‘ಅಮೇಥಿಯನ್ನೇ ಬಿಟ್ಟಿಲ್ಲ, ಕನಕಪುರ ಬಿಡ್ತೀವಾ’: ಸಿ.ಟಿ.ರವಿ
ರಾಮನಗರ: ಹೈವೋಲ್ಟೇಜ್ ಕ್ಷೇತ್ರ ಕನಕಪುರದಲ್ಲಿ ಗೆದ್ದೇ ಗೆಲ್ಲಬೇಕು ಎಂದು ಪಣತೊಟ್ಟಿದೆ ಬಿಜೆಪಿ. ಹೀಗಾಗಿ ಘಟಾನುಘಟಿ ನಾಯಕರು ಕನಕಪುರ ಕ್ಷೇತ್ರಕ್ಕೆ ನುಗ್ಗಿ, ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದೇ ರೀತಿ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಸಿ.ಟಿ. ರವಿ, ಡಿಕೆ ಬ್ರದರ್ಸ್‌ಗೆ ಸವಾಲು ಹಾಕಿದ್ದಾರೆ. 'ಅಮೇಥಿಯನ್ನೇ ಬಿಟ್ಟಿಲ್ಲ, ಕನಕಪುರ ಬಿಡ್ತೀವಾ' ಎಂದು ಚಾಲೆಂಜ್ ಮಾಡಿದ್ದಾರೆ.
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಡಿ.ಕೆ. ಶಿವಕುಮಾರ್ ಗೆಲ್ಲುತ್ತಾ ಬಂದಿದ್ದು, ಈ ಬಾರಿ ಡಿ.ಕೆ. ಶಿವಕುಮಾರ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಹೀಗಾಗಿಯೇ 'ಬಂಡೆ' ಎಂದೇ ಫೇಮಸ್ ಆಗಿರುವ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿಯಿಂದ ರಣತಂತ್ರ ರೂಪಿಸಲಾಗಿದೆ. ಅಶೋಕ್ ಮುಂದಾಳತ್ವದಲ್ಲಿ ಕನಕಪುರ ಕೋಟೆ ಗೆಲ್ಲಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದಾರೆ. ಇದೀಗ ಸಿ.ಟಿ.ರವಿ ಕೂಡ ಕನಕಪುರ ಅಖಾಡಕ್ಕೆ ಎಂಟ್ರಿಯಾಗಿ, ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ಯಾವುದೇ ಭದ್ರಕೋಟೆ ಇಲ್ಲ!
ಕನಕಪುರ ವಿಧಾನಸಭಾ ಕ್ಷೇತ್ರ ಚುನಾವಣೆ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ಪ್ರಜಾಪ್ರಭುತ್ವದಲ್ಲಿ ಯಾವುದೇ ಭದ್ರಕೋಟೆ ಇರುವುದಿಲ್ಲ. ಜನರ ವಿಶ್ವಾಸ ಪ್ರೀತಿ ಗಳಿಸಿದರೆ ಮಾತ್ರ ಪರಿಗಣಿಸಬಹುದು. ಪ್ರಭಾವ ಬಳಸಿ ಗೆದ್ದ ತಕ್ಷಣ ಅದನ್ನ ನಾವು ಭದ್ರಕೋಟೆ ಎನ್ನಬಾರದು, ತಡವಾಗಿ ಆದರೂ ನಾವು ಬಂದಿದ್ದೀವಿ ಎಂದು ಸವಾಲು ಹಾಕಿದ್ದಾರೆ. ಇದೇ ವೇಳೆ ಸಿ.ಟಿ. ರವಿ 'ಅಮೇಥಿಯನ್ನೇ ಬಿಟ್ಟಿಲ್ಲ, ಕನಕಪುರ ಬಿಡ್ತೀವಾ' ಎನ್ನುವ ಮೂಲಕ ನೇರವಾಗಿ ಡಿಕೆ ಸಹೋದರರಿಗೆ ಸವಾಲು ಎಸೆದರು. 'ಕನಕಪುರದಲ್ಲಿ ಪಾಳೇಗಾರಿಕೆ ಮನಸ್ಥಿತಿ ಇದೆ' ಎಂಬ ಆರೋಪವನ್ನೂ ಸಿ.ಟಿ.ರವಿ ಮಾಡಿದ್ದಾರೆ.
ಹೇಗಿದೆ ಆರ್.ಅಶೋಕ್ ಹವಾ?
ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಸವದಿ ಹಾಗೂ ಜಗದೀಶ್ ಶೆಟ್ಟರ್ ಸೋಲಿಗೆ ಬಿಜೆಪಿ ನಾಯಕರು ಶಪಥ ಮಾಡಿರುವಂತೆ ಕಾಣುತ್ತಿದೆ. ಹೀಗಾಗಿಯೇ ತೀವ್ರ ಮುತುವರ್ಜಿ ವಹಿಸಿ, ಕನಕಪುರ ಸೇರಿದಂತೆ ಉಳಿದವರ ಕ್ಷೇತ್ರದಲ್ಲಿ ಸಂಘಟನೆ ರೂಪಿಸಿದ್ದಾರೆ ಕಮಲ ಪಾಳಯದ ನಾಯಕರು. ಇನ್ನೊಂದು ಕಡೆ 2 ಕಡೆ ಚುನಾವಣೆಗೆ ನಿಂತಿದ್ದರೂ ಆರ್. ಅಶೋಕ್ ಅವರ ಗಮನ ತಮ್ಮ ಹಾಲಿ ಕ್ಷೇತ್ರ ಪದ್ಮನಾಭ ನಗರಕ್ಕಿಂತಲೂ ಹೆಚ್ಚಾಗಿ ಕನಕಪುರ ಕ್ಷೇತ್ರದ ಕಡೆಗೇ ನೆಟ್ಟಿದೆ. ಕನಕಪುರ ಕ್ಷೇತ್ರದಲ್ಲಿ ಅಲರ್ಟ್ ಆಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.

ರಾಹುಲ್ ಗಾಂಧಿ ಉದಾಹರಣೆ!
ಆರ್. ಅಶೋಕ್‌ಗೆ ಸಾಥ್ ಕೊಡಲು ಇದೀಗ ಸಿ.ಟಿ. ರವಿ ಕೂಡ ಕನಕಪುರ ಕೋಟೆಗೆ ಎಂಟ್ರಿ ಕೊಟ್ಟಿದ್ದಾರೆ. ಸಿ.ಟಿ. ರವಿ ಜತೆಗೆ ಸ್ಥಳೀಯ ಬಿಜೆಪಿ ನಾಯಕರು ಕೂಡ ರಾಮನಗರ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮತ್ತೊಂದು ಕಡೆ ಉತ್ತರಪ್ರದೇಶ ಉದಾಹರಣೆ ನೀಡಿ ಡಿಕೆ ಸಹೋದರರ ವಿರುದ್ಧ ಸಿ.ಟಿ. ರವಿ ಸವಾಲು ಹಾಕಿದ್ದಾರೆ. ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿಯನ್ನ ಸೋಲಿಸಿತ್ತು ಬಿಜೆಪಿ. ಇದೇ ಉದಾಹರಣೆಯನ್ನ ಕನಕಪುರ ಕ್ಷೇತ್ರಕ್ಕೂ ನೀಡುವ ಮೂಲಕ ಪರೋಕ್ಷ ಸಂದೇಶ ಕೊಟ್ಟಂತಿದೆ ಸಿ.ಟಿ. ರವಿ.
ಡಿಕೆ ಸಹೋದರರಿಗೆ ಸಿ.ಟಿ.ರವಿ ಸವಾಲ್!
ಸತತ 3 ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದ ರಾಹುಲ್ ಗಾಂಧಿ, 2019 ರ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಕೇರಳದ ವಯನಾಡ್ ಕ್ಷೇತ್ರದಲ್ಲೂ ರಾಹುಲ್ ಗಾಂಧಿ ಚುನಾವಣೆಗೆ ಸ್ಪರ್ಧಿಸಿದ್ದ ಕಾರಣ ಕೇರಳದಲ್ಲಿ ಗೆದ್ದು, ಅಮೇಥಿಯಲ್ಲಿ ಸೋತಿದ್ದರು. ಇದೀಗ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಚಾರದಲ್ಲೂ ಇಂತಹದ್ದೇ ಸೋಲು ನಿರೀಕ್ಷಿಸಿ ಎನ್ನುವ ಧಾಟಿಯಲ್ಲಿ ಸಿ.ಟಿ. ರವಿ ಮಾತನಾಡಿದ್ದಾರೆ.

ಒಟ್ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದ ಮೇಲೆ ಎಲ್ಲಾ ನಿರ್ಧಾರ ಆಗಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಕನಕಪುರ ಕ್ಷೇತ್ರದಲ್ಲಿ ಗೆಲುವು ಯಾರ ಪಾಲಿಗೆ ಎಂಬುದು ಕೂಡ ಡಿಸೈಡ್ ಆಗಲಿದೆ.












Click it and Unblock the Notifications