Bannerghatta: ಬಿಸಿಲ ಬಿಸಿ ತಣಿಸಲು ಲಾಲಿಪಾಪ್, ಐಸ್‌ಕ್ರೀಮ್ ತಿಂದ ಬನ್ನೇರುಘಟ್ಟ ಪ್ರಾಣಿಗಳು
ಬೆಂಗಳೂರು ಏಪ್ರಿಲ್ 6: ಕೈಯಲ್ಲಿ ಲಾಲಿಪಾಪ್, ಬಾಯಲ್ಲಿ ಐಸ್‌ಕ್ರೀಮ್, ಒಂದು ಬಾರಿ ಕಚ್ಚಿ ಮತ್ತೊಂದು ಬಾರಿ ನಾಲಿಗೆಗೆ ಸವರಿಕೊಳ್ಳುತ್ತಾ ಬೇಸಿಗೆ ಬಿಸಿಲು ತಣಿಸುವುದರಲ್ಲಿ ಇರುವ ಆನಂದ ಬೇರೊಂದರಲ್ಲಿ ಇಲ್ಲ. ಹೀಗೆ ಹಣ್ಣಿನ ಹಾಗೂ ತರಕಾರಿಗಳ ಐಸ್‌ಕ್ರೀಮ್ ತಿಂತಾಯಿರೋದು ಮನುಷ್ಯರಲ್ಲ ಬದಲಿಗೆ ಪ್ರಾಣಿಗಳು.
ಹೌದು.. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಬಿಸಿಲಿನ ಬಿಸಿ ತಟ್ಟದಿರಲು ವಿನೂತನ ಯೋಜನೆಯನ್ನು ಮಾಡಲಾಗಿದೆ. ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ಬಿಸಿಲಿನ ತಾಪ ಮತ್ತು ಬಾಯಾಕರಿಗೆಯಿಂದ ರಕ್ಷಿಸಲು ಉದ್ಯಾನವನದ ಸಿಬ್ಬಂದಿ ತಂಪಾದ ಆಹಾರ ನೀಡುತ್ತಿದ್ದಾರೆ.

ಜೊತೆಗೆ ಪ್ರಾಣಿಗಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ಆಹ್ಲಾದಕರ ವಾತಾವರಣ ಸೃಷ್ಟಿಸಲಾಗಿದೆ. ಬನ್ನೇರುಘಟ್ಟದ ಸುತ್ತಮುತ್ತ ಉಷ್ಣಾಂಶ 36-38 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಬಿಸಿಲಿನ ಝಳಕ್ಕೆ ಉದ್ಯಾನದ ಪ್ರಾಣಿಗಳು ಹೈರಾಣಾಗಿವೆ. ಉದ್ಯಾನದ ಪ್ರಾಣಿಗಳನ್ನು ಈ ತಾಪಮಾನದಿಂದ ರಕ್ಷಿಸಲು ಜಿಂಕೆ, ಮಂಗಗಳು ಹಾಗೂ ಕರಡಿಗಳಿಗೆ ವಿಶೇಷ ಪೌಷ್ಟಿಕ ಆಹಾರ ತಯಾರಿಸಿ ನೀಡಲಾಗುತ್ತಿದೆ.
ಎಲ್ಲ ಬಗೆಯ ಹಣ್ಣ, ತರಕಾರಿ ಬಳಸಿ ಲಾಲಿಪಾಪ್ ಮತ್ತು ಐಸ್‌ಕ್ಯಾಂಡಿ ರೂಪದಲ್ಲಿ ಹೊಸ ಬಗೆಯ ಆಹಾಯವನ್ನು ಪ್ರಾಣಿಗಳಿಗೆ ನೀಡಲಾಗುತ್ತಿದೆ. ಹೊಸ ರೂಪದ, ವಿಶಿಷ್ಟ ರುಚಿಯ ಹಣ್ಣಿನ ಐಸ್‌ಕ್ಯಾಂಡಿಗಳಿಗಂತೂ ಪ್ರಾಣಿಗಳು ಮಾರುಹೋಗಿ ಖುಷಿಯಿಂದ ಆಹಾರ ಸ್ವೀಕರಿಸುತ್ತಿವೆ.

ಪ್ರಾಣಿಗಳು ಬೇಸಿಗೆಯಲ್ಲಿ ತಂಪಾದ ವಾತಾವರಣ ಬಯಸುತ್ತವೆ. ಹಾಗಾಗಿ ಉದ್ಯಾನದಲ್ಲಿ ಹನಿ ನೀರಾವರಿ ಮೂಲಕ ನೀರು ಸಿಂಪಡಿಸಲಾಗುತ್ತಿದೆ. ಕೆಲವು ಪ್ರಾಣಿಗಳು ಕೆಸರಿನಲ್ಲಿ ಇರಲು ಇಚ್ಚಿಸುತ್ತವೆ. ಅದಕ್ಕಾಗಿ ಅಲ್ಲಲ್ಲಿ ಕೆಸರು ಮತ್ತು ನೀರಿನ ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಸದಾ ನೀರು ತುಂಬಿರುವಂತೆ ನೋಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಮಯ ಪ್ರಾಣಿಗಳು ನೀರಿನಲ್ಲಿ ಕಳೆಯುತ್ತಿವೆ ಎಂದು ಜೀವಶಾಸ್ತ್ರಜ್ಞೆ ಐಶ್ವರ್ಯ ಹೇಳಿದರು.
ಬನ್ನೇರುಘಟ್ಟ ಉದ್ಯಾನವನದಲ್ಲಿ ನೀರಿನ ಸಮಸ್ಯೆ ಇದಿಯೇ?
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸುಮಾರು 99 ಜಾತಿಗಳು ಮತ್ತು 2,300 ಕ್ಕೂ ಹೆಚ್ಚು ಪ್ರಾಣಿಗಳು ನೆಲೆಸಿವೆ. ಬಿಬಿಪಿ ಎಂಟು ಕೆರೆಗಳನ್ನು ಹೊಂದಿದೆ. ಬೇಸಿಗೆಯಲ್ಲಿ, ಉದ್ಯಾನದಾದ್ಯಂತ ವಿವಿಧ ಪ್ರದೇಶಗಳಿಗೆ ಕೆರೆಗಳಿಂದ ನೀರು ಸರಬರಾಜು ಮಾಡಲು ಟ್ಯಾಂಕರ್ಗಳನ್ನು ಬಳಸಲಾಗುತ್ತದೆ. ಇಲ್ಲಿಯವರೆಗೆ ನಾವು ಹೊರಗಿನಿಂದ ನೀರನ್ನು ಖರೀದಿಸಿಲ್ಲ. ಈ ವರ್ಷವೂ ನಮ್ಮ ಬಳಿ ಇರುವ ಜಲಮೂಲಗಳಲ್ಲೇ ನಿರ್ವಹಣೆ ಮಾಡುತ್ತೇವೆ ಎಂದು ಎಂದು ಶ್ರೀ ಸೇನ್ ಹೇಳಿದ್ದಾರೆ ಎಂದು ದಿ ಹಿಂದೂ ವೆಬ್ ಸೈಟ್ ವರದಿ ಮಾಡಿದೆ.












Click it and Unblock the Notifications