ರಸ್ತೆಗುಂಡಿಯಲ್ಲಿ ಬಿದ್ದು ಪರದಾಡಿ ಅಂಗವಿಕಲ ಮಹಿಳೆ: ವಿಡಿಯೋಗೆ ಜನಾಕ್ರೋಶ!
ಬೆಂಗಳೂರು ಮಳೆ ಹಾಗೂ ರಸ್ತೆಗುಂಡಿಗಳಿಂದ ಭಾರಿ ಅವಾಂತರವೇ ಸೃಷ್ಟಿಯಾಗುತ್ತಿದೆ. ಇದೀಗ ಬೆಂಗಳೂರ ರಸ್ತೆಗುಂಡಿಯಲ್ಲಿ ಬಿದ್ದ ಅಂಗವಿಕಲ ಮಹಿಳೆಯೊಬ್ಬರು ಪರದಾಡಿರುವ ಹೃದಯ ವಿದ್ರಾವಕ ದೃಶ್ಯ ವೈರಲ್ ಆಗಿದೆ. ಬೆಂಗಳೂರಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಮಳೆ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ವಿಫಲವಾಗಿದೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಜೋರಾಗಿಯೇ ಇದೆ. ಆದರೆ, ಕಳೆದ ತಿಂಗಳಷ್ಟೇ ಬಿಬಿಎಂಪಿ ನಗರದಾದ್ಯಂತ ಹಾಕಿದ್ದ ಟಾರ್ (ಡಾಂಬರು) ಕಿತ್ತೊಕೊಂಡು ಬಂದಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರನ್ನು ಸ್ವರ್ಗ ಮಾಡುತ್ತೇವೆ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದಿದ್ದರು. ಆದರೆ, ನಡೆದಾಡು ಹಾಗೂ ವಾಹನ ಸಹ ಚಲಾಯಿಸದ ಪರಿಸ್ಥಿತಿಗೆ ಈ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಬಿಬಿಎಂಪಿ ಮಾಡಿದೆ ಎನ್ನುವ ಆಕ್ರೋಶ ಜನರಿಂದ ವ್ಯಕ್ತವಾಗುತ್ತಿದೆ.

ರಸ್ತೆಗುಂಡಿಯಲ್ಲಿ ಬಿದ್ದ ಅಂಗವಿಕಲ ಮಹಿಳೆ: ಬೆಂಗಳೂರಿನ ರಸ್ತೆಯೊಂದರಲ್ಲಿ ಹೋಗುವ ಸಂದರ್ಭದಲ್ಲಿ ಮಳೆ ನೀರು ನಿಂತ ರಸ್ತೆಗುಂಡಿಯಲ್ಲಿ ಅಂಗವಿಕಲ ಮಹಿಳೆಯೊಬ್ಬರು ಬಿದ್ದು ನೋವು ಅನುಭವಿಸಿದ್ದಾರೆ. ಮಳೆಯಿಂದ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳು ಕೆರೆಯಂತೆ ಬದಲಾಗಿದ್ದು, ಈ ರಸ್ತೆಯಲ್ಲೇ ಮಹಿಳೆ ಬಿದಿದ್ದಾರೆ. ದ್ವಿಚಕ್ರ ವಾಹನದಲ್ಲಿ ಹೋಗುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಟ್ವೀಟ್ ಮಾಡಿ ಟೀಕೆ ಮಾಡಿದ ಜೆಡಿಎಸ್: ಇನ್ನು ಈ ಸಂಬಂಧ ಜೆಡಿಎಸ್ ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ತರಾಟೆಗೆ ತೆಗೆದುಕೊಂಡಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಸ್ವಾಗತ. ಅಂಗವಿಕಲ ಮಹಿಳೆಯೊಬ್ಬರು ರಸ್ತೆಗುಂಡಿ ಹಾಗೂ ಮಳೆ ನೀರಿನಲ್ಲಿ ಬಿದ್ದು, ಸಂಕಷ್ಟ ಅನುಭವಿಸಿದ್ದಾರೆ. ಬೆಂಗಳೂರು ರಸ್ತೆಗುಂಡಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ಇದು ಸ್ವರ್ಗದಲ್ಲಿನ ದೃಶ್ಯ ಎಂದು ಚಾಟಿ ಬೀಸಿದೆ.
ನಮ್ಮದು ದೂರದೃಷ್ಟಿಯ ಆಡಳಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತಿದ್ದಾರೆ. ನಗರದಲ್ಲಿ ಕುಸಿಯುತ್ತಿರುವ ಮೂಲಸೌರ್ಯವೇ ಎಲ್ಲವನ್ನೂ ಹೇಳುತ್ತಿವೆ. ಬೆಂಗಳೂರಿನ ರಸ್ತೆಗಳನ್ನು ಸಾವಿನ ಬಲೆಯಾಗಿ ಬದಲಾಯಿಸುತ್ತಿರುವ ಬಿಬಿಎಂಪಿಯ ಕಾರ್ಯವೈಖರಿಗೆ (ಪಾಂಡಿತ್ಯಕ್ಕೆ) ಸಾಟಿಯೇ ಇಲ್ಲ ಎಂದು ಸಹ ಜೆಡಿಎಸ್ ವ್ಯಂಗ್ಯವಾಡಿದೆ.
ಬೆಂಗಳೂರಿನಲ್ಲಿ ಬೇಜವಾಬ್ದಾರಿ ಆಡಳಿತ ಹಾಗೂ ನಿಮ್ಮ ನಿರ್ಲಕ್ಷ್ಯತನಕ್ಕೆ ಭೇಷ್ ಎನ್ನಲೇ ಬೇಕು ಎಂದು ಸಹ ಜೆಡಿಎಸ್ ಟ್ವೀಟ್ ಮಾಡಿದೆ. ಬೆಂಗಳೂರು ಮಳೆ ಹಾಗೂ ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸರಣಿ ಟ್ವೀಟ್‌ಗಳ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರಲ್ಲಿ ಮುಂದುವರಿದ ಮಳೆ: ಇನ್ನು ಬೆಂಗಳೂರಲ್ಲಿ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಬೆಂಗಳೂರಲ್ಲಿ ಕಳೆದ 10 ದಿನಗಳಿಂದ ಬಿಟ್ಟು ಬಿಡದಂತೆ ಮಳೆಯಾಗುತ್ತಿದೆ. ಸೋಮವಾರ ಮಳೆ ಅಲ್ಪ ಪ್ರಮಾಣದಲ್ಲಿ ಬಿಡುವು ಕೊಟ್ಟಿತ್ತು. ಆದರೆ, ಇದೀಗ ಮಳೆ ಮತ್ತೆ ಮುಂದುವರಿದಿದೆ. ಇದರಿಂದ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.












Click it and Unblock the Notifications