ಮೋದಿಗೆ ಕೊಟ್ಟ "ಬೆಳ್ಳಿ ಗಣೇಶ ಪ್ರತಿಮೆ" ಗಿಫ್ಟ್ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆ ಮಾಡುವುದಕ್ಕೆ ಬಂದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ಶಾಸಕರೊಬ್ಬರು ತಂದಿದ್ದ ಗಣೇಶನ ವಿಗ್ರಹವನ್ನು ಗಿಫ್ಟ್ ಆಗಿ ಕೊಟ್ಟಿದ್ದರು ಎನ್ನುವ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ರೀತಿ ಬೇರೆಯವರು ತಂದ ಗಿಫ್ಟ್ ಅನ್ನು ಡಿ.ಕೆ ಶಿವಕುಮಾರ್ ಅವರು ಕೊಡಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡಿತ್ತು. ಇದೀಗ ಈ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಿಯಾಕ್ಟ್ ಮಾಡಿದ್ದಾರೆ.
ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಮುಂದುವರಿದು ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು.

ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್‌ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನ ಹೇಳಿದ್ದೇನು: ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಈ ಸ್ಪಷ್ಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ವಿಚಾರವಾಗಿ ಮಾತನಾಡಿದ್ದು ಒಳ್ಳೆಯದೇ ಆಯಿತು ಎಂದಿದ್ದಾರೆ. ಇನ್ನೂ ಕೆಲವರು ಅಭಿವೃದ್ಧಿ ವಿಚಾರಗಳಲ್ಲೂ ಇದೇ ರೀತಿ ಬೇಗ ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮೋದಿ ಅವರ ಭೇಟಿ ಹಾಗೂ ಚರ್ಚೆ ಕುತೂಹಲ ಮೂಡಿಸಿತ್ತು. ಸಿಕ್ಕ ಕೆಲವೇ ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಯ ವಿಚಾರವಾಗಿ ಮಾತನಾಡಿದ್ದರು.
ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ಸಹ ನಗುತ್ತಲ್ಲೇ ಈ ಕಾರ್ಯಕ್ರಮದ ಉದ್ದಕ್ಕೂ ಮಾತನಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಕ್ಕಪಕ್ಕ ಕುಳಿತು ಮಾತನಾಡಿದ್ದು, ಹಾಸ್ಯ ಮಾಡಿದ್ದ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು.
ಇದೇ ಸಂದರ್ಭದಲ್ಲಿ ಡಿಸಿಎಂ ನಡೆಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಈ ನಡುವೆ ಗಣೇಶನ ವಿಗ್ರಹ ವಿವಾದಕ್ಕೆ ಕಾರಣವಾಗಿತ್ತು ಈ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇದೀಗ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications