ನೆಲಮಂಗಲ ರೋಡಲ್ಲಿ ನಾನೇ ತಗಲಾಕೊಂಡಿದ್ದೆ... ಡಿಸಿಎಂಗೂ ಕಾಡಿದ ಮಳೆರಾಯ!
ಬೆಂಗಳೂರಿನಲ್ಲಿ ಒಂದು ವಾರದಿಂದಲೂ ಭಾರಿ ಮಳೆ ಸುರಿಯುತ್ತಿದೆ. ಮಳೆಯ ರೌದ್ರನರ್ತನಕ್ಕೆ ರಾಜಧಾನಿಯಿಡೀ ನಲುಗಿದೆ. ಇನ್ನು ಬೆಂಗಳೂರಿನಾದ್ಯಂತ ಮಳೆಯಿಂದ ಭಾರಿ ಅನಾಹುತಗಳು ಸಂಭವಿಸಿದೆ. ಇದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಹೊರತಾಗಿಲ್ಲ. ಮಳೆಯಿಂದ ಅನುಭವಿಸಿದ ಫಜೀತಿ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಮಳೆ ಅವಾಂತರಗಳ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನೇ ನಿನ್ನೆ ನೆಲಮಂಗಲ ರಸ್ತೆಯಲ್ಲಿ ತಗಲಾಕೊಂಡಿದ್ದೆ ಎಂದು ತಮ್ಮ ಫಜೀತಿಯನ್ನು ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ನಿನ್ನೆ ರಾತ್ರಿಯೇ ಒಮ್ಮೆ ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ಲ ಕಡೆ ಅಲರ್ಟ್ ಆಗಿರುವಂತೆ ಅಧಿಕಾರಿಗಳಿಗೆ ಸೂಚನೆಯೂ ಕೊಟ್ಟಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದಾಸರಹಳ್ಳಿ ಭಾಗದಲ್ಲಿ ಒಂದು ಟ್ಯಾಂಕ್ ಒಡೆದಿದೆ. ಮಹದೇವಪುರ, ಭದ್ರಪ್ಪ ಬಡಾವಣೆ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಅಧಿಕಾರಿಗಳು ಬೆಂಗಳೂರಿನೆಲ್ಲೆಡೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದಿದ್ದಾರೆ.
ಈ ಪ್ರಕೃತಿಯ ಮುಂದೆ ನಾವೇನೂ ಅಲ್ಲ. ದುಬೈ, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ತೀವ್ರ ಬರವಿದ್ದ ಜಾಗಗಳಲ್ಲಿ ಹೆಚ್ಚು ಮಳೆ ಆಗುತ್ತಿದೆ. ಬೆಂಗಳೂರಿನಲ್ಲೂ ಮಳೆ ಹೆಚ್ಚಾಗಿದೆ. ಈಗಾಗಲೇ ಫೀಲ್ಡಿನಲ್ಲಿರುವ ಅಧಿಕಾರಿಗಳ ತಂಡದಿಂದ ನಾನು ಮಾಹಿತಿ ಪಡೆಯುತ್ತಲೇ ಇದ್ದೇನೆ ಎಂದು ಹೇಳಿದ್ದಾರೆ.
ನಗರದಲ್ಲಿ ಭಾರಿ ಮಳೆ ಆಗುತ್ತಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ ಎಂದು ವಿಪಕ್ಷಗಳು ಹರಿಹಾಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನಗೆ ಅಲ್ಲಿಗೆ ಹೋಗಿ ಪ್ರಚಾರ ತೆಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಸುಮ್ಮನಿದ್ದೆ ಎಂದು ಹೇಳಿದ್ದಾರೆ.

ನಮ್ಮ ಅಧಿಕಾರಿಗಳು ಎರಡು ದಿನಗಳಿಂದಲೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕೆಲವರನ್ನು ನಾನೇ ಈ ಕರ್ತವ್ಯದಿಂದ ಬಿಡುವು ಮಾಡಲು ಹೇಳಿದ್ದೇನೆ. ನಿನ್ನೆ ತಡರಾತ್ರಿವರೆಗೂ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ ಎಂದು ಸಚಿವ ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ.
ಅಶೋಕ್ ತಿರುಗೇಟು: ಮಳೆ ಹಾನಿ ಪ್ರದೇಶಕ್ಕೆ ಪ್ರಚಾರ ಬೇಡ ಎಂಬ ಕಾರಣಕ್ಕೆ ಭೇಟಿ ನೀಡಲಿಲ್ಲ ಎನ್ನುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಪ್ರಚಾರ ಬೇಡ ಅಂತ ಅಭಾವ ವೈರಾಗ್ಯ ಯಾಕೆ ತೋರಿಸುತ್ತೀರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಮಳೆ ಹಾನಿ ಪ್ರದೇಶಕ್ಕೆ ಹೋದರೆ ಸಂತ್ರಸ್ತರನ್ನು, ಸಾರ್ವಜನಿಕರನ್ನು, ಮಾಧ್ಯಮದವರನ್ನು ಎದುರಿಸುವ ಮುಖ ಇಲ್ಲ ಅಂತ ಹೇಳಿ ಎಂದು ವ್ಯಂಗ್ಯ ಮಾಡಿದ್ದಾರೆ.
ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರೇ, ಬೆಂಗಳೂರಿನಲ್ಲಿ 6,000 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಾವು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಂಡು ಇನ್ನೂ ಸರಿಯಾಗಿ ಒಂದು ತಿಂಗಳೂ ಕಳೆದಿಲ್ಲ ಎಂದು ಕಾಲೆಳೆದಿದ್ದಾರೆ.
ಇಂದು ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿದೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ ಅರ್ಥವಾಗದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಜನತೆ ತಮಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವಿರಾ? 6,000 ರಸ್ತೆ ಗುಂಡಿ ಮುಚಿದ್ದೇವೆ ಎಂದು ಒಂದೆರಡು ಫೋಟೋ, ವಿಡಿಯೋ ಕಳಿಸಿ ಅಮೆರಿಕದಲ್ಲಿದ್ದ ತಮಗೆ ಅಧಿಕಾರಿಗಳು ಟೋಪಿ ಹಾಕಿದ್ದಾರಾ? ಎಂದು ಲೇವಡಿ ಮಾಡಿದ್ದಾರೆ.












Click it and Unblock the Notifications