Namma Metro: ಇಂದು ಬೆಳ್ಳಂಬೆಳಗ್ಗೆ ಕೈ ಕೊಟ್ಟ ಮೆಟ್ರೋ, ಸಂಚಾರ ವ್ಯತ್ಯಯ
ಬೆಂಗಳೂರು, ಮೇ 23: ಬೆಂಗಳೂರು ನಮ್ಮ ಮೆಟ್ರೋ ಸೇವೆಯು ಎಂದಿನಂತೆ ಇಂದು ಶುಕ್ರವಾರವು (ಮೇ 23) ಸಹ ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಮೆಟ್ರೋ ನೇರಳೆ ಮಾರ್ಗದಲ್ಲಿ ಬೆಳ್ಳಂಬೆಳಗ್ಗೆ ರೈಲು ಸಂಚಾರಕ್ಕೆ ತೊಂದರೆ ಆಗಿದೆ. ಇದು ಪ್ರಯಾಣಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ನಿಗಮ (BMRCL) ಅಧಿಕೃತವಾಗಿ ಮಾಹಿತಿ ನೀಡಿದ್ದು, ವಿಷಾಧಿಸಿದೆ.
ಚಲಘಟ್ಟದಿಂದ ವೈಟ್‌ಫಿಲ್ಡ್ (ಕಾಡುಗೋಡಿ) ಸಂಪರ್ಕಿಸುವ ನೇರಳೆ ಮಾರ್ಗದಲ್ಲಿ ಶುಕ್ರವಾರ ಮೆಟ್ರೋ ರೈಲು ಸಂಚಾರದ ವೇಳೆ ತಾಂತ್ರಿಕ ದೋಷ ಕಂಡು ಬಂದಿದೆ. ಇದರಿಂದ ಮೆಟ್ರೋ ಓಡಾಟದಲ್ಲಿ ತೊಂದರೆ ಆಗಿದ್ದು, ಪ್ರಯಾಣಿಕರು ಸರಿಯಾದ ಸಮಯಕ್ಕೆ ಗಮ್ಯ ಸ್ಥಳಕ್ಕೆ ಹೋಗಲಾಗದೇ ಪರದಾಡಿದ ಘಟನೆ ನಡೆಯಿತು.

ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ 5.00 ಗಂಟೆಯಿಂದ ಹೊರಡಬೇಕಿದ್ದ ಮೆಟ್ರೋ ರೈಲು ಸದರಿ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತಿಳಿಸಿದೆ. ತಜ್ಞರು ಹಾಗೂ ಅಧಿಕಾರಿಗಳ ಶೀಘ್ರವೇ ದೋಷ ಸರಿಪಡಿಸಲಿದ್ದಾರೆ. ಅದಾದ ಬಳಿಕವೇ ಎಂದಿನಂತೆ ಸೇವೆ ಆರಂಭವಾಗಲಿದೆ ಎಂದು ಸಾರ್ವಜನಿಕ ಸಂಪರ್ಕಾದಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಲ್ಲಘಟ್ಟವರೆಗೆ ಮೆಟ್ರೋ ಸಂಚಾರ ಇದೆ
ನೇರಳೆ ಮಾರ್ಗದ ವೈಟ್‌ಫಿಲ್ಡ್ ಭಾಗದಲ್ಲಿ ಸೇವೆ ಅಡಚರಣೆ ಆಗಿದೆ. ಆದ್ದರಿಂದ ವೈಟ್‌ಫಿಲ್ಡ್ ಬದಲಾಗಿ ಉಜ್ವಾಲಾ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ನೇರಳೆ ಮಾರ್ಗದಲ್ಲಿ ರೈಲುಗಳು ಸಂಚರಿಸುತ್ತವೆ. ಸದ್ಯ ಪ್ರಯಾಣಿಕರಿಗೆ ಆದ ತೊಂದರೆಗೆ BMRCL ವಿಷಾಧಿಸುತ್ತದೆ. ದಯಮಾಡಿ ಸಹಕರಿಸುವಂತೆ ನಿಗಮ ಅಧಿಕಾರಿಗಳು ಕೋರಿದ್ದಾರೆ.
ಅದಲ್ಲದೇ ರೇಷ್ಮೆ ಸಂಸ್ಥೆಯಿಂದ ಮಾದಾವರ ವರೆಗಿನ ಮೆಟ್ರೋ ಹಸಿರು ಮಾರ್ಗದಲ್ಲಿ ಯಾವುದೇ ತೊಂದರೆ ಇಲ್ಲ. ಈ ಮಾರ್ಗದಲ್ಲಿ ಎಂದಿನಂತೆ ಸೇವೆ ಇರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications