Bengaluru Dengue spike: ಒಂದೇ ತಿಂಗಳಲ್ಲಿ ಡೆಂಗ್ಯೂ ಉಲ್ಬಣ, ಕೇಸ್ ಎಷ್ಟು? ವಲಯವಾರು ಮಾಹಿತಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 13: ರಾಜಧಾನಿ ಬೆಂಗಳೂರಿನ ಮಂದಿಗೆ ಒಂದಲ್ಲಾ ಒಂದು ಆರೋಗ್ಯ ತಲೆನೋವು ಕಾಡುತ್ತಲೇ ಇರುತ್ತದೆ. ಕೆಲವು ತಿಂಗಳ ಹಿಂದಷ್ಟೇ ವಿಪರಿತವಾಗಿ ಕಾಡಿದ್ದ ಡೆಂಗ್ಯೂ (Dengue cases spike) ಕಾಯಿಲೆ ಮತ್ತೆ ನಗರದಲ್ಲಿ ಉಲ್ಬಣಗೊಂಡಿದೆ. ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಕಳೆದ ಒಂದೇ ತಿಂಗಳಲ್ಲಿ ಸಾವಿರಾರು ಡೆಂಗ್ಯೂ ಪ್ರಕರಣ ವರದಿ ಆಗಿವೆ. ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಚಂಡಮಾರುತದ ಪ್ರಭಾವ, ಆಗಾಗ ಮಳೆ, ತಂಪು ವಾತಾವರಣದಂತಹ ಕಾರಣಗಳಿಂದಾಗಿ ಉಂಟಾದ ಅಧಿಕ ಸೊಳ್ಳೆ ಉತ್ಪತ್ತಿಯು ಈ ರೀತಿ ಏಕಾಎಕಿ ಡೆಂಗ್ಯೂ ಏರಿಕೆಗೆ ಕಾರಣವಾಗಿದೆ ಎಂದು 'ಕನ್ನಡಪ್ರಭ' ವರದಿ ಮಾಡಿದೆ.

ನಗರದಲ್ಲಿ ಕೇವಲ ಒಂದೇ ತಿಂಗಳಲ್ಲಿ 1,400ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿ ಆಗಿವೆ. ಕಳೆದ ತಿಂಗಳು ನವೆಂಬರ್ 1ರಿಂದ ಡಿಸೆಂಬರ್ 8ರವರೆಗೆ ನಗರದಲ್ಲಿ ಒಟ್ಟು 7,600 ಕ್ಕೂ ಹೆಚ್ಚು ಮಂದಿಯಲ್ಲಿ ಡೆಂಗ್ಯೂ ಕಾಯಿಲೆ ಲಕ್ಷಣಗಳು ಕಂಡು ಬಂದವು. ಈ ವೇಳೆ ಅವರನ್ನು ಪರಿಶೀಲನೆಗೆ ಒಳಪಡಿಸಿದಾಗ 1,460ಕ್ಕೂ ಅಧಿಕ ಮಂದಿಗೆ ಡೆಂಗ್ಯೂ ಕಾಯಿಲೆ ಇರುವುದು ದೃಢಪಟ್ಟಿದೆ..
ನಾಗರಿಕರು ಆರೋಗ್ಯ ಕಾಳಜಿ ವಹಿಸಿ
ಒಂದೇ ತಿಂಗಳಲ್ಲಿ ಡೆಂಗ್ಯೂ ಪ್ರಕರಣ ಏರಿಕೆ ಆಗುವ ಮೂಲಕ ನಗರದ ಜನರಲ್ಲಿ ಅನಾರೋಗ್ಯ ಆತಂಕ ಸೃಷ್ಟಿ ಮಾಡಿದೆ. ತಂಪು ವಾತಾವರಣ ಜೊತೆಗೆ ಬಿಸಿಲು, ಆಗಾಗ ಮಳೆಯಂತಹ ವಾತಾವರಣದಿಂದ ಸೊಳ್ಳೆಗಳ ವಿಪರೀತವಾಗಿ ಹೆಚ್ಚಾಗಿವೆ. ಇದರಿಂದ ಡೆಂಗ್ಯೂ ಪ್ರಕರಣ ಕಂಡು ಬರುತ್ತಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ನಗರದ ನಾಗರಿಕರು ಅರೋಗ್ಯ ಕಾಳಜಿ ವಹಿಸುವುದು ಅಗತ್ಯವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ವಲಯವಾರು ಮಾಹಿತಿ ನೋಡುವುದಾದರೆ, ಎಂಟು ವಲಯಗಳ ಪೈಕಿ ಬೆಂಗಳೂರು ಪೂರ್ವ ವಲಯದಲ್ಲಿ ಅತ್ಯಧಿಕ ಡೆಂಗ್ಯೂ ಕೇಸಗಳು ದಾಖಲಾಗಿದೆ. ಇಲ್ಲಿ 343 ಪ್ರಕರಣಗಳು ಪತ್ತೆ ಆಗಿವೆ.
ಬಿಬಿಎಂಪಿ ವಲಯವಾರು ಡೆಂಗ್ಯೂ ಕೇಸ್ ಮಾಹಿತಿ
ಉಳಿದಂತೆ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದಲ್ಲಿ 180, ದಕ್ಷಿಣ ವಲಯ 299, ಪಶ್ಚಿಮ ವಲಯ 168, ಯಲಹಂಕ 144, ಮಹಾದೇವಪುರ 182, ರಾಜರಾಜೇಶ್ವರಿ ನಗರ 149 ಮತ್ತು ದಾಸರಹಳ್ಳಿ 03 ಡೆಂಗ್ಯೂ ಕೇಸುಗಳು ವರದಿ ಆಗಿದೆ. ಸದ್ಯ ಕಳೆದ ಒಂದು ತಿಂಗಳಲ್ಲಿ ಅತೀ ಕಡಿಮೆ ಪ್ರಕರಣಗಳು ವರದಿ ಆಗಿರುವುದು ದಾಸರಹಳ್ಳಿಯಲ್ಲಿ ಎಂದು ಬಿಬಿಎಂಪಿ ಆರೋಗ್ಯ ವರದಿ ತಿಳಿಸುತ್ತದೆ.
ಹೀಗೆ ಡೆಂಗ್ಯೂ ಆಗಲಿ, ಚಿಕೂನ್ ಗುನ್ಯದಂತೆ ಕಾಯಿಲೆಗಳು ಹೆಚ್ಚಾದಾಗ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಆಗಾಗ ಫಾಗಿಂಗ್ ಮಾಡುವುದು, ಮನೆ ಸುತ್ತಮುತ್ತ ನೀರು ನಿಲ್ಲದಂತೆ, ಕೊಳಚೆ ಇರದಂತೆ, ತುಂಡಾದ ಟೈರ್ ನಲ್ಲಿ, ತೆಂಗಿನ ಚಿಪ್ಪಿನಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ತಿಳಿಸಲಾಗುವುದು.
ಅಲ್ಲದೇ ರೋಗ ಕಾಣಸಿಕೊಂಡು ಸ್ಥಳದಿಂದ ಸುಮಾರು ನೂರು ಮೀಟರ್ ಅಂತರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುವುದು. ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡುವ ಜೊತೆಗೆ ನಿಗಾ ವಹಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications