ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಕಾಲಿಗೆ ಗುಂಡೇಟು
ಬೆಂಗಳೂರು, ಜ. 03: ಹತ್ತು ರೂಪಾಯಿ ನೋಟಿನ ಆಸೆ ತೋರಿಸಿ ದ್ವಿಚಕ್ರ ವಾಹನದಲ್ಲಿದ್ದ 1.60 ಲಕ್ಷ ರೂ. ಹಣ ದೋಚಿ ಓಜಿಕುಪ್ಪಂ ಗ್ಯಾಂಗ್ ಕೃತ್ಯ. ಹೋಟೆಲ್‌ನಲ್ಲಿ ಸಿಲಿಂಡರ್ ಸ್ಫೋಟದಿಂದ ಓರ್ವ ವ್ಯಕ್ತಿಗೆ ಗಾಯ. ರೌಡಿಶೀಟರ್‌ಗೆ ಗುಂಡೇಟು. ಇದು ಬೆಂಗಳೂರು ಅಪರಾಧ ಸುದ್ದಿಯ ಚಿತ್ರಣ.
10 ರೂ. ಆಸೆ ತೋರಿಸಿ 1.60 ಲಕ್ಷ ದೋಖಾ:
ಗಮನ ಬೇರಡೆ ಸೆಳೆದು ಹಣ ದೋಚುವ ಓಜಿಕುಪ್ಪಂ ಗ್ಯಾಂಗ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಹತ್ತು ರೂಪಾಯಿ ರಸ್ತೆ ಮೇಲೆ ಬಿಸಾಡಿ ವ್ಯಕ್ತಿಯ ಗಮನ ಬೇರಡೆ ಸೆಳೆದು ಬೈಕ್ ನಲ್ಲಿದ್ದ 1.60 ಲಕ್ಷ ರೂ. ಹಣವನ್ನು ದೋಚಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೆಂಕಟೇಶ್ ಎಂಬಾತ ಹಣ ಕಳೆದುಕೊಂಡ ವ್ಯಕ್ತಿ. ಹಣದ ಅಗತ್ಯತೆ ಬಿದ್ದು, ಕಾಫಿಬೋರ್ಡ್ ಬಳಿ ಇದ್ದ ಎಸ್‌ಬಿಐ ಬ್ಯಾಂಕ್ ನಲ್ಲಿ ಮಗಳ ಚಿನ್ನದ ಆಭರಣ ಗಿರವಿ ಇಟ್ಟಿದ್ದರು. ಮರು ದಿನ ಬೆಳಗ್ಗೆ 1.66 ಲಕ್ಷ ರೂ. ಹಣವನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದರು. ಕಾಫಿ ಕುಡಿಯಲೆಂದು ಬೈಕ್ ನಿಲ್ಲಿಸಿ ತೆರಳುವ ವೇಳೆ ವ್ಯಕ್ತಿಯೊಬ್ಬ ಮೊಬೈಲ್ ಹಿಡಿದುಕೊಂಡು ಅಡ್ಡ ಬಂದಿದ್ದಾನೆ. ರಸ್ತೆ ಬದಿ ಹತ್ತು ರೂ. 20 ರೂ. ಮುಖಬೆಲೆಯ ನೋಟುಗಳನ್ನು ಬಿಸಾಡಿದ್ದು, ಹಣ ಬಿದ್ದಿರುವ ಬಗ್ಗೆ ತಿಳಿಸಿದ್ದಾರೆ.

ಇದರಿಂದ ಗಾಬರಿಗೊಂಡ ವೆಂಕಟೇಶ್ ಹತ್ತು ರೂಪಾಯಿ ನೋಟುಗಳನ್ನು ತೆಗೆದುಕೊಳ್ಳುವಷ್ಟರಲ್ಲಿ ಬೈಕ್‌ನ ಡಿಕ್ಕಿಯಲ್ಲಿಟ್ಟಿದ್ದ 1.66 ಲಕ್ಷ ರೂ. ಹಣವನ್ನು ಎಗರಿಸಿ ಓಜಿಕುಪ್ಪಂ ಗ್ಯಾಂಗ್ ಪರಾರಿಯಾಗಿದೆ. ಬೈಕ್ ಡಿಕ್ಕಿ ನೋಡಿದಾಗ ಹಣ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನೂ ಕೊತ್ತನೂರು ಪೊಲೀಸ್ ಠಾಣೆ ಸಮೀಪ ಇದೇ ರೀತಿ ಹಣ ದೋಚಲು ಯತ್ನಿಸಿ ಓಜಿಕುಪ್ಪಂ ಗ್ಯಾಂಗ್ ನ ಸದಸ್ಯರಿಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರ ಜತೆ ನಾಲ್ವರು ಎಸ್ಕೇಪ್ ಆಗಿದ್ದು, ವಿಚಾರಣೆ ವೇಳೆ ಓಜಿಕುಪ್ಪಂ ಗ್ಯಾಂಗ್ ಎಂಬುದು ಬೆಳಕಿಗೆ ಬಂದಿದೆ.

ಹೋಟೆಲ್ ನಲ್ಲಿ ಸಿಲಿಂಡರ್ ಸ್ಫೋಟ:
ವಿಜಯನಗರ ಸಮೀಪದ ಚಂದ್ರಾಲೇಔಟ್ ನ ಹೋಟೆಲ್‌ನಲ್ಲಿ ಸಿಲಿಂಡರ್ ಸ್ಫೋಟಿಸಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ. ಆದರೆ ಬಹುದೊಡ್ಡ ಅನಾಹುತದಿಂದ ಪಾರಾಗಿದ್ದು, ಹೆಚ್ಚಿನ ಹಾನಿಯಾಗಿಲ್ಲ. ಎರಡು ಅಂತಸ್ತಿನ ಕಟ್ಟಡದಲ್ಲಿ ಮೊದಲನೇ ಮಹಡಿಯಲ್ಲಿ ಪಿಜಿಯಿದೆ. ನೆಲ ಮಹಡಿಯಲ್ಲಿ ಹೋಟೆಲ್ ಇಟ್ಟಿದ್ದು, ಸಿಲಿಂಡರ್ ಸ್ಫೋಟಿಸಿದೆ. ಈ ವೇಳೆ ಮಹೇಶ್ ಎಂಬಾತ ಗಾಯಗೊಂಡಿದ್ದು, ಯಾರೂ ಬಾರದಂತೆ ಲಾಕ್ ಮಾಡುವ ಮೂಲಕ ಅನಾಹುತ ತಪ್ಪಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ರೌಡಿ ಶೀಟರ್ ಕಾಲಿಗೆ ಬುಲೆಟ್:
ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ರೌಡಿ ಶೀಟರ್ ಕಾಲಿಗೆ ಸಿದ್ದಾಪುರ ಪೊಲೀಸರು ಗುಂಡು ಇಳಿಸಿದ್ದಾರೆ. ಸಿದ್ದಾಪುರ ರೌಡಿ ಶೀಟರ್ ಫರ್ವೇಜ್ ಗುಂಡೇಟು ತಿಂದು ಬಂಧನಕ್ಕೆ ಒಳಗಾದ ಆರೋಪಿ. ಈತ ರಾತ್ರಿ ವೇಳೆ ಲಾಲ್ ಬಾಗ್ ಸಮೀಪ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ. ಈ ಕುರಿತು ಹಲವು ದೂರು ದಾಖಲಾಗಿದ್ದವು. ಪ್ರಕರಣ ಸಂಬಂಧ ತಲಘಟ್ಟಪುರದಲ್ಲಿದ್ದ ಫರ್ವೇಜ್‌ನನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಆತ್ಮ ರಕ್ಷಣೆಗಾಗಿ ಸಿದ್ದಾಪುರ ಪೊಲೀಸ್ ಇನ್ಸ್‌ಸ್ಪೆಕ್ಟರ್ ಆಂತೋನಿ ರಾಜ್ ಗುಂಡು ಹಾರಿಸಿದ್ದು, ಬಂಧಿಸಿದ್ದಾರೆ. ಜೆಪಿನಗರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದು, ಬೈಕ್ ನಲ್ಲಿ ಬಂದು ಸಾರ್ವಜನಿಕರಿಂದ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ. ಪಾದರಾಯನಪುರ ಗಲಾಟೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ. ಈ ಕುರಿತು ತಲಘಟ್ಟ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications