KIA: ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೊಸ ಸೌಲಭ್ಯ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಗುಡ್ ನ್ಯೂಸ್
Bengaluru Kempegowda Airport: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತಂತ್ರಜ್ಞಾನದ ಬಳಕೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಈಗ ದೇಶೀಯ ಪ್ರಯಾಣಿಕರಿಗೆ ಲಭ್ಯವಿರುವ 'ಡಿಜಿ ಯಾತ್ರೆ' ಸೌಲಭ್ಯವನ್ನು ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಿಸಲು ತಾಂತ್ರಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣದ ಪ್ರತಿ ಹಂತದಲ್ಲೂ (ಪ್ರವೇಶ ದ್ವಾರ, ಭದ್ರತಾ ತಪಾಸಣೆ ಮತ್ತು ಬೋರ್ಡಿಂಗ್) ತಮ್ಮ ಪಾಸ್‌ಪೋರ್ಟ್ ಅಥವಾ ಬೋರ್ಡಿಂಗ್ ಪಾಸ್ ಅನ್ನು ಪದೇ ಪದೇ ತೋರಿಸುವ ಅಗತ್ಯ ಇರುವುದಿಲ್ಲ. ಬದಲಿಗೆ, ಮುಖ ಗುರುತಿಸುವಿಕೆ (Facial Recognition) ತಂತ್ರಜ್ಞಾನದ ಮೂಲಕವೇ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತವೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್), ಇಂಡಿಗೋ ಏರ್‌ಲೈನ್ಸ್, ಡಿಜಿ ಯಾತ್ರೆ ಫೌಂಡೇಶನ್ ಮತ್ತು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ (IATA) ಜಂಟಿಯಾಗಿ ಈ ಪ್ರಯೋಗವನ್ನು ನಡೆಸಿವೆ. ಟಿಕೆಟ್ ಬುಕಿಂಗ್‌ನಿಂದ ಹಿಡಿದು ವಿಮಾನ ಹತ್ತುವವರೆಗೆ ಎಲ್ಲಿಯೂ ದಾಖಲೆಗಳ ಅಗತ್ಯವಿಲ್ಲದಂತೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದರಲ್ಲಿ Self-Sovereign Identity (SSI) ಎಂಬ ಸುಧಾರಿತ ತಂತ್ರಜ್ಞಾನ ಬಳಸಲಾಗಿದ್ದು, ಪ್ರಯಾಣಿಕರ ಮಾಹಿತಿಯು ಅತ್ಯಂತ ಸುರಕ್ಷಿತವಾಗಿರುತ್ತದೆ ಮತ್ತು ಪ್ರಯಾಣಿಕರ ನಿಯಂತ್ರಣದಲ್ಲೇ ಇರುತ್ತದೆ.
ಪ್ರಯಾಣಿಕರಿಗೆ ಆಗುವ ಲಾಭಗಳೇನು?
* ಸಮಯ ಉಳಿತಾಯ: ವಿಮಾನ ನಿಲ್ದಾಣದಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ತಪಾಸಣೆ ಪ್ರಕ್ರಿಯೆಗಳು ಕ್ಷಣಾರ್ಧದಲ್ಲಿ ಮುಗಿಯುತ್ತವೆ.
* ದಾಖಲೆಗಳನ್ನು ಪದೇ ಪದೇ ಪರ್ಸ್ ಅಥವಾ ಬ್ಯಾಗ್‌ನಿಂದ ತೆಗೆಯುವ ಕಿರಿಕಿರಿ ಇರುವುದಿಲ್ಲ.
* ಈ ವ್ಯವಸ್ಥೆಯು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದ್ದು, ಮುಂದಿನ ದಿನಗಳಲ್ಲಿ ವಿಶ್ವದ ಇತರ ಪ್ರಮುಖ ವಿಮಾನ ನಿಲ್ದಾಣಗಳಲ್ಲೂ ಇದೇ ಡಿಜಿಟಲ್ ಐಡಿಯನ್ನು ಬಳಸಿ ಪ್ರಯಾಣಿಸಬಹುದು.
ಇದು ಹೇಗೆ ಕೆಲಸ ಮಾಡುತ್ತದೆ?
ಪ್ರಯಾಣಿಕರು ತಮ್ಮ ಡಿಜಿಟಲ್ ಐಡಿಯನ್ನು ಒಮ್ಮೆ ಕ್ರಿಯೇಟ್ ಮಾಡಿಕೊಂಡರೆ, ವಿಮಾನ ನಿಲ್ದಾಣದ ಟಚ್ ಪಾಯಿಂಟ್‌ಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು ಅವರ ಮುಖವನ್ನು ಸ್ಕ್ಯಾನ್ ಮಾಡಿ ದಾಖಲೆಗಳನ್ನು ದೃಢೀಕರಿಸುತ್ತವೆ. ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಇಂತಹ ಅತ್ಯಾಧುನಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರೀಕ್ಷಿಸಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರು ಕೆಐಎ ಪಾತ್ರವಾಗಿದೆ. ಸದ್ಯಕ್ಕೆ ಇದು ತಾಂತ್ರಿಕ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications