Nagavara–Bagalur Cross Metro: ನಾಗವಾರ-ಬಾಗಲೂರು ಕ್ರಾಸ್ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಸಚಿವ ಗರಂ
ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲು ಕೈಗತ್ತಿಕೊಂಡಿರುವ ನೂತನ ಮೆಟ್ರೋ ಮಾರ್ಗದ ಕಾಮಗಾರಿ ವಿಳಂಬವಾಗಿದೆ. ಈ ಹಿನ್ನೆಲೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಂದು ಬೆಳಿಗ್ಗೆ ನಾಗವಾರದಿಂದ ಬಾಗಲೂರು ಕ್ರಾಸ್‌ವರೆಗಿನ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದ್ದಾರೆ. ಈ ಮಾರ್ಗದ ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಹೊಸ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಆರಂಭದಲ್ಲಿ ಈ ಕಾಮಗಾರಿ ವೇಗವಾಗಿ ನಡೆದು ಪಿಲ್ಲರ್‌ಗಳು ತಲೆ ಎತ್ತಿ ನಿಂತವು. ಆದರೆ ಇತ್ತೀಚೆಗೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗಿ, ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಇಲ್ಲಿನ ಫ್ಲೈಓವರ್ ಕೆಳಗಿನ ರಸ್ತೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನಗಳು ಕಿಲೋಮೀಟರ್‌ಗಟ್ಟಲೆ ನಿಲ್ಲುವ ಪರಿಸ್ಥಿತಿ ಇದೆ. ಈ ಹಿನ್ನೆಲೆ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಸಚಿವ ಕೃಷ್ಣಬೈರೇಗೌಡ ಅವರು ಸೂಚನೆ ನೀಡಿದ್ದಾರೆ.

ಪಿಲ್ಲರ್ ಹಾಕಲು ಎರಡು ವರ್ಷ
ಮೊದಲಿಗೆ ಮೆಟ್ರೋ ಕಾಮಗಾರಿ ವೀಕ್ಷಣೆ ಮಾಡಿದ ಅವರು, ಅಧಿಕಾರಿಗಳು ಒಂದು ಮೆಟ್ರೋ ಪಿಲ್ಲರ್ ಹಾಕಲು ಎರಡು ವರ್ಷ ತೆಗೆದುಕೊಂಡಿರುವ ವಿಚಾರ ತಿಳಿದು ಗರಂ ಆಗಿದ್ದಾರೆ. ಎರಡು ತಿಂಗಳಲ್ಲಿ ಆಗುವ ಕೆಲಸಕ್ಕೆ ಎರಡು ವರ್ಷ ಏಕೆ? ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ. ಮೆಟ್ರೋ ಕಾಮಗಾರಿ ಶೀಘ್ರ ಮುಗಿಸಲು ಇರುವ ಸಮಸ್ಯೆ ಏನು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಮಗಾರಿ ತಡವಾಗುತ್ತಿರುವ ಕಾರಣ ಜನರಿಗೆ ಸಮಸ್ಯೆಯಾಗಿದೆ. ಮೆಟ್ರೋ ಕಾಮಗಾರಿಯಿಂದ ರಸ್ತೆಯ ಗುಣಮಟ್ಟ ಕ್ಷೀಣಿಸುತ್ತಿದೆ. ಇದರ ಪರಿಣಾಮ ನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಜನ ಬೇಸತ್ತಿದ್ದಾರೆ. ಮೆಟ್ರೋ ಕಾಮಗಾರಿಗೆ ಬಳಸಿದ ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡದೆ, ಅಲ್ಲೇ ಎಸೆಯಲಾಗಿದೆ. ಇದರಿಂದಲೂ ಜನರಿಗೆ ನಿತ್ಯ ಸಮಸ್ಯೆ ತಪ್ಪಿಲ್ಲ. ಮಳೆ ಬಂದರೆ ನೀರು ಹರಿಯಲು ಅಧಿಕಾರಿಗಳು ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಕಾಮಗಾರಿ ಸ್ಥಳ ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶೀಘ್ರವೇ ಕಾಮಗಾರಿ ಮುಗಿಸಬೇಕು. ಅಲ್ಲಿವರೆಗೂ ರಸ್ತೆ ಸುಗಮ ಸಂಚಾರಕ್ಕೆ ಕನಿಷ್ಠ ವ್ಯವಸ್ಥೆಯನ್ನಾದರೂ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಒಂದು ಪಿಲ್ಲರ್‌ಗೆ ವರ್ಷಾನುಗಟ್ಟಲೆ ಸಮಯ ಬೇಕಾಯ್ತಾ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಉತ್ತರ ಕೊಡದೆ ತಬ್ಬಿಬ್ಬಾದರು. ಆಗ ಮೆಂಟಲ್ ತರ ಮಾತನಾಡಿದ್ರೆ ನನಗೆ ಪಿತ್ತ ನೆತ್ತಿಗೇರುತ್ತೆ ಎಂದು ಕೃಷ್ಣಬೈರೇಗೌಡ ಅವರು ಕೋಪಗೊಂಡಿದ್ದಾರೆ. ನಾಗವಾರದಿಂದ ಬಾಗಲೂರು ಕ್ರಾಸ್‌ವರೆಗಿನ ಮೆಟ್ರೋ ಹಂತ 2Bಯ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದ್ದೇನೆ. ಈ ಹಂತವು ಉತ್ತರ ಬೆಂಗಳೂರಿನ ಎಲ್ಲ ನಿವಾಸಿಗಳ ಪಾಲಿಗೆ ವರದಾನವಾಗಲಿದೆ. ಪರಿಶೀಲನೆ ವೇಳೆ ಜೊತೆಯಾದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.












Click it and Unblock the Notifications