ಡಿ.ಕೆ.ಶಿವಕುಮಾರ್ ಶಪಥ ಮುರಿಯಲು ಬಿಜೆಪಿ ರಣತಂತ್ರ!
Recommended Video

ಬೆಂಗಳೂರು, ಮಾರ್ಚ್ 12 : ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಒಂದು ಮತಗಳ ಹೆಚ್ಚಿನ ಅಂತರದಲ್ಲಿ ಬೆಂಗಳೂರು ಗ್ರಾಮಾಂತ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಆಪ್ತರ ಬಳಿ ಹೇಳಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಈ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಡಿ.ಕೆ.ಸುರೇಶ್ ಕಟ್ಟಿ ಹಾಕಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಆದರೆ, ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ ವಶದಲ್ಲಿದೆ.
ರಾಮನಗರ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಅವರ ಹೆಸರು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿಯಿಂದ ಕೇಳಿಬರುತ್ತಿದೆ. ಬಿಜೆಪಿ ನಾಯಕರು ಸಿ.ಪಿ.ಯೋಗೇಶ್ವರ ಅವರ ಕಡೆಗೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಸಿ.ಪಿ.ಯೋಗೇಶ್ವರ ಅವರು ಡಿ.ಕೆ.ಸುರೇಶ್ ಅವರಿಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿ ಎಂಬುದು ನಾಯಕರ ಅಭಿಪ್ರಾಯ. ಆದ್ದರಿಂದ, ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಬಿಜೆಪಿ ನಾಯಕರ ಸಭೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸೋಮವಾರ ಸಭೆ ನಡೆಯಿತು. ಆರ್.ಅಶೋಕ ಸೇರಿದಂತೆ ಇತರ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರದಲ್ಲಿಯಾರನ್ನು ಕಣಕ್ಕಿಳಿಸಬೇಕು? ಎಂದು ಸುಧೀರ್ಘವಾದ ಚರ್ಚೆ ನಡೆಯಿತು.

ಆರ್.ಅಶೋಕ ಹೇಳಿಕೆ
ಸಭೆಯ ಬಳಿಕ ಮಾತನಾಡಿದ ಆರ್.ಅಶೋಕ ಅವರು, 'ಸಿ.ಪಿ.ಯೋಗೇಶ್ವರ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.

ಆಕಾಂಕ್ಷಿಗಳು ಯಾರು?
2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರ ಲೋಕಸಭಾ ಕ್ಷೇತ್ರದ ಬದಲು ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಚನೆ ಮಾಡಲಾಯಿತು. ಎರಡು ಸಾರ್ವತ್ರಿಕ ಚುನಾವಣೆ, ಒಂದು ಉಪ ಚುನಾವಣೆ ನಡೆದಿದ್ದು, ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಹಾಲಿ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದು, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ, ತುಳಸಿ ಮುನಿರಾಜು ಗೌಡ, ಎಂ.ರುದ್ರೇಶ್ ಅಕಾಂಕ್ಷಿಗಳು.

ಯಾರ-ಯಾರ ಗೆಲುವು?
ಕ್ಷೇತ್ರದಲ್ಲಿ 2009ರ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದಾಗ ನಡೆದ ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಗೆದಿದ್ದರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ದಾರೆ. 2009ರಲ್ಲಿ ಕುಮಾರಸ್ವಾಮಿ ಎದುರಾಳಿಯಾಗಿದ್ದ ಸಿ.ಪಿ.ಯೋಗೇಶ್ವರ ಅವರು ಈ ಬಾರಿ ಡಿ.ಕೆ.ಸುರೇಶ್ ಎದುರಾಳಿಯಾಗುವ ಸಾಧ್ಯತೆ ಇದೆ.

ಚುನಾವಣೆ ಸುಲಭವಾಗಬಾರದು
ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಸಿಲ್ಲ ಎಂದರೆ ಡಿಕೆಶಿ ಸಹೋದರರಿಗೆ ಚುನಾವಣೆ ಸುಲಭವಾಗಲಿದೆ. ಹಾಗೆ ಆಗಬಾರದು ಎಂಬುದು ಬಿಜೆಪಿ ಲೆಕ್ಕಾಚಾರ. ಅದಕ್ಕಾಗಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಯಾರು ಅಭ್ಯರ್ಥಿಯಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications