ನಾಶ ಮಾಡಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ಸರಕಾರ ನಡೆಸುತ್ತಿದೆ ಎಂಬ ಆರೋಪವನ್ನೂ ಸರಕಾರ ಎದುರಿಸುತ್ತಿದೆ. ಆ ವೈಯಕ್ತಿಕ ಕಾರಣಗಳೇನು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೂ, ಯಾರೂ ಬಾಯಿಬಿಡುತ್ತಿಲ್ಲ.
ಒಂದು ವೇಳೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ, ವೈಯಕ್ತಿಕ ಕಾರಣಗಳನ್ನೂ ಮೀರಿ ಎಲ್ಲ ಕೋನಗಳಿಂದ ತನಿಖೆ ನಡೆಸುವ ತಾಕತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ಗೆ ಇದೆ ಮತ್ತು ಇದು ಒಲ್ಲದ ಹಗರಣಗಳನ್ನೆಲ್ಲ ಬಯಲಿಗೆಳೆಯಲಿದೆ ಎಂಬ ಆತಂಕ ಮನೆಮಾಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ವಿರೋಧ ಪಕ್ಷ, ಅಭಿಮಾನಿಗಳು, ರವಿ ಕುಟುಂಬದವರು, ಸೋಷಿಯಲ್ ಮೀಡಿಯಾ ಒತ್ತಡಕ್ಕೆ ರಾಜ್ಯ ಸರಕಾರ ಮಣಿಯುತ್ತಾ? [ಸಿಐಡಿ ತನಿಖೆ ಎತ್ತ ಸಾಗಿದೆ? ಯಾರು ಟಾರ್ಗೆಟ್?]

ಸಿಬಿಐನಿಂದ ಏನು ಸಾಧ್ಯ? : ರವಿ ಸಾವಿನ ಹಿಂದಿನ ಮರ್ಮವನ್ನು ಎಲ್ಲ ಕೋನಗಳಿಂದ ಸಿಬಿಐ ಬಗೆಯುವುದರಲ್ಲಿ, ಪ್ರಕರಣದ ಬುಡಕ್ಕೆ ಕೈಹಾಕುವುದರಲ್ಲಿ ಸಂದೇಹವೇ ಇಲ್ಲ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ರವಿ ಏನೇನು ಅಡೆತಡೆ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂಬುದು ಕೂಡ ಸಿಬಿಐ ತನಿಖೆಯಿಂದ ಬಯಲಿಗೆ ಬರಲಿದೆ. ತನಿಖೆ ಶುರುವಾದರೆ ಅನೇಕ ರಾಜಕಾರಣಿಗಳು, ಅಧಿಕಾರಿಗಳ ಬಂಡವಾಳ ಬಯಲಾಗುವ ಸಾಧ್ಯತೆಯೂ ಇದೆ.
ಸಾವಿನ ಹಿಂದಿನ ಕಾರಣ ತಿಳಿಯಲು ವಿಚಾರಣೆಗೆ ಮಂತ್ರಿಗಳನ್ನೇ ಸೇರಿ ಯಾರನ್ನು ಬೇಕಾದರೂ ಕರೆಯಿಸಿಕೊಳ್ಳುವ ಅಸಾಧಾರಣ ಅಧಿಕಾರ ಸಿಬಿಐಗಿದೆ. ರವಿಯವರಿಗೆ ಭೂ, ಮರಳು ಮಾಫಿಯಾದಿಂದ ಬೆದರಿಕೆ ಇತ್ತು ಎಂದು ವಿರೋಧಪಕ್ಷದವರು ಮತ್ತು ಕುಟುಂಬದವರು ಆರೋಪಿಸಿದ್ದರೆ, ಸಾಕ್ಷ್ಯ ನಾಶ ಮಾಡಿ ತನಿಖೆಯ ದಾರಿ ತಪ್ಪಿಸಲು ಸರಕಾರ ಯತ್ನಿಸಿದೆ ಎಂದು ಕೂಡ ಆರೋಪಿಸಲಾಗಿದೆ. [ರವಿ ಸಾವು : ಗುರುವಾರದ ಬೆಳವಣಿಗೆಗಳು]
ದ್ವಂದ್ವದಲ್ಲಿ ಮುಳುಗಿರುವ ಸಿದ್ದರಾಮಯ್ಯ : ಈ ಪ್ರಕರಣ ಹಲವಾರು ಕಾರಣಗಳಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಸಾವಿನ ಹಿಂದಿನ ಕಾರಣವನ್ನು ಜನರಿಗೆ ಮೇಲಿಂದ ಮೇಲೆ ಮನವರಿಕೆ ಮಾಡಿಕೊಡುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದರೂ, ಕೆಲ ಸಂಪುಟ ಸಚಿವರನ್ನು ತೊಂದರೆಗೆ ಸಿಲುಕಿಸಬಹುದುದು ಎಂಬ ಸಂಗತಿ ಅವರನ್ನು ದ್ವಂದ್ವಕ್ಕೆ ತಳ್ಳಿದೆ. ಕೆಲ ರಾಜ್ಯ ಮತ್ತು ಕೇಂದ್ರ ಸಚಿವರ ಹೆಸರುಗಳು ಇದರಲ್ಲಿ ತೇಲಿಬಂದಿದೆ.
ಪ್ರಾಮಾಣಿಕ ಅಧಿಕಾರಿಯಾಗಿದ್ದ ರವಿ ಕೋಲಾರದಲ್ಲಿ ಭೂಗಳ್ಳರು ಮತ್ತು ಬೆಂಗಳೂರಿನಲ್ಲಿ ತೆರಿಗೆಗಳ್ಳರ ಮೇಲೆ ಮುಗಿಬಿದ್ದಿದ್ದು ಸರಕಾರಕ್ಕೂ ತಿಳಿದ ಸಂಗತಿ. ಈ ಹಿನ್ನೆಲೆಯಲ್ಲಿ ರವಿಯವರು ಕೊಲೆ ಬೆದರಿಕೆ ಕರೆಗಳನ್ನು ಕೂಡ ಎದುರಿಸಿದ್ದರು. ಅದರಲ್ಲಿ ಕೆಲ ರಾಜ್ಯ ಸರಕಾರದ ರಾಜಕಾರಣಿಗಳ ಹೆಸರುಗಳು ಕೂಡ ಕೇಳಿಬಂದಿರುವುದು ಸಿದ್ದರಾಮಯ್ಯನವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಸತ್ಯ ಸಂಗತಿ ಹೊರಬರಬೇಕಿದ್ದರೆ, ರಾಜ್ಯ ಸರಕಾರದ ಅಧೀನದಲ್ಲಿಯೇ ಇರುವ ಸಿಐಡಿಗೆ ತನಿಖೆಯನ್ನು ವಹಿಸುವ ಬದಲು ಸಿಬಿಐಗೇ ಒದಗಿಸುವುದು ಸಿದ್ದರಾಮಯ್ಯನವರಿಗೆ ಕ್ಷೇಮ.











Click it and Unblock the Notifications