ಬಿಬಿಎಂಪಿ ಪೌರಕಾರ್ಮಿಕ ESI-PF ನಲ್ಲಿ ಕೋಟ್ಯಂತರ ರೂ. ಹಗರಣ: ದಾಖಲೆ ಬಿಡುಗಡೆ ಮಾಡಿದ ಎಎಪಿ
ಬೆಂಗಳೂರು, ಜುಲೈ 28: ಬಿಬಿಎಂಪಿಯು ತನ್ನ ಪೌರಕಾರ್ಮಿಕರ ಭವಿಷ್ಯದ ಹಾಗೂ ಆರೋಗ್ಯದಂತಹ ಅತೀ ಮುಖ್ಯ ವಿಚಾರದಲ್ಲಿ ಗುತ್ತಿಗೆದಾರರಗಳ ಜತೆ ಒಳ ಒಪ್ಪಂದ ಮಾಡಿಕೊಂಡು ನೂರಾರು ಕೋಟಿ ಅವ್ಯವಹಾರಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ದಾಖಲೆಗಳ ಸಮೇತ ಮಾಹಿತಿ ನೀಡಿದರು.
ಆಮ್ ಆದ್ಮಿ ಪಕ್ಷದಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಬೃಹತ್ ಹಗರಣಗಳ ಕುರಿತು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು. ಬ್ರಾಂಡ್ ಬೆಂಗಳೂರುನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಉಪಮುಖ್ಯಮಂತ್ರಿಗಳು ಮೊದಲು ಇದರತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರು ನಗರ ಆರೋಗ್ಯ, ಸ್ವಚ್ಛತೆಯನ್ನು ಕಾಪಾಡುತ್ತಿರುವ ಪೌರಕಾರ್ಮಿಕರ ವೇತನದಲ್ಲಿನ 500 ಕೋಟಿ ರೂ. ಗಳಿಗೂ ಹೆಚ್ಚಿನ ಮೊತ್ತದ ಇಎಸ್ ಐ ಮತ್ತು ಪಿಎಫ್ ಹಣವನ್ನು ಕಳೆದ 5 ವರ್ಷಗಳಿಂದ ಭರಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮುಲಕ ಪೌರಕಾರ್ಮಿಕ ಭವಿಷ್ಯ ಹಾಗೂ ಆರೋಗ್ಯದೊಂದಿಗೆ ಬಿಬಿಎಂಪಿ ಹಾಗೂ ಗುತ್ತಿಗೆದಾರರು ಚೆಲ್ಲಾಟವಾಡುತ್ತಿದ್ದಾರೆ. , ಇದೊಂದು ಆತಂಕಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬ್ರ್ಯಾಂಡ್ ಬೆಂಗಳೂರು ಮುನ್ನ ಸರಿಪಡಿಸಲು ಡಿಕೆಶಿಗೆ ಮನವಿ
ಅಷ್ಟೇ ಅಲ್ಲದೇ ಬ್ರ್ಯಾಂಡ್ ಬೆಂಗಳೂರನ್ನು ಮಾಡಲು ಹೊರಟಿರುವ ಉಪಮುಖ್ಯಮಂತ್ರಿಗಳು ಮೊದಲು ಪೌರಕಾರ್ಮಿಕರ ಮೂಲ ಸಮಸ್ಯೆಗಳನ್ನು ಮೊದಲು ಬಗೆಹರಿಸಲಿ ಎಂದು ಅವರು ದಾಖಲೆಗಳನ್ನು ಬಹಿರಂಗಗೊಳಿಸಿ ಮನವಿ ಮಾಡಿದರು.
ಬಿಬಿಎಂಪಿಯಲ್ಲಿ ಕಸ ನಿರ್ವಹಣೆಗೆ ಮಾತ್ರ ಪೌರ ಕಾರ್ಮಿಕರ ಸಂಖ್ಯೆ ಒಟ್ಟು 32,000 ಇದ್ದು, ಆಶ್ಚರ್ಯಕರ ಸಂಗತಿ ಎಂದರೆ 700 ಪೌರಕಾರ್ಮಿಕರು ಮಾತ್ರ ಖಾಯಂ ಆಗಿದ್ದಾರೆ. ಉಳಿದ 16,000 ಪೌರ ಕಾರ್ಮಿಕರಿಗೆ ಪಾಲಿಕೆಯು ನೇರ ವೇತನವನ್ನು ಮಾತ್ರ ನೀಡುತ್ತಿದೆ. 16,000 ಕಾರ್ಮಿಕರು ಗುತ್ತಿಗೆ ಏಜೆನ್ಸಿಗಳ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಯಾವಾಗಲೂ ಮೂರು ತಿಂಗಳ ವೇತನ ಬಾಕಿ
ಪೌರಕಾರ್ಮಿಕರಿಗೆ ಸದಾ ಮೂರು ತಿಂಗಳ ಸಂಬಳ ಸದಾ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮೂಲಕ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲು ಬಿಬಿಎಂಪಿ ಗುತ್ತಿಗೆದಾರರುಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ರೋಪಿಸಿದರು.
ಕಸ ವಿಲೇವಾರಿ ಗುತ್ತಿಗೆದಾರರು 'ಶ್ರೀ ಭುವನೇಶ್ವರಿ ಎಂಟರ್ಪ್ರೈಸಸ್, ಹಠಾರಿ ಸೆಕ್ಯೂರಿಟಿ ಸರ್ವಿಸಸ್, ನೋವೇಲಿ, ಸೆಕ್ಯೂರಿಟಿ ಸರ್ವಿಸಸ್, ಡೈರೆಕ್ಟ್ ವೆಲ್ ಸೆಕ್ಯೂರಿಟಿ ಸರ್ವಿಸಸ್, ಡಿಟೆಕ್ಟ್ ವೆಲ್ ಸೆಕ್ಯೂರಿಟಿ ಸರ್ವಿಸಸ್ ಸೇರಿದಂತೆ ಇತರ ಗುತ್ತಿಗೆದಾರರು ಇಎಸ್ಐ-ಪಿಎಫ್ ಕಟ್ಟಿರುವ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಿಯೇ ಇಲ್ಲ. ಬಿಬಿಎಂಪಿಯು ಸಹ ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಲಭ್ಯ ಮಾಹಿತಿಯ ಪ್ರಕಾರ, ಆರ್ ಆರ್ ನಗರ ವಲಯದಲ್ಲಿ ಮಾತ್ರವೇ 2018/19 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ವಯ 14 ವಾರ್ಡ್‌ಗಳ ಪೈಕಿ ಕೇವಲ 9 ವಾರ್ಡ್ ಗಳಲ್ಲಿ ಆಯ್ದ ಕೆಲವೇ ತಿಂಗಳುಗಳು ಮಾತ್ರ ಇಎಸ್ಐ /ಪಿಎಫ್ ಅನ್ನು ಪಾವತಿಸಲಾಗಿದೆ. 7 ಕೋಟಿಯ 14 ಲಕ್ಷದ 31,668 ರೂ. ಬಾಕಿ ಉಳಿಸಿಕೊಳ್ಳಲಾಗಿದೆ.
ಬಲಾಢ್ಯ ರಾಜಕಾರಣಿ-ಅಧಿಕಾರಿಗಳು ಕೈವಾಡ: ತನಿಖೆ ನಡೆಸಿ
ಈ ವಲಯ ಒಂದರಲ್ಲೇ 18,636 ಪೌರಕಾರ್ಮಿಕರು ಇದ್ದಾರೆಂದು ಲೆಕ್ಕ ನೀಡಿರುವುದು ತೀರ ಅವಾಸ್ತವ ಸಂಗತಿ. ಈ ಸಂಖ್ಯೆಯಲ್ಲಿಯೇ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಬೃಹತ್ ಹಗರಣದ ಹಿಂದೆ ಬಲಾಢ್ಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ನೇರ ಕೈವಾಡವಿದೆ. ತನಿಖೆಯ ಮೂಲಕವೇ ಇದು ಹೊರಬೀಳಲು ಸಾಧ್ಯ ಎಂದ ಅವರು ತನಿಖೆ ನಡೆಸುವಂತೆ ಆಗ್ರಹಿಸಿದರು.
ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಮಾತನಾಡಿ, ಘನ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಅಲ್ಲಿನ ಕಾರ್ಮಿಕರಿಗೆ ಪಾಲಿಕೆಯಿಂದ ನೇರ ವೇತನ ಪಾವತಿಯನ್ನು ಇದುವರೆಗೂ ಮಾಡಲಾಗಿಲ್ಲ. ಗುತ್ತಿಗೆದಾರರು ಕಟ್ಟಡ ಕಾರ್ಮಿಕರ ಸೆಸ್ ಅನ್ನು ಸಹ ಕಟ್ಟಿಲ್ಲ. ಇದರಿಂದಲೇ ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಡುವಿನ ಅಕ್ರಮ ಒಳ ಒಪ್ಪಂದದ ಸುಳಿವು ಸಿಗುತ್ತದೆ.
ಕಾರ್ಮಿಕರಿಗೆ ರಕ್ಷಣೆಯೇ ಇಲ್ಲ
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು ಸಹ ಯಾವೊಂದು ನೋಟಿಸ್ ಅನ್ನು ಸಹ ಇದುವರೆಗೂ ಬಿಬಿಎಂಪಿ ಹಾಗೂ ಅಲ್ಲಿನ ಗುತ್ತಿಗೆದಾರರಿಗೆ ನೀಡದಿರುವುದು ಗಮನಿಸಿದರೆ ಕಾರ್ಮಿಕ ಇಲಾಖೆಯು ಕಾರ್ಮಿಕ ರಕ್ಷಣೆಗಾಗಿ ಇದೆಯೋ ಅಥವಾ ಗುತ್ತಿಗೆದಾರರ ರಕ್ಷಣೆಗೆ ಇದೆಯೋ ಎಂಬ ಅನುಮಾನ ಮೂಡುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.
ಎಎಪಿ ಬೆಂಗಳೂರು ನಗರ ಉಸ್ತುವಾರಿ ಮೋಹನ್ ದಾಸರಿ ಅವರು ಗುತ್ತಿಗೆದಾರರ ಬಿಲ್ ಹಣ ಬಿಡುಗಡೆ ತಡೆಹಿಡಿಬೇಕು ಎಂದರು. ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ಡಾಕ್ಟರ್ ಸತೀಶ್ ಕುಮಾರ್, ಜಗದೀಶ್ ಚಂದ್ರ, ಮೃತ್ಯುಂಜಯ, ವಿಶ್ವನಾಥ್, ಕುಶಲ ಸ್ವಾಮಿ, ಉಷಾ ಮೋಹನ್, ಸುಷ್ಮಾ ವೀರ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.












Click it and Unblock the Notifications