ಬೆಂಗಳೂರಿನ ಈ ಕಟ್ಟಡಗಳಿಗೆ ಡಿಮ್ಯಾಂಡ್ ನೋಟೀಸ್ ಜಾರಿ, 7 ಕೋಟಿಗೂ ಹೆಚ್ಚು ಕಂದಾಯ ಪರಿಷ್ಕರಣೆ!
ಬೆಂಗಳೂರಿನಲ್ಲಿ ವಿವಿಧ ಕಟ್ಟಡಗಳಿಗೆ ಹಾಗೂ ಆಸ್ತಿದಾರರಿಗೆ ಮತ್ತೆ ಶಾಕ್ ನೀಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಈ ವರ್ಷದ ಪ್ರಾರಂಭದಿಂದಲೂ ಆಸ್ತಿ ತೆರಿಗೆ ಬಾಕಿ ಹಾಗೂ ಕಂದಾಯ ಪರಿಷ್ಕರಣೆಗೆ ಸ್ಥಳೀಯ ಆಡಳಿತವು ಮುಂದಾಗಿದೆ.
ಇದೀಗ ಪ್ರಾರಂಭದ ಹಂತವಾಗಿ ಇಂದಿರಾ ನಗರ 100 ಅಡಿ ರಸ್ತೆಯಲ್ಲಿ ಸ್ವತ್ತುಗಳ ಕಂದಾಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಸರ್ವೆ ನಡೆಸಿದ ಸ್ವತ್ತುಗಳಿಗೆ ನೋಟೀಸ್ ಜಾರಿ ಮಾಡಿರುವುದಾಗಿ ಹೇಳಲಾಗಿದೆ. ಅಂದಾಜು ರೂ. 7.00 ಕೋಟಿಗೂ ಅಧಿಕ ಮೊತ್ತದ ಕಂದಾಯ ಪರಿಷ್ಕರಣೆಗಾಗಿ 49 ಕಟ್ಟಡಗಳಿಗೆ ಡಿಮ್ಯಾಂಡ್ ನೋಟೀಸ್ ಜಾರಿ ಮಾಡಲಾಗಿದೆ.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 14-11-2025 ರಂದು ಇಂದಿರಾನಗರದ 100 ಅಡಿ ರಸ್ತೆಯಲ್ಲಿ ವಾಣಿಜ್ಯ ಕಟ್ಟಡಗಳ ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಸರ್ವೆ ನಡೆಸಿದ ಸ್ವತ್ತುಗಳಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದ್ದಾರೆ.
ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ದಿನಾಂಕ:14-11-2025 ರಂದು ನಡೆದ ಪರಿಶೀಲನೆ ಕಾರ್ಯದಲ್ಲಿ ಹಲವು ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೇಂದ್ರ ನಗರ ಪಾಲಿಕೆಯ ಎಲ್ಲಾ ಕಂದಾಯ ವಿಭಾಗಗಳ 9 ಕಂದಾಯ ಅಧಿಕಾರಿಗಳ ತಂಡದಿಂದ 120 ಕ್ಕೂ ಹೆಚ್ಚು ಸಿಬ್ಬಂದಿಗಳು 197 ಸ್ವತ್ತುಗಳ ಕಂದಾಯ ಪರಿಶೀಲನೆ ಕಾರ್ಯನಡೆಸಲಾಗಿದ್ದು, 147 ಕಂದಾಯ ಪರಿಶೀಲನೆ ಸರಿಯಾಗಿದ್ದು, 49 ಕಟ್ಟಡಗಳ ಆಸ್ತಿ ತೆರಿಗೆ ವ್ಯತ್ಯಾಸವಿರುವುದು ಈ ಸಂದರ್ಭದಲ್ಲಿ ದೃಢಪಟ್ಟಿದೆ.
ಜೀವನಭೀಮಾನಗರ ಕಂದಾಯ ವಿಭಾಗ ಹಾಗೂ ದೊಮ್ಮಲೂರಿನ ಕಂದಾಯ ವಿಭಾಗಗಳ ಸ್ವತ್ತುಗಳ ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಸರ್ವೆ ಕಾರ್ಯದಿಂದ ಒಟ್ಟು 7,21,79,000 ರೂ. ಗಳ (ರೂ.7.21 ಕೋಟಿ) ಬೇಡಿಕೆಯ ಮೊತ್ತ ಗುರುತಿಸಿ, ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ವಾಣಿಜ್ಯ ಸ್ವತ್ತುಗಳಿಗೆ ಕಾರಣ ಕೇಳಿ ನೋಟೀಸ್ ನೀಡಿದ ಬಳಿಕ 15 ದಿನಗಳ ಕಾಲಾವಧಿಯಲ್ಲಿ ಸ್ವತ್ತಿನ ಮಾಲೀಕರು ಹಿಂಬರಹ ನೀಡಬೇಕು. ಹಿಂಬರಹ ನೀಡುವ ಅಥವಾ ಯಾವುದೇ ಆಕ್ಷೇಪಣೆಗಳು ಇಲ್ಲದಿದ್ದರೆ ಅಂತಹವರಿಗೆ ಬೇಡಿಕೆ ನೋಟೀಸ್ (Demand Notice) ನೀಡಿ ಬಾಕಿ ಬರಬೇಕಿರುವ ತೆರಿಗೆಯನ್ನು ನಿಯಮಾನುಸಾರ ವಸೂಲಿ ಮಾಡಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೀವನ್ ಭೀಮಾ ನಗರ ಕಂದಾಯ ವಿಭಾಗ: ಜೀವನಭೀಮಾನಗರದ ವಾರ್ಡ್-80ರ 71 ಸ್ವತ್ತುಗಳ ಪೈಕಿ 51 ಸ್ವತ್ತುಗಳ ಕಂದಾಯ ಪಾವತಿ ಸರಿಯಾಗಿದ್ದು, 10 ಸ್ವತ್ತುಗಳು ಶೇ. 5 ಕ್ಕಿಂತ ಕಡಿಮೆ ಮೊತ್ತದ ವ್ಯತ್ಯಾಸವನ್ನು ಹೊಂದಿದ್ದು, ಉಳಿದ 10 ಸ್ವತ್ತುಗಳಿಗೆ 1,97,97,711 ರೂ. ಗಳ ಬೇಡಿಕೆಯ ಮೊತ್ತಕ್ಕೆ ನೋಟಿಸ್ ನೀಡಲಾಗಿದೆ.
ವಾರ್ಡ್ 88 ರ 57 ಸ್ವತ್ತುಗಳ ಪೈಕಿ 39 ಸ್ವತ್ತುಗಳ ಕಂದಾಯ ಪಾವತಿ ಮೊತ್ತ ಸರಿ ಇದ್ದು, 2 ಸ್ವತ್ತುಗಳು ಶೇ. 5 ಕ್ಕಿಂತ ಕಡಿಮೆ ಮೊತ್ತದ ವ್ಯತ್ಯಾಸವನ್ನು ಹೊಂದಿದ್ದು, ಉಳಿದ 16 ಸ್ವತ್ತುಗಳಿಗೆ 3,89,53,507 ರೂ. ಗಳ ಬೇಡಿಕೆಯ ಮೊತ್ತಕ್ಕೆ ನೋಟಿಸ್ ನೀಡಲಾಗಿದೆ.
ದೊಮ್ಮಲೂರು ಕಂದಾಯ ವಿಭಾಗ: ದೊಮ್ಮಲೂರಿನ ವಾರ್ಡ್- 89 ರ 15 ಸ್ವತ್ತುಗಳ ಪೈಕಿ 13 ಸ್ವತ್ತುಗಳ ಕಂದಾಯ ಪಾವತಿ ಸರಿಯಾಗಿದ್ದು, 01 ಸ್ವತ್ತು ಶೇ. 5 ಕ್ಕಿಂತ ಕಡಿಮೆ ಮೊತ್ತದ ವ್ಯತ್ಯಾಸವನ್ನು ಹೊಂದಿದ್ದು, ಉಳಿದ 2 ಸ್ವತ್ತುಗಳಿಗೆ 45,28,909 ರೂ. ಗಳ ಬೇಡಿಕೆಯ ಮೊತ್ತಕ್ಕೆ ನೋಟಿಸ್ ನೀಡಲಾಗಿದೆ .
ವಾರ್ಡ್ 112 ರ 54 ಸ್ವತ್ತುಗಳ ಪೈಕಿ 44 ಸ್ವತ್ತುಗಳ ಕಂದಾಯ ಪಾವತಿ ಮೊತ್ತ ಸರಿ ಇದ್ದು, 08 ಸ್ವತ್ತುಗಳಿಗೆ 88,98,873 ರೂ. ಗಳ ಬೇಡಿಕೆಯ ಮೊತ್ತಕ್ಕೆ ನೋಟಿಸ್ ನೀಡಲಾಗಿದೆ (ತಾಂತ್ರಿಕ ಸಮಸ್ಯೆಯಿಂದಾಗಿ 2 ಸ್ವತ್ತುಗಳಿಗೆ ನೋಟಿಸ್ ನೀಡಲಾಗಿಲ್ಲ).
ಸ್ವತ್ತುಗಳ ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಸರ್ವೆ ಕಾರ್ಯದಿಂದ ಒಟ್ಟು 7,21,79,000 ರೂ. ಗಳ ಬೇಡಿಕೆಯ ಮೊತ್ತವನ್ನು ಗುರುತಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಕಾರಣ ಕೇಳಿ ನೋಟಿಸ್ ಅವಧಿ ಮುಗಿದ ಬಳಿಕ, ಯಾವುದೇ ಆಕ್ಷೇಪಣೆಗಳಿಲ್ಲದ ಸ್ವತ್ತುಗಳಿಂದ ನಿಯಮಾನುಸಾರ ತೆರಿಗೆಯನ್ನು ವಸೂಲಿ ಮಾಡಲಾಗುವುದು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ಹಂತ-ಹಂತವಾಗಿ ಸ್ವತ್ತುಗಳ ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಸರ್ವೆ ಕಾರ್ಯ ಕೈಗೊಂಡು, ಸ್ವಯಂ ಘೋಷಣಾ ಅರ್ಜಿ ಮೂಲಕ ಪಾಲಿಕೆಗೆ ತಪ್ಪು ಮಾಹಿತಿ ನೀಡಿ ತೆರಿಗೆ ಪಾವತಿಸುತ್ತಿದ್ದವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.












Click it and Unblock the Notifications