ಜಿರಲೆ ಔಷಧಿಯಿಂದಲೇ ಅತ್ತೆ ಹತ್ಯೆಗೆ ಸಂಚು ರೂಪಿಸಿ ಸಿಕ್ಕಿಬಿದ್ದ ಸೊಸೆ!
ಬೆಂಗಳೂರು, ಡಿ. 15: ಅತ್ತೆಯನ್ನು ಕೊಲ್ಲಲು ಸೊಸೆ ಖತರ್ನಾಕ್ ಪ್ಲಾನ್. ಅತ್ತೆಯನ್ನು ಕೊಲ್ಲಲು ಜಿರಳೆ ಔಷಧಿ ತರಿಸಿಕೊಳ್ಳುವ ವಿಚಾರವಾಗಿ ನಡೆಸಿದ ಸಂಭಾಷಣೆಯಿಂದ ಕೃತ್ಯ ಬಯಲು. ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದ ಪೆಡ್ಲರ್‌ಗಳ ಬಂಧನ, ಬನಶಂಕರಿ ಪೊಲೀಸರ ಕಾರ್ಯಾಚರಣೆ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ಅತ್ತೆ ಮತ್ತು ಸೊಸೆ ಜಗಳ ಬಹುತೇಕ ಮನೆಗಳಲ್ಲಿ ಸಾಮಾನ್ಯ. ಆದರೆ ಇಲ್ಲೊಬ್ಬ ಸೊಸೆ ತನ್ನ ಅತ್ತೆ ಕೊಲೆಗೆ ಖತರ್ನಾಕ್ ಪ್ಲಾನ್ ರೂಪಿಸಿದ್ದಾಳೆ. ಅದನ್ನು ಕಾರ್ಯಗತ ಮಾಡುವ ವೇಳೆ ಆಕಸ್ಮಿಕ ರೆಕಾರ್ಡ್ ಆಗಿ ಅದು ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಅಮೇಲೆ ಏನಾಯಿತು ಗೊತ್ತಾ ?
ಆಕೆ ಹೆಸರು ಅಯಿಷಾ, ಈಕೆಯ ಗಂಡನ ಹೆಸರು ಆಸೀಫ್, ಗಂಡ ಹೆಂಡತಿಯದ್ದು ನೆಮ್ಮದಿ ಜೀವನ. ಆಯಿಷಾ ಆಸೀಫ್ ಜತೆಗೆ ಅತ್ತೆ ಕೂಡ ಮನೆಯಲ್ಲಿದ್ದಳು. ಕ್ಷುಲ್ಲಕ ವಿಚಾರಕ್ಕಾಗಿ ಯಾವಾಗಲೂ ಆಯಿಷಾ ಮತ್ತು ಅತ್ತೆ ನಡುವೆ ಜಗಳ ನಡೆಯುತ್ತಿತ್ತು. ಗಂಡ ಕೆಲಸದ ನಿಮಿತ್ತ ಹೊರ ಹೋದಾಗ ಇಬ್ಬರೂ ಬೈದಾಡಿ ಜಗಳ ಮಾಡಿಕೊಳ್ಳುತ್ತಿದ್ದರು. ಅತ್ತೆಗೆ ಒಂದು ಗತಿ ಕಾಣಿಸಲು ಪ್ಲಾನ್ ರೂಪಿಸಿರುವ ಆಯಿಷಾ, ಊಟದಲ್ಲಿ ಜಿರಲೆ ಔಷಧಿ ಹಾಕಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾಳೆ. ಅದರ ಜತೆಗೆ ನಿದ್ರೆ ಮಾತ್ರೆಯನ್ನೂ ಬೆರೆಸಿ ಜೀವ ತೆಗೆಯಲು ಪ್ಲಾನ್ ರೂಪಿಸಿದ್ದಾಳೆ. ಅದರಂತೆ ಜಿರಲೆ ಔಷಧಿಯನ್ನು ತರಿಸಿಕೊಳ್ಳಲು ಆಯಿಷಾ ತನ್ನ ತಾಯಿ ಜತೆ ಕರೆ ಮಾಡಿ ಮಾತನಾಡಿದ್ದಾಳೆ.

ನನ್ನ ಅತ್ತೆಯನ್ನು ಸಾಯಿಸಲಿಕ್ಕೆ ಮನೆಯಲ್ಲಿ ಜಿರಲೆ ಔಷಧಿ ಖಾಲಿಯಾಗಿದೆ. ನನಗೆ ಜಿರಲೆ ಔಷಧಿ ತಂದು ಕೊಡಿ ಎಂದು ಹೇಳಿದ್ದಾಳೆ. ತಾಯಿ ಜತೆ ಸಂಭಾಷಣೆ ಮಾಡಿರುವುದು ಅಕಸ್ಮಿಕ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಇತ್ತೀಚೆಗೆ ಊಟದಲ್ಲಿ ಜಿರಲೆ ಔಷಧಿ ಮತ್ತು ನಿದ್ರೆ ಮಾತ್ರೆ ಸೇರಿಸಿ ಕೊಟ್ಟಿದ್ದಾಳೆ. ಊಟ ಸೇವಿಸಿದ ಕೂಡಲೇ ಆಸಿಫ್ ತಾಯಿ ಅಸ್ವಸ್ಥಗೊಂಡಿದ್ದಾರೆ. ಮೊದಲು ಅನಾರೋಗ್ಯ ಎಂದು ಭಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಆಸಿಫ್ ಕುಟುಂಬ ಚೇತಿರಿಸಿಕೊಂಡಿತ್ತು. ಇದಾಗಿ ಕೆಲ ದಿನಗಳ ನಂತರ ಪತ್ನಿಯ ಕೃತ್ಯ ಬಯಲಿಗೆ ಬಂದಿದ್ದು, ಆಯಿಷಾ ತನ್ನ ತಾಯಿ ಜತೆ ಮಾತನಾಡಿದ್ದ ಅಡಿಯೋ ಸಿಕ್ಕಿದೆ. ಇದರಿಂದ ಬೆಚ್ಚಿಬಿದ್ದಿರುವ ಆಸಿಫ್, ತನ್ನ ಪತ್ನಿ ಆಯಿಷಾ, ಹುಸೇನ್ ಸಾಬ್, ಕಮರ್ ತಾಜ್, ಹರಾರತ್ ಮತ್ತಿತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿಯ ಕೃತ್ಯ ಕೇಳಿ ಗಂಡ ಅಸಿಫ್ ಇದೀಗ ಬೆಚ್ಚಿ ಬಿದ್ದಿದ್ದಾನೆ.

ಗಾಂಜಾ ಮಾರಾಟ ಇಬ್ಬರ ಸೆರೆ:
ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಶಬ್ಬೀರ್ ಮತ್ತು ಅನೀಲ್ ಬಂಧಿತ ಆರೋಪಿಗಳು. ಬಂಧಿತರಿಂದ ಎಂಟು ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಇವರು, ಕಾಲೇಜು ಸಮೀಪವೇ ಹೋಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬನಶಂಕರಿ ಪೊಲೀಸರಿಂದ ಕಾರ್ಯಾಚರಣೆ: ಬೆಂಗಳೂರಿನಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆ ಹಾಗೂ ಮೂವರು ಅಂತರಾಜ್ಯ ಡ್ರಗ್ ಪೆಡ್ಲರ್ ಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಡಾಲ್ಲೋ ಬಾರ್ಥೆಲಿಮಿ, ಸ್ಯಾಮುಯಲ್, ಅಹ್ಮದ್, ಆಲಂ, ರೆಹಮಾನ್, ಯೂನಸ್ ಬಂಧಿತ ಆರೋಪಿಗಳು. ದಕ್ಷಿಣ ವಿಭಾಗದ ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್, ಹಾಗೂ ಬಶಶಂಕರಿ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಅರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಕೊಕೆನ್, ಎಂಡಿಎಂಎ, ಮೊಬೈಲ್ ಹಾಗೂ ನಗದು ಹಣ ವಶಪಡಿಸಿಕೊಂಡಿದ್ದಾರೆ.












Click it and Unblock the Notifications