ಒಳ್ಳೇ ಸುದ್ದಿ: ಕರ್ನಾಟಕದಲ್ಲಿ ಕೊರೊನಾ ವೈರಸ್ ಗೆ ಗುದ್ದು ಕೊಡುತ್ತಿದೆ 'ಈ' ಚಿಕಿತ್ಸೆ.!
ಬೆಂಗಳೂರು, ಜೂನ್ 5: ವಿಶ್ವದಾದ್ಯಂತ 390,000 ಕ್ಕೂ ಅಧಿಕ ಮಂದಿಯ ಪ್ರಾಣ ನುಂಗಿರುವ ಮಹಾಮಾರಿ ಕೊರೊನಾ ವೈರಸ್ ಭಾರತದಲ್ಲೂ ಆರ್ಭಟಿಸುತ್ತಿದೆ. ಭಾರತದಲ್ಲಿ ಈವರೆಗೂ 2,26,770 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆ ಪೈಕಿ 1,09,462 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 6348 ಮಂದಿ ಮೃತಪಟ್ಟಿದ್ದಾರೆ.
Recommended Video
ಕಳೆದ ಆರು ತಿಂಗಳಿನಿಂದಲೂ ನೋವೆಲ್ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಈವರೆಗೂ ಅದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ. ಆದ್ರೆ, ಕೋವಿಡ್-19 ರೋಗ ಗೆದ್ದವರ ರಕ್ತದಲ್ಲಿರುವ ಪ್ಲಾಸ್ಮಾ ಕಣಗಳನ್ನೇ ಚಿಕಿತ್ಸೆಯಾಗಿ ಹಲವು ಕಡೆ ಪ್ರಯೋಗಿಸಲಾಗುತ್ತಿದೆ.
ಕರ್ನಾಟಕದಲ್ಲೂ ಪ್ಲಾಸ್ಮಾ ಥೆರಪಿಯನ್ನು ಪ್ರಯೋಗಿಸಲಾಗಿತ್ತು. ಪ್ಲಾಸ್ಮಾ ಥೆರಪಿ ಎರಡನೇ ಬಾರಿಗೆ ಕರ್ನಾಟಕದಲ್ಲಿ ಯಶಸ್ವಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಕೋವಿಡ್-19 ರೋಗಿ ಪ್ಲಾಸ್ಮಾ ಥೆರಪಿಯಿಂದ ಗುಣಮುಖರಾಗುತ್ತಿದ್ದಾರೆ.

ಗುಡ್ ನ್ಯೂಸ್.!
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ವೈರಸ್ ಸೋಂಕಿತರೊಬ್ಬರು ಪ್ಲಾಸ್ಮಾ ಥೆರಪಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಆರೋಗ್ಯದಲ್ಲಿ ಪ್ಲಾಸ್ಮಾ ಥೆರಪಿ ನೀಡಿದ ಬಳಿಕ ಹೊಸ ಹುರುಪು ಕಂಡುಬಂದಿದೆ.
|
ಟ್ವೀಟ್ ಮಾಡಿರುವ ಶ್ರೀರಾಮುಲು
''ಕೊರೊನಾ ವೈರಸ್ ಸೋಂಕಿನಿಂದ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ ಮಧ್ಯವಯಸ್ಕ ರೋಗಿಯೊಬ್ಬರು ಪ್ಲಾಸ್ಮಾ ಚಿಕಿತ್ಸೆಯಿಂದ ಚೇತರಿಸಿಕೊಂಡು ತೀವ್ರ ನಿಗಾ ಘಟಕದಿಂದ ಬಿಡುಗಡೆಯಾಗಿದ್ದಾರೆ. ಪ್ಲಾಸ್ಮಾ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಎರಡನೇ ಪ್ರಕರಣ ಇದಾಗಿದ್ದು, ಅವರನ್ನು ಸಾಮಾನ್ಯ ವಾರ್ಡ್ ನಲ್ಲಿ ಇರಿಸಲಾಗಿದೆ'' ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
|
ಆದಷ್ಟು ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್
''ಪ್ಲಾಸ್ಮಾ ಥೆರಪಿ ಪಡೆದ ಸೋಂಕಿತ ವ್ಯಕ್ತಿಯ ಆರೋಗ್ಯ ಸುಧಾರಿಸುತ್ತಿದ್ದು, ಆದಷ್ಟು ಬೇಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ. ಇದಕ್ಕಾಗಿ ಶ್ರಮಿಸಿದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಅಭಿನಂದನೆಗಳು'' ಎಂದು ಬಿ.ಶ್ರೀರಾಮುಲು ಟ್ವೀಟಿಸಿದ್ದಾರೆ.

ಕರ್ನಾಟಕದಲ್ಲಿ ಇದು ಎರಡನೇ ಪ್ರಕರಣ
ಕರ್ನಾಟಕದಲ್ಲಿ ಈ ಹಿಂದೆಯೂ ಓರ್ವ ಕೋವಿಡ್-19 ರೋಗಿಯ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗಿಸಲಾಗಿತ್ತು. ಪ್ಲಾಸ್ಮಾ ಥೆರಪಿಯಿಂದ ಆ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದರು. ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಪ್ಲಾಸ್ಮಾ ಥೆರಪಿ ಫಲಕಾರಿಯಾಗಿದೆ.

ಏನಿದು ಪ್ಲಾಸ್ಮಾ ಥೆರಪಿ.?
ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವವರ ರಕ್ತದಲ್ಲಿನ ಪ್ಲಾಸ್ಮಾ ತೆಗೆದು, ಅದನ್ನು ರೋಗಿಯ ದೇಹಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ. ಆ ಮೂಲಕ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗುತ್ತದೆ. ಈ ಪ್ರಕ್ರಿಯೆಗೆ ಪ್ಲಾಸ್ಮಾ ಥೆರಪಿ ಎನ್ನುತ್ತಾರೆ. ರೋಗ ಗೆದ್ದ ಒಬ್ಬ, ಇಬ್ಬರಿಗೆ ಪ್ಲಾಸ್ಮಾ ಡೊನೇಟ್ ಮಾಡಬಹುದಾಗಿದೆ.












Click it and Unblock the Notifications