ಜ್ಯೂಸರ್ ಯಂತ್ರದಲ್ಲಿ ಚಿನ್ನ ಬಚ್ಚಿಟ್ಟು ಸಿಕ್ಕಿಬಿದ್ದ ಸ್ಮಗ್ಲರ್
ಬೆಂಗಳೂರು, ಡಿ. 23: ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಇಟ್ಟು ಕಳ್ಳ ಸಾಗಣೆ ಮಾಡಲು ಹೋಗಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಪ್ರಯಾಣಿಕ. ಪುಟ್ಟೇನಹಳ್ಳಿ ಪೊಲೀಸರು ಪತ್ತೆ ಮಾಡಿದ್ದ ಹವಾಲ ದಂಧೆ ಪ್ರಕರಣದ ತನಿಖೆಗೆ ಇಡಿ ಎಂಟ್ರಿ. ವಿದೇಶಕ್ಕೆ ಹಾರಲು ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿಗಳ ಬಂಧನ, ಓಜೋನ್ ಬಿಲ್ಡರ್‌ನಿಂದ ಗ್ರಾಹಕರಿಗೆ ವಂಚನೆ. ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ. ಇದು ಬೆಂಗಳೂರು ಅಪರಾಧ ಸುದ್ದಿಯ ಚಿತ್ರಣ.
ಜ್ಯೂಸರ್ ಯಂತ್ರದಲ್ಲಿ ಚಿನ್ನ ಸಾಗಣೆ:
ವಿದೇಶದಿಂದ ಭಾರತಕ್ಕೆ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಲು ನಾನಾ ಕಸರತ್ತು ಮಾಡಿ ಸೀಮಾಸುಂಕ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಈ ಬಾರಿ ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಇಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಏರ್‌ಫೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 45 ಲಕ್ಷ ರೂ. ಮೌಲ್ಯದ ಚಿನ್ನದ ರಾಡ್ ವಶಪಡಿಸಿಕೊಳ್ಳಲಾಗಿದೆ.
ಶಾರ್ಜಾದಿಂದ ದೇವನಹಳ್ಳಿ ಏರ್‌ಪೋರ್ಟ್‌ಗೆ ಮಂಗಳವಾರ ವಿದೇಶದಿಂದ ಬಂದಿದ್ದ ಪ್ರಯಾಣಿಕ ಜ್ಯೂಸರ್ ಯಂತ್ರ ತಂದಿದ್ದ. ಅದರ ಬಗ್ಗೆ ಅನುಮಾನಗೊಂಡು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನದ ರಾಡ್ ಜ್ಯೂಸರ್ ಯಂತ್ರದಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಿದ್ದು, 930 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಪುಟ್ಟೇನಹಳ್ಳಿ ಹವಾಲ ಪ್ರಕರಣ ಇಡಿ ವ್ಯಾಪ್ತಿಗೆ :
ಎಟಿಎಂನಲ್ಲಿ ಬೇನಾಮಿ ಖಾತೆಗಳಿಗೆ ಹಣ ದಾಖಲಿಸುವ ಅನುಮಾನಸ್ಪದ ವ್ಯಕ್ತಿಯ ಜಾಡು ಹಿಡಿದು ಪುಟ್ಟೇನಹಳ್ಳಿ ಪೊಲೀಸರು 700 ಕೋಟಿ ರೂ. ಮೊತ್ತದ ಹವಾಲ ದಂಧೆ ಪ್ರಕರಣ ಬಯಲಿಗೆ ಎಳೆದಿದ್ದರು. ಈ ಪ್ರಕರಣದ ತನಿಖೆಯನ್ನು ಇಡಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಹೊಸ ಸ್ವರೂಪದ ಹವಾಲ ಪ್ರಕರಣದಲ್ಲಿ ವಿದೇಶಿಯರು ಶಾಮೀಲಾಗಿದ್ದು, ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಪುಟ್ಟೇನಹಳ್ಳಿ ಪೊಲೀಸರು 2886 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದು, ಫೈಸಲ್, ಫಜಲ್, ಸಾಹಿಲ್ ಮತ್ತು ಮನಾಪ್ ಎಂಬುವರನ್ನು ಬಂಧಿಸಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ ವಿದೇಶದಿಂದ ಕೇರಳಗೆ ಹಣ ರವಾನೆಯಾಗುತ್ತಿದ್ದು, ಬೆಂಗಳೂರಿನ ಮೂಲಕ ವಿವಿಧ ಖಾತೆಗಳಿಗೆ ರವಾನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಹೆಚ್ಚಿನ ತನಿಖೆ ವೇಳೆ ಸುಮಾರು 700 ಕೋಟಿ ರೂ. ವಹಿವಾಟು ನಡೆದಿರುವುದು ಪತ್ತೆಯಾಗಿದ್ದು, ಕೇರಳ ಮೂಲದ ರಿಯಾಝ್ ಮತ್ತು ಮನಸ್ ಸಹೋದರರು ಈ ದಂಧೆಯ ಕಿಂಗ್‌ಪಿನ್ ಗಳು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನೂರಾರು ಕೋಟಿ ವಹಿವಾಟಿನ ದಂಧೆ ಜಾಡು ಹಿಡಿದು ಇದೀಗ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ವಿದೇಶಕ್ಕೆ ತೆರಳಲು ನಕಲಿ ದಾಖಲೆ ಸೃಷ್ಟಿ:
ವಿದ್ಯಾರ್ಥಿ ವೀಸಾ ಮೇಲೆ ವಿದೇಶಕ್ಕೆ ತೆರಳಲು ನಕಲಿ ದಾಖಲೆ ಸೃಷ್ಟಿಸಿದ ಇಬ್ಬರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಶಾಜಿ ಮತ್ತು ಅನುರಾಗ್ ಬಂಧಿತ ಆರೋಪಿಗಳು. ಶಾಜಿ ವಿದ್ಯಾರ್ಥಿ ವೀಸಾ ಮೇಲೆ ಇಂಗ್ಲೆಂಡ್ ಗೆ ತೆರಳಲು ಪ್ಲಾನ್ ರೂಪಿಸಿದ್ದ. ಸೇಲ್ಸ್ ಮ್ಯಾನ್ ಆಗಿರುವ ಶಾಜಿ ವಿದೇಶದಲ್ಲಿ ದುಡಿಮೆ ಮಾಡಲು ವಿದ್ಯಾರ್ಥಿ ವೀಸಾ ಪಡೆಯಲು ಯತ್ನಿಸಿದ್ದ. ಇದಕ್ಕೆ ಬೇಕಾದ ನಕಲಿ ಬಿಬಿಎಂ ಅಂಕಪಟ್ಟಿ ಪಡೆದುಕೊಂಡಿದ್ದು, ಗುಲ್ಬರ್ಗಾ ವಿವಿಯ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದ. ಈ ವೇಳೆ ಆರೋಪಿಯನ್ನು ಇಮಿಗ್ರೇಷನ್ ಅಧಿಕಾರಿಗಳಿಗೆ ವಹಿಸಲಾಗಿದೆ. ಇದೇ ವೇಳೆ ಅನುರಾಗ್ ಕೂಡ ಸಿಕ್ಕಿಬಿದ್ದಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಓಜೋನ್ ಬಿಲ್ಡರ್ಸ್ ಮೇಲೆ ಎಫ್ಐಆರ್:
ಮನೆ ಕಟ್ಟಿಕೊಡುವುದಾಗಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಸಂಬಂಧ ಓಜೋನ್ ಬ್ಯುಲ್ಡರ್ಸ್ ಮೇಲೆ ಎಫ್ಐಆರ್ ದಾಖಲಾಗಿದೆ. ದೇವನಹಳ್ಳಿ ಏರ್‌ಪೋರ್ಟ್ ಬಳಿ ಓಜೋನ್ ಅಬೆರ್ನಿಯಾ ಟೌನ್ ಶಿಪ್ ಶುರು ಮಾಡಿದ್ದ ಓಜೋನ್ ಗ್ರೂಪ್ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡಿತ್ತು. ಸಾವಿರಾರು ಜನ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ, ಟೌನ್ ಶಿಪ್ ಕಾಮಗಾರಿ ನಿಲ್ಲಿಸಿದ್ದು, ಹಣ ಕೊಟ್ಟವರು ಇದೀಗ ಬ್ಯಾಂಕ್ ಬಡ್ಡಿ ಕಟ್ಟಲಾಗದೇ ಪರದಾಡುತ್ತಿದ್ದಾರೆ. ನೊಂದ ಗ್ರಾಹಕರು ಓಜೋನ್ ಗ್ರೂಪ್ ಮೇಲೆ ಕೇಸು ದಾಖಲಿಸಿದ್ದು, ಕೊಡಿಗೇಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳ ಸಾವು:
Recommended Video
ಟ್ಯಾಂಕರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟದ ಕೆಂಪನಾಯಕನ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ಈ ಘಟನೆ ಸಂಭವಿಸಿದ್ದು, ಎಂಎಲ್ ಸಿ ಕಾಲೇಜಿನ ಬಿಎಂಎಚ್ ವಿದ್ಯಾರ್ಥಿ ಕೌಶಿಕ್ ಮತ್ತು ಸುಷ್ಮಾ ಮೃತಪಟ್ಟಿದ್ದಾರೆ. ಸಾರಕ್ಕಿ ನಿವಾಸಿಗಳಾದ ಕೌಶಿಕ್ ಮತ್ತು ಸುಷ್ಮಾ ಊಟಕ್ಕೆಂದು ಬನ್ನೇರುಘಟ್ಟ ರಸ್ತೆ ಕಡೆ ಹೋಗಿದ್ದು, ಊಟ ಮುಗಿಸಿ ಬರುವಾಗ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಬನ್ನೇರುಘಟ್ಟ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.












Click it and Unblock the Notifications