ಕುಮಾರಸ್ವಾಮಿಯ ಭೇಟಿಯಾದ ಡಿಸಿಎಂ, ಡಿಕೆಶಿ: ಮಹತ್ವದ ಮಾತುಕತೆ
ಬೆಂಗಳೂರು, ಎಪ್ರಿಲ್ 25: ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಭೇಟಿಯಾದರು. ಈ ಸಮಯ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಉಂಟಾಗಿರುವ ಆತಂಕದ ಬಗ್ಗೆ ಪ್ರಮುಖವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಪರಮೇಶ್ವರ್ ಅವರು ಸಂಧಾನ ಸೂತ್ರವನ್ನು ಮುಂದಿಟ್ಟಿದ್ದು, ಈ ಕುರಿತೆ ಡಿಕೆ.ಶಿವಕುಮಾರ್ ಹಾಗೂ ಸಿಎಂ ಚರ್ಚೆ ನಡೆಸಿದ್ದಾರೆ.
ಪ್ರಸಕ್ತ ರಾಜಕೀಯ ಹೊರತುಪಡಿಸಿ, ಬೆಂಗಳೂರಿನಲ್ಲಿ ಮಳೆ ಎದುರಿಸಲು ಸಿದ್ಧತೆ, ಬೆಂಗಳೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆ, ರಾಜ್ಯದ ಜಲಾಶಯಗಳ ನೀರಿನ ಲಭ್ಯತೆ ಮತ್ತು ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಿದರು ಎಂದು ಸಿಎಂ ಕಚೇರಿ ತಿಳಿಸಿದೆ.

ನಂತರ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು ತಮ್ಮ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ರಾಜ್ಯದಲ್ಲಿ ನ ಬರ ಪರಿಸ್ಥಿತಿ, ಕೈತೊಳ್ಳುತ್ತಿರುವ ಪರಿಹಾರ ಕ್ರಮಗಳು, ವಿವಿಧ ಅಭವೃದ್ಧಿ ಕಾಮಗಾರಿಗಳು, ಶ್ರೀಲಂಕಾ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ, ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾಲಮನ್ನಾ ಯೋಜನೆ ಪ್ರಗತಿ ಕುರಿತು ಮಾಹಿತಿ ಪಡೆದರು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ರೈತರು ವಿದ್ಯುತ್ ಸಮಸ್ಯೆ ಕುರಿತು ತಮ್ಮ ಗಮನ ಸೆಳೆದ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.












Click it and Unblock the Notifications