ಬೆಂಗಳೂರಿಗರೇ ಎಚ್ಚರ! ಹೆಚ್ಚಾಯ್ತು ಡೆಂಗ್ಯೂ ಕೇಸ್
ಬೆಂಗಳೂರು, ಆಗಸ್ಟ್ 23: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ಸದ್ಯ ಕರ್ನಾಟಕದಲ್ಲಿ ಡೆಂಗ್ಯೂ ಸೋಂಕಿತರ ಪ್ರಕರಣಗಳು 23,163ಕ್ಕೆ ಏರಿಕೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು 10 ಸಾವಿರ ಗಡಿ ದಾಟಿದೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 199 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, 1182 ಕೇಸ್‌ಗಳು ಸಕ್ರಿಯವಾಗಿವೆ. ಮೂಲಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದರೆ ಬೆಂಗಳೂರಿನಲ್ಲೇ 10,511 ಡೆಂಗ್ಯೂ ಸೋಂಕಿತರಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಸತತವಾಗಿ ಸುರಿದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ಸ್ಪೆಷಲ್ ಟಾಸ್ಕ್ ನೀಡಿದ್ದರು. ಆದರೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿದೆ. ಬೆಂಗಳೂರಿನಲ್ಲಿ ಪ್ರತಿದಿನವೂ ಡೆಂಗ್ಯೂ ಕೇಸ್‌ಗಳು ಪತ್ತೆಯಾಗುತ್ತಿವೆ. ರಾಜಾಜಿನಗರ, ಮಹಾಲಕ್ಷ್ಮೀ ಬಡಾವಣೆ ಸೇರಿದಂತೆ ರಾಜಧಾನಿ ಕೆಲವು ಪ್ರದೇಶಗಳಲ್ಲಿ ಡೆಂಗ್ಯೂ ಹೆಚ್ಚಾಗತೊಡಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಡೆಂಗ್ಯೂ ತಡೆಗಟ್ಟುವಲ್ಲಿ ಆರೋಗ್ಯಾಧಿಕಾರಿಗಳು ವಿಫಲರಾಗಿದ್ದಾರಾ ಎನ್ನುವ ಅನುಮಾನಗಳೂ ವ್ಯಕ್ತವಾಗುತ್ತಿದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ 7 ವರ್ಷದ ಬಾಲಕ ಡೆಂಗ್ಯೂಗೆ ಬಲಿಯಾಗಿದ್ದಾನೆ. ಮೃತ ಬಾಲಕನಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬಾಲಕನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಉದ್ಯಾನನಗರಿ ಬೆಂಗಳೂರಿನಲ್ಲಿ ಡೆಂಗ್ಯೂ ಜೊತೆಗೆ ಕಳೆದ ವಾರದಿಂದ ಝಿಕಾ ವೈರಸ್ ಕೂಡ ತಾಂಡವವಾಡುತ್ತಿದೆ. ನಗರದ ಜಿಗಣಿ ಪ್ರದೇಶದಲ್ಲೇ ಎರಡು ವಾರಗಳಲ್ಲಿ ಒಟ್ಟು ಐದು ಝಿಕಾ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಸಿತ್ತು. ಇದರ ಜೊತೆ ಜೊತೆಗೆ ಡೆಂಗ್ಯೂ ಕೇಸ್‌ಗಳು ಕೂಡ ಏರುತ್ತಿರುವುದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದೆ.
ಡೆಂಗ್ಯೂ ಲಕ್ಷಣಗಳನ್ನು ನೋಡುವುದಾದರೆ.. ಸ್ನಾಯು ಮತ್ತು ಕೀಲು ನೋವು, ತೀವ್ರ ತಲೆನೋವು, ಅಧಿಕ ಜ್ವರ, ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ದದ್ದುಗಳು ಬರುವುದು, ವಾಕರಿಕೆ ಮತ್ತು ವಾಂತಿ ಬರುವುದು, ಗ್ರಂಥಿಗಳು ಊದಿಕೊಳ್ಳುವುದು. ಒಂದು ವೇಳೆ ನಿಮ್ಮಲ್ಲೂ ಈ ಲಕ್ಷಣಗಳು ಕಂಡು ಬಂದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಡೆಂಗ್ಯೂ ನಿಯಂತ್ರಣಕ್ಕೆ ನೀವೇನು ಮಾಡಬಹುದು?: ನಿಮ್ಮ ಮನೆಯ ಸುತ್ತ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ. ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಹೊತ್ತು ಸೊಳ್ಳೆ ಬತ್ತಿ ಹಚ್ಚಿರಿ ಅಥವಾ ಸೊಳ್ಳೆ ಪರದೆಯನ್ನು ಸುರಕ್ಷತೆಗೆ ಬಳಸಿಕೊಳ್ಳಬಹುದು.
ಕೈ, ಕಾಲಿಗೆ ಸೊಳ್ಳೆ ನಿವಾರಕ ಲೋಶನ್ ಅಥವಾ ತೆಂಗಿನ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ಡೆಂಗ್ಯೂ ಜ್ವರ ಬರದಂತೆ ತಡೆಯಬಹುದು ಎನ್ನುತ್ತಾರೆ ವೈದ್ಯರು. ಸಾಧ್ಯವಾದಷ್ಟು ಮೈ ತುಂಬಾ ಬಟ್ಟೆ ಧರಿಸಿ. ಡೆಂಗ್ಯೂ ಜ್ವರದ ಲಕ್ಷಣ ಕಂಡುಬಂದರೆ ಗಾಬರಿಯಾಗದೆ, ವೈದ್ಯರನ್ನು ಭೇಟಿ ಮಾಡಿ. ಅವರ ಸೂಚನೆಯನ್ನು ಸರಿಯಾಗಿ ಪಾಲಿಸಿದರೆ ಡೆಂಗ್ಯೂದಿಂದ ಶೀಘ್ರ ಗುಣಮುಖ ಆಗಬಹುದು.












Click it and Unblock the Notifications