• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದತ್ತ ಜಯಂತಿ: ಸದ್ಗುರುಗಳ ಪಾದುಕೆಗಳ ಪೂಜೆಗಾಗಿ ವಿಶಿಷ್ಟ ಮಂದಿರ

By ಪ್ರಣವ
|

ಪಾದುಕೆಗಳ ದೇವಾಲಯ ಇಲ್ಲವೆ ಮಂದಿರದ ಒಂದು ಭಾಗವಾಗಿರುವುದು ಸರ್ವೇಸಾಮಾನ್ಯ. ಆದರೆ, ಪಾದುಕೆಗಳಿಗೇ ಪ್ರತ್ಯೇಕ ಮಂದಿರ..!

ಕಲ್ಪನೆಯೇ ಅದ್ಭುತ, ಅವರ್ಚನೀಯ ಅನುಭವಾಮೃತ. ಆಧ್ಯಾತ್ಮದ ಸೆಲೆಯಿಂದ ಭಾವವನ್ನು ಭಕುತಿಯ ಆಲಯವಾಗಿಸುವ, ಭವದ ಬಂಧನದಿಂದ ಮುಕ್ತಿ ದೊರಕಿಸುವ ಗುರುಪಾದುಕೆಗಳ ದರ್ಶನಕ್ಕಾಗಿ ಹಾತೊರೆಯುವ ಭಕ್ತಗಣಕ್ಕೆಂದೇ ರೂಪಗೊಂಡಿರುವ ಅಪರೂಪದ 'ಪಾದುಕೆ'ಗಳ ಮಂದಿರವೊಂದು ಬೆಂಗಳೂರಿನಲ್ಲಿದೆ.

ಆಶ್ಚರ್ಯವಾದರೂ ಇದು ಸತ್ಯ. ಬೆಂಗಳೂರಿನ ಉತ್ತರಹಳ್ಳಿ-ಕೆಂಗೇರಿ ಮುಖ್ಯ ರಸ್ತೆಯ ತುರಹಳ್ಳಿ ಬಳಿಯ ಪಟಾಲಮ್ಮ ದೇವಸ್ಥಾನದ ಸಮೀಪವಿರುವ ಈ ವಿಶಿಷ್ಟ ಪಾದುಕೆ ಮಂದಿರವೇ 'ಶ್ರೀ ಸದ್ಗುರು ಚೈತನ್ಯ ಮಂದಿರ' ಅದು 'ಶ್ರೀ ಸದ್ಗುರು ಚೈತನ್ಯ ಪಾದುಕೆ ಮಂದಿರ'ವೂ ಹೌದು. ದೇಶದಲ್ಲೇ ಸದ್ಗುರುಗಳ ಪಾದುಕೆಗಳ ಪೂಜೆ ಮತ್ತು ದರ್ಶನಕ್ಕಾಗಿಯೇ ರೂಪಿಸಲಾಗಿರುವ ಏಕೈಕ ಮಂದಿರವೆಂಬ ಹೆಗ್ಗಳಿಕೆ ಈ ಮಂದಿರದ್ದು.

ಭಾರತೀಯ ಪರಂಪರೆಯಲ್ಲಿ ಪಾದುಕೆಗಳ ಪ್ರಾಮುಖ್ಯತೆ ಹಾಗೂ ಅದರ ಮಹತ್ವ ರಾಮಾಯಣದ ಭರತನಿಂದಲೇ ಪ್ರಾರಂಭವಾಗಿದೆ. ಶ್ರೀರಾಮರ ಪಾದುಕೆಯನ್ನೇ ಆಧಾರವಾಗಿಟ್ಟುಕೊಂಡು 13 ವರ್ಷಗಳ ಕಾಲ ಅಯೋಧ್ಯೆಯ ರಾಜ್ಯಭಾರವನ್ನು ನಡೆಸಿದ ಭರತ, ಪಾದುಕೆಯು ಸಾಕ್ಷಾತ್ ಆ ಪರಮಾತ್ಮನ ಸ್ವರೂಪವೇ ಎಂದು ತಿಳಿಸಿಕೊಟ್ಟಿದ್ದಾನೆ.

ಗುರುವಿನ ಸಂಪೂರ್ಣ ಚೈತನ್ಯ ಅವನ ಪಾದಗಳಲ್ಲಿ ಅಡಕವಾಗಿದ್ದು, ಆ ಪಾದಗಳನ್ನು ಹೊತ್ತಿರುವ ಪಾದುಕೆಗಳು, ಸಾಕ್ಷಾತ್ ಗುರುವಿನ ಚೈತನ್ಯದಷ್ಟೇ ಮಹತ್ವಹೊಂದಿದೆ ಎಂಬುದನ್ನು ನಮ್ಮ ಪರಂಪರೆಯಲ್ಲಿ ಹಲವಾರು ನಿದರ್ಶನಗಳ ಮೂಲಕ ನೋಡುತ್ತಾ ಬಂದಿದ್ದೇವೆ.

ಮದನಮೋಹನ ಮಾಳವೀಯ ಶೃಂಗೇರಿ ಶಾರದಾಪೀಠಾಧೀಶ್ವರರಾಗಿದ್ದ ಜಗದ್ಗುರು ಶ್ರೀ ನರಸಿಂಹಭಾರತೀ ಸ್ವಾಮಿಗಳ ಕೃಪೆಯಿಂದ ಬನಾರಸ್ ಹಿಂದೂ ಮಹಾ ವಿಶ್ವವಿದ್ಯಾಲಯವನ್ನೇ ಸ್ಥಾಪಿಸಲಾಯಿತು ಎಂದರೆ ಪಾದುಕೆಯ ಮಹತ್ವವು ನಮಗೆ ವೇದ್ಯವಾಗುತ್ತದೆ.

ಗುರು ಪರಂಪರೆಯನ್ನು ಸಾರುವ ಉದ್ದೇಶ

ಗುರು ಪರಂಪರೆಯನ್ನು ಸಾರುವ ಉದ್ದೇಶ

ಈ ಉದ್ದೇಶವನ್ನಿಟ್ಟುಕೊಂಡು ಗುರುವಿನ ಮಹತ್ವ , ಸಂದೇಶ, ಸಿದ್ಧಾಂತ, ತತ್ವ ಹಾಗೂ ಗುರುವಿನ ಪಾದುಕೆಗಳ ಮಹತ್ವ ಎಲ್ಲರಿಗೂ ಲಭ್ಯವಾಗಬೇಕೆಂಬ ಮಹತ್ ಸಂಕಲ್ಪದಿಂದ ಹಾಗೂ ಗುರುಗಳ ಆರ್ಶೀವಾದದಿಂದ ಈ ಮಹಾನ್ ಕೈಂಕರ್ಯವು 2000ನೇ ಇಸವಿಯಲ್ಲಿ ಪ್ರಾರಂಭವಾಯಿತು.

ಪ್ರಾರಂಭವಾದ ಬಗೆ : ಸದ್ಗುರು ಚೈತನ್ಯ ಮಂದಿರವು ನಿರ್ಮಾಣವಾಗಬೇಕೆಂಬ ಸಂಕಲ್ಪವಾದನಂತರ 2009ನೇ ತಿಂಗಳಲ್ಲಿ ಬೆಂಗಳೂರಿಗೆ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಪಾದಾರ್ಪಣೆ ಆಯಿತು. ಆಗ ಅಧ್ಯಕ್ಷರಾದ ಕೆ. ಎನ್.ವೆಂಕಟನಾರಾಯಣ ಅವರು ಗುರುಗಳಲ್ಲಿ, ಸದ್ಗುರು ಪಾದುಕೆಗಳನ್ನು ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿಕೊಂಡಾಗ ಜಗದುರುಗಳು ತಾವು ಭಗವತಿಯಲ್ಲಿ ಪ್ರಾರ್ಥಿಸಿ ತಿಳಿಸುತ್ತೆವೆಂದರು.

2 ದಿನಗಳ ನಂತರ ಗುರುಗಳೇ ಸ್ವತಃ ತಮ್ಮ ಅಮೃತ ಹಸ್ತದಿಂದ ಪೂಜೆ ಮಾಡಿರುವಂತಹ ಪಾದುಕೆಗಳನ್ನು ಅನುಗ್ರಹಿಸಲು ನಿರ್ಧರಿಸಿದರು.

ಈ ಪಾದುಕೆಗಳನ್ನು ಯಾರೂ ಧರಿಸಕೂಡದೆಂದು ಹೇಳಿ ಪಾದುಕೆಗಳನ್ನು ಗಾಣಗಾಪುರದ ಆದಿಯಾಗಿ ಭಾರತದ 48 ದತ್ತ ಕ್ಷೇತ್ರಗಳಲ್ಲಿ ಪೂಜೆ ಮಾಡಿಸಿದ ನಂತರ ಈ ಪಾದುಕೆಗಳನ್ನು ಸ್ಥಾಪಿಸಬೇಕೆಂದು ಹೇಳಿ, ಹಾಗೆಯೇ ಗುರುಪರಂಪರೆಯಲ್ಲಿ ಮೂಲ ಸ್ವರೂಪವಾದ ಶ್ರೀ ದಕ್ಷಿಣಾಮೂರ್ತಿ ಹಾಗೂ ದತ್ತಾತ್ರೇಯರನ್ನು ಪ್ರತಿಷ್ಠಾಪಿಸಬೇಕೆಂದು ಆದೇಶ ನೀಡಿದರು.
ಪಾದುಕೆ ಯಾತ್ರೆ

ಪಾದುಕೆ ಯಾತ್ರೆ

ಪಾದುಕಾ ಯಾತ್ರೆ : 2009 ಮೇ ತಿಂಗಳಲ್ಲಿ ಗುರುಗಳಿಂದ ಪಾದುಕೆಯನ್ನು ಅನುಗ್ರಹ ಪಡೆ ನಂತರ ಗುರುಗಳ ಆದೇಶದಂತೆ ಪಾದುಕಾ ಯಾತ್ರೆಯು ಪ್ರಾರಂಭವಾಯಿತು. ಗಾಣಗಾಪುರ, ಔದುಂಬರ, ವಾಡಿ, ಸಜ್ಜನಘಡ, ಗೋಂದಾವಳಿ, ಅಕ್ಕಲ್ಕೋಟ್, ಶಿರಡಿ, ತಿರುವಣ್ಣಾಮಲೈ, ಮುಂತಾದ 48 ಕ್ಷೇತ್ರಗಳಿಗೆ ಗುರುಬಂಧುಗಳೊಡಗೂಡಿ ಪಾದುಕಾ ಯಾತ್ರೆ ಯಶಸ್ವಿಯಾಯಿತು.

ಅದೇ 2009ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಸುಮಾರು 14 ದಿನಗಳ ಅಭೂತಪೂರ್ವವಾದ ಶ್ರೀ ಸದ್ಗುರು ಪಾದುಕಾ ಯಜ್ಞ ಶಂಕರಮಠದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಆಶ್ಚರ್ಯವಾಗುವಂತೆ ಸುಮಾರು 21 ಅವಧೂತರು ಧರಿಸಿರುವಂತಹ ಪಾದುಕೆಗಳು ಈ ಕಾರ್ಯಕ್ರಮಕ್ಕೆ ಲಭ್ಯವಾಯಿತು. ತತ್‍ಕ್ಷಣದಲ್ಲೇ ಎಲ್ಲರ ಮನಸ್ಸಿಗೆ ಬಂದ ವಿಷಯ, ಒಂದೇ ಸೂರಿನ ಅಡಿ ಈ ಎಲ್ಲಾ ಗುರು ಚೈತನ್ಯಗಳನ್ನು ಪಾದುಕೆಯ ಮೂಲಕ ಆರಾಧಸುವ ಅವಕಾಶ ದೊರಕಿಸಲು ಪಾದುಕಾ ಮಂದಿರ ಸೃಷ್ಠಿಯಾಗಬೇಕೆಂದು.

ಶ್ರೀ ಸದ್ಗುರು ಚೈತನ್ಯ ಮಂದಿರ

ಶ್ರೀ ಸದ್ಗುರು ಚೈತನ್ಯ ಮಂದಿರ

ಪ್ರತಿಷ್ಠಾಪನೆ: ಗುರು ಕೃಪೆಯಿದ್ದರೆ ಎಂತಹ ಅಸಂಭವವೂ ಸುಲಲಿತವಾಗಿ ಜರುಗುತ್ತದೆ ಎಂಬ ನಿದರ್ಶನಕ್ಕೆ 2010ನೇ ಜನವರಿಯಲ್ಲಿ ಶಂಕುಸ್ಥಾಪನೆ ಆದಂತಹ ‘ಶ್ರೀ ಸದ್ಗುರು ಚೈತನ್ಯ ಮಂದಿರ'ವು 2012 ಮಾರ್ಚ್ 4ನೇ ತಾರೀಖು ಶ್ರೀ ದಕ್ಷಿಣಾಮೂರ್ತಿ ದತ್ತಾತ್ರೇಯರ ಪ್ರತಿಷ್ಠಾನಾ ಕಾರ್ಯಕ್ರಮ ಅದ್ಭುತವಾಗಿ ನಡೆಯಿತು. ಸ್ವತಃ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಸ್ವಹಸ್ತದಿಂದ ಪ್ರತಿಷ್ಠಾಪನಾ ಕುಂಬಾಭೇಷೇಕ ನಡೆಸಿಕೊಟ್ಟದ್ದು ಎಲ್ಲರ ಪುಣ್ಯವೇ ಸರಿ.
ಗಣೇಶ ಪ್ರಪಂಚ: ಗಣಪತಿಯ ಅಪ್ರತಿಮ ಭಕ್ತರಾಗಿರುವ ಶ್ರೀ ಆದಿತ್ಯ ಪ್ರಕಾಶ್‍ರವರು ತಮ್ಮ ಸರ್ವಸ್ವವನ್ನು ಗಣಪತಿಯ ಆರಾಧನೆಯಲ್ಲೇ ತೊಡಗಿಸಿಕೊಂಡಿರುತ್ತಾರೆ. ತಮ್ಮ ಸಂಪೂರ್ಣ ಜೀವನವನ್ನು ಗಣಪತಿಯ ವಿವಿಧ ಸ್ವರೂಪಗಳನ್ನು, ಪ್ರತಿಮೆಗಳನ್ನು ಹಾಗೂ ಚಿತ್ರಗಳನ್ನು ಸಂಗ್ರಹಿಸುವಂತಹ ಅನನ್ಯವಾದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರೂ,
ಈ ಸಂಸ್ಥೆಯ ನಿರ್ವಾಹಕ ಟ್ರಸ್ಟಿ ಆದ ಅವರು, ತಮ್ಮ 15 ವರ್ಷಗಳ ಈ ಗಣಪತಿಯ ಸಂಗ್ರಹಣೆಯನ್ನು ಸಂಪೂರ್ಣವಾಗಿ ಸದ್ಗುರು ಚೈತನ್ಯ ಮಂದಿರಕ್ಕೆ ದಾನ ನೀಡಿದ್ದಾರೆ.

ಗಣಪತಿಯನ್ನು ಕೇವಲ ಮೂರ್ತಿ ರೂಪದಲ್ಲಷ್ಟೇ ಅಲ್ಲದೆ ಪರಬ್ರಹ್ಮ ಸ್ವರೂಪನಾಗಿ ಕಾಣಬೇಕೆಂಬುವುದರ ಉದ್ದೇಶದಿಂದ ಈ ಗಣೇಶ ಪ್ರಪಂಚವನ್ನು ಸ್ಥಾಪಿಸಲಾಯಿತು. 2500ಕ್ಕೂ ಹೆಚ್ಚು ಗಣೇಶ ಪ್ರತಿಮೆಗಳು ಇಲ್ಲಿದ್ದು, ವಿವಿಧ ಬಗೆಯ ವಸ್ತುಗಳಿಂದ ತಯಾರಿಸಲ್ಪಟ್ಟ ಗಣಪತಿಯನ್ನು ಕಾಣಬಹುದು. ಭಾರತ ಅಷ್ಟೇ ಅಲ್ಲದೆ ವಿದೇಶದ ಗಣಪತಿಗಳ ಸ್ವರೂಪವನ್ನೂ ಸಹ ನೋಡುವಂತಹ ಅವಕಾಶ ಇಲ್ಲಿರುತ್ತದೆ.

ಶ್ರೀ ಪತ್ತಿ ಶಾಂತಾ ಶ್ರೀಧರ ಚಾರಿಟಬಲ್ ಟ್ರಸ್ಟ್

ಶ್ರೀ ಪತ್ತಿ ಶಾಂತಾ ಶ್ರೀಧರ ಚಾರಿಟಬಲ್ ಟ್ರಸ್ಟ್

ಪಾದುಕಾ ಮಂದಿರ: ಗುರುವಿನ ಚೈತನ್ಯರಾಧನೆಯನ್ನು ಪಾದುಕೆಗಳ ಮೂಲಕ ಆರಾಧಿಸುವುದು ಸರ್ವಶ್ರೇಷ್ಠ ಎನ್ನುವುದು ಗುರುಚರಿತ್ರೆಯಲ್ಲೇ ಕಾಣಬಹುದು. ಈ ಮಂದಿರದಲ್ಲಿ ಅಂತಹ ಅನೇಕ ಸಾಧು ಸಂತರು, ಯತಿಶ್ರೇಷ್ಠರು, ಮಠಾಧಿಪತಿಗಳು ಹಾಗೂ ಅವಧೂತರ ಪಾದುಕೆಗಳನ್ನು ದರ್ಶಿಸಲು ಸದವಕಾಶವಿರುತ್ತದೆ. ಈ ಮಂದಿರದಲ್ಲಿ ಪುರಾತನವಾದ ಪಾದುಕೆಗಳು, ಇನ್ನೂ ಕೆಲವು ಸ್ಪರ್ಶ ಪಾದುಕೆಗಳೂ ಕಂಡುಬರುತ್ತದೆ. ಈ ಮಂದಿರಕ್ಕೆ ಪಾದುಕೆಗಳು ಬಂದಿರುವಂತಹ ಒಂದೊಂದು ಸನ್ನಿವೇಶವೂ ಕೂಡ ರೋಮಾಂಚನಕಾರಿ ಮತ್ತು ನಂಬಲು ಅಸಾಧ್ಯವಾದಂತಹ ವಿಷಯವಾಗಿದೆ.

ಗುರುಪರಂಪರಾನುಕ್ರಮವಾಗಿ ದಕ್ಷಿಣಾಮೂರ್ತಿಯಿಂದ ಪ್ರಾರಂಭವಾಗಿ ವೇದವ್ಯಾಸರನ್ನೊಳಗೊಂಡು ಶಂಕರ ಪರಂಪರೆ, ಮಧ್ವ ಪರಂಪರೆ, ರಾಮಾನುಜ ಪರಂಪರೆ ಹಾಗೂ ಅನೇಕ ಅವಧೂತ ಪರಂಪರಾನುಕ್ರಮವಾಗಿ ಇಲ್ಲಿ ಅನೇಕ ಪಾದುಕೆಗಳು ಸ್ಥಾಪಿತವಾಗಿದೆ. ಶ್ರೀ ಪತ್ತಿ ಶ್ರೀಧರ್ ಅವರು ‘ಶ್ರೀ ಪತ್ತಿ ಶಾಂತಾ ಶ್ರೀಧರ ಚಾರಿಟಬಲ್ ಟ್ರಸ್ಟ್' ವತಿಯಿಂದ ಈ ಮಂದಿರಕ್ಕೆ ಸೇವೆಯನ್ನು ಸಲ್ಲಿಸಿರುತ್ತಾರೆ. ಪಾದುಕೆಗಳಿರುವ ಎಲ್ಲ ಗುರುಗಳ ಸೂಕ್ಷ್ಮ ಪರಿಚಯ ಹಾಗೂ ಅವರು ಉಪಯೋಗಿಸಿರುವ ಕೆಲವು ವಸ್ತುಗಳನ್ನು ಇಲ್ಲಿರಿಸಲಾಗಿದೆ.

ಪಾದುಕೆಗಳ ಮಹತ್ವ

ಪಾದುಕೆಗಳ ಮಹತ್ವ

ಪಾದ ಮನುಷ್ಯನ ಅವಿಭಾಜ್ಯ ಅಂಗ. ಚಲನೆಗೆ ಅವಶ್ಯವಾಗಿರುವ ಪಾದಕ್ಕಿರುವ ಮಹತ್ವ ಅನನ್ಯ. ಈ ಪಾದಕ್ಕೆ ಸನಾತನ ಧರ್ಮದಲ್ಲಿ ಸರ್ವಶ್ರೇಷ್ಠ ಸ್ಥಾನಮಾನ. ಅದರಲ್ಲೂ ಗುರುವಿನ ಪಾದ ದೈವಸಮಾನ. ದೇವಾನುದೇವತೆಗಳ ಪಾದ ದೈವವಷ್ಟೇ ಶ್ರೇಷ್ಠ. ದೇವರಾಧನೆ- ದೇವರೊಡನೆ ಭಾವ- ಆಧ್ಯಾತ್ಮದ ಅನುಸಂಧಾನವುಳ್ಳ ಋಷಿಮುನಿಗಳ ಪಾದಗಳಿಗೂ ಅಗ್ರಮಾನ್ಯತೆ, ಅವುಗಳ ಪೂಜೆಯಲ್ಲೇ ಭಕ್ತಮಹಾಶಯರ ಧನ್ಯತೆ, ಅದುವೇ ಜೀವನದ ಸಾರ್ಥಕತೆ. ಶ್ರೀಪಾದ, ಗುರುಪಾದ, ತ್ರಿವಿಕ್ರಮ ಪಾದ, ರಾಮಪಾದ, ವಿಠಲನ ಪಾದ, ಒಂದೇ ಎರಡೇ ಎಲ್ಲವೂ ಪೂಜಿಪ ಪಾದಗಳೇ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ ಎಂಬಂತೆ ಗುರುವಿನ ಪಾದಕ್ಕೇರಗುವುದರಲ್ಲೇ ಧನ್ಯತಾಭಾವ. ಅಂತಹ ಗುರುಪಾದ ಧರಿಸುವ ಪಾದುಕೆಗಳೂ ಸಹ ಗುರುಪಾದದಷ್ಟೇ ಪೂಜ್ಯನೀಯ.

ಗುರುಗಳೂ, ಅವಧೂತರು, ಜಗದ್ಗುರುಗಳು, ಮಠಾಧೀಶರ ಪಾದಪೂಜೆ ಮಾಡುವುದು ಸನಾತನ ಧರ್ಮದ ಪ್ರಮುಖ ಆಚರಣೆ. ಅದರೊಟ್ಟಿಗೆ ಗುರುಮಾನ್ಯರು ತೊಡುವ ಪಾದುಕೆಗಳಿಗೂ ಪೂಜೆಯ ಭಾಗ್ಯವುಂಟು. ಅಂತಹ ಗುರುಪಾದುಕೆಗಳ ದರ್ಶನದಿಂದ ಸಂತೃಪ್ತಗೊಳ್ಳುವುದು, ಧನ್ಯವಾಗುವುದು ಭಕ್ತರಮನ.

108 ಗುರುಗಳ ಪಾದುಕೆಗಳನ್ನು ತಲಾ ಒಂದೊಂದು ಪ್ರತ್ಯೇಕ ‘ಕರ್ಬೋರ್ಡ್'ಗಳಲ್ಲಿ ಆಯಾ ಗುರುಗಳ ಭಾವಚಿತ್ರದ ಸಮೇತ ಇರಿಸಲಾಗಿದೆ. ಅವಧೂತ ಪರಂಪರೆ, ಮಠಾಧೀಶರ ಪರಂಪರೆ ಮತ್ತು ಸಮಾಜಸುಧಾರಕರ ಪರಂಪರೆಯನ್ನು ಬೆಳಗಿದ ಮಹಾಮಹಿಮರ ಪಾದುಕೆಗಳನ್ನು ಏಕಕಾಲಕ್ಕೆ ದರ್ಶನ ಮಾಡಿಸುವ ಈ ಯತ್ನವೇ ಶ್ಲಾಘನೀಯ. ವಿಶಿಷ್ಟ ಆನಂದದ ಅನುಭೂತಿ. ಆಧ್ಯಾತ್ಮದ ಸ್ಪರ್ಶದಿಂದ ಸಚೇತನಗೊಳಿಸುವ ಸಂಗತಿ.

English summary
Celebrate Datta Jayanti this year at Sri Sadguru Chaitanya Paduka Mandira, BHS Layout, off Uttarahahalli- Kengeri road, Bengaluru. Know more about Paduka Mandira and its significance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X