ಎರಡು ವರ್ಷದಲ್ಲಿ 221 ಕೋಟಿ ಸೈಬರ್ ವಂಚನೆ: ಗೋಲ್ಡನ್ ಅವರ್ ಬಳಸುವುದು ಹೇಗೆ?
ಬೆಂಗಳೂರು , ಏಪ್ರಿಲ್ 26: ಡಿಜಿಟಲ್ ಮನಿ ಟ್ರಾನ್ಸ್‌ಫರ್ ಆಗಿದ್ದೇ ಸೈಬರ್ ಕಳ್ಳರಿಗೆ ಹಬ್ಬವಾಗಿಬಿಟ್ಟಿದೆ. ಹೊಸ ಹೊಸ ಐಡಿಯಾ ವಿಭಿನ್ನ ಮಾದರಿಯಲ್ಲಿ ಜನರನ್ನು ಯಾಮಾರಿಸುತ್ತಾ ಸೈಬರ್ ಕಳ್ಳರು ನಿತ್ಯ ಲಕ್ಷ ಲಕ್ಷ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಸೈಬರ್ ಕಳ್ಳರ ಹಾವಳಿಯನ್ನು ತಡೆಯಲು ಪೊಲೀಸರು ಶತ ಪ್ರಯತ್ನವನ್ನು ಪಡುತ್ತಿದ್ದರು ವಂಚಕರು ಮಾತ್ರ ಸುಲಭವಾಗಿ ಸಿಗುತ್ತಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಹಾಗೂ ಸಿಲಿಕಾನ್ ಸಿಟಿಯಲ್ಲಿ ಸೈಬರ್ ಠಾಣೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಕೆಲವು ಪ್ರಕರಣಗಳು ನೆಪ ಮಾತ್ರಕ್ಕೆ ದಾಖಲಾಗುತ್ತಿವೆ. ರಿಕವರಿಯ ಹಂತವನ್ನು ಗಮನಿಸಿದರೆ ತೀರಾ ಕಡಿಮೆಯಾಗುತ್ತಿದೆ.
ದಿನನಿತ್ಯ ಕನಿಷ್ಠ 17 ಲಕ್ಷ ಹಣ ಸೈಬರ್ ಕಳ್ಳರ ಪಾಲು..!
ಸೈಬರ್ ಕಳ್ಳರು ಎಲ್ಲೋ ಕುಳಿತು ನಮ್ಮ ಖಾತೆಗಳಿಗೆ ಕನ್ನ ಹಾಕ್ತಾರೆ. ಅದು ನಮ್ಮ ಸಹಾಯದಿಂದಲೇ ಅಂದ್ರೆ ನಂಬಲೇ ಬೇಕು. ಅವರು ಯಾಮಾರಿಸ್ತಾರೆ ನಾವು ಯಾಮಾರ್ತೀವಿ. ಹೊಸ ಐಡಿಯಾದಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗುವ ಮುನ್ನವೇ ನಮ್ಮ ಖಾತೆಯಲ್ಲಿರುವ ಲಕ್ಷ ಲಕ್ಷ ಹಣವನ್ನು ಕ್ಷಣ ಮಾತ್ರದಲ್ಲೇ ಎಗರಿಸಿಬಿಡ್ತಾರೆ. ಹೀಗೆ ಪ್ರತಿನಿತ್ಯ ಸರಾಸರಿ 17 ಲಕ್ಷ ಹಣ ಸೈಬರ್ ಕಳ್ಳರ ಪಾಲಾಗುತ್ತಿದೆ.
2020 ರಿಂದ ಇಲ್ಲಿಯವರೆಗೂ 221 ಕೋಟಿ ವಂಚನೆ..! ರಿಕವರಿ ಎಷ್ಟು..?
ಜನ ನಂಬಲೇಬೇಕಾದ ವಿಚಾರವಿದು. ಸೈಬರ್ ಕಳ್ಳರ ಹಾವಳಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ 221 ಕೋಟಿ ಅಮಾಯಕ ಜನರ ಹಣವನ್ನು ಸೈಬರ್ ಖದೀಮರು ಎಗರಿಸಿದ್ದಾರೆ. ಇದರಲ್ಲಿ ರಿಕವರಿ ಆಗಿರೋದು ಕೇವಲ 49 ಕೋಟಿ ಮಾತ್ರವೇ ಅನ್ನೋದು ಗಮನಿಸಬೇಕಾದ ಅಂಶವಾಗಿದೆ.

ಸೈಬರ್ ಖದೀಮರು ಕದ್ದ ಹಣ ರಿಕವರಿಯಾಗದಿರಲು ಕಾರಣವೇನು..?
* ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ಬೆರಳೆಣಿಕೆ ಸೈಬರ್ ಪೊಲೀಸ್ ಠಾಣೆ.
* ಬೆಂಗಳೂರು, ಮೈಸೂರು, ಬೆಳಗಾವಿ, ಕಲ್ಬುರ್ಗಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿ.
* ಕೆಲವು ಜಿಲ್ಲೆಯಲ್ಲಿ ಸೈಬರ್ ಠಾಣೆಯಿದ್ದರೂ ನುರಿತ ಸಿಬ್ಬಂದಿಯ ಕೊರತೆ.
* ಹೊರರಾಜ್ಯಗಳಲ್ಲೇ ಕುಳಿತು ಸೈಬರ್ ಕಳ್ಳರ ಹಾವಳಿ.
* ಹೊರರಾಜ್ಯದಲ್ಲಿ ಹೋದಾಗ ಸ್ಥಳೀಯ ಪೊಲೀಸರು ಸಹಕಾರ ಇಲ್ಲದಿರುವುದು.
* ಹೊರರಾಜ್ಯಗಳಿಗೆ ಹೋಗಿ ಬರಲು ಅಧಿಕ ಖರ್ಚು ವೆಚ್ಚ.
* ಹಣದ ಆಸೆಗೆ ಬಡವರ ಆಧಾರ್ ಬಳಸಿ ಅಕೌಂಟ್ ಓಪನ್ - ವಂಚನೆಯ ಮಾಹಿತಿಯೇ ಇರಲ್ಲ.
ಯಾವ ಯಾವ ರೀತಿಯಲ್ಲಿ ಸೈಬರ್ ವಂಚಕರು ಹಾಕ್ತಾರೆ ಗಾಳ :
* OTP ಪಡೆಯುವ ಮೂಲಕ ವಂಚನೆ.
* ಬಾರ್ ಕೋಡ್ ಸ್ಕ್ಯಾನ್ ಮಾಡಿಸೋ ಮೂಲಕ ವಂಚನೆ.

* ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ವಂಚನೆ.
* ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ.
* ಸಾಮಾಜಿಕ ಜಾಲತಾಣ ಮನೆ ಬಾಡಿಗೆ , ವಸ್ತು ಮಾರಾಟ, ಸೇರಿ ಬೇರೆ ಜಾಹೀರಾತು ನೋಡಿ ವಂಚನೆ.
*ಮಿಲಿಟರಿ ಅಧಿಕಾರಿ ಸೋಗಿನಲ್ಲಿ ನಕಲಿ ದಾಖಲೆಗಳಿಸಿ ವಂಚನೆ.
*ಕ್ರೆಡಿಟ್ ಕಾರ್ಡ್ ಗಳ ನಂಬರ್ ಪಡೆದು ವಂಚನೆ.
* ಲಾಟರಿ ಹೊಡೆದಿದೆ ಕಾರು ಸಿಗುತ್ತೆ ಇಲ್ಲವೇ ಹಣ ಸಿಗುತ್ತೆ ಎಂದು ಹೇಳಿ ವಂಚನೆ.
ಮೋಸಜಾಲದ ಕುರಿತು ಪಟ್ಟಿ ಮಾಡುತ್ತ ಹೋದರೆ ದೊಡ್ಡದಾಗಿ ಬೆಳೆಯುತ್ತೆ. ಆದರೆ ನಮ್ಮ ಹಣವನ್ನು ದೋಚುವ ವಂಚಕರು ಕೆಲವೊಮ್ಮೆ ನಮ್ಮ ಹಣದಾಸೆಯನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ.
ಗೋಲ್ಡನ್ ಅವರ್ ಸದುಪಯೋಗವೇ ಉತ್ತಮ ಮಾರ್ಗ.
ಸೈಬರ್ ಖದೀಮರು ನಮ್ಮ ಹಣವನ್ನು ಅಕೌಂಟ್ ನಿಂದ ಎಗರಿಸಿದ ಒಂದು ಗಂಟೆಯೊಳಗೆ 112 ಕರೆ ಮಾಡಬೇಕು. ಈ ಒಂದು ಗಂಟೆಯ ಅವಧಿಯನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ನಮ್ಮ ಖಾತೆಯಿಂದ ಸೈಬರ್ ವಂಚಕರ ಖಾತೆ ವರ್ಗವಾಗಿರುವ ಹಣವನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಕ್ರಮವಹಿಸಲಿದ್ದಾರೆ. ಜನರು ಈ ಅಮೂಲ್ಯ ಅವಧಿಯನ್ನು ಬಳಸಿಕೊಂಡರೆ ಸೈಬರ್ ಕಳ್ಳರಿಗೆ ಗುನ್ನ ಹೊಡೆಯಲು ಸಹಕಾರವಾಗಲಿದೆ.












Click it and Unblock the Notifications