ಸಚಿವ ಸಂಪುಟ ಸಭೆಗೆ ಕ್ಷಣಗಣನೆ, ಗೆದ್ದ ಜೋಶ್‌ನಲ್ಲಿರುವ ಸರ್ಕಾರದಿಂದ ಬೊಂಬಾಟ್ ಘೋಷಣೆ ನಿರೀಕ್ಷೆ
karnataka cabinet meeting: ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವ ಜೋಶ್‌ನಲ್ಲಿ ಇರುವ ಕಾಂಗ್ರೆಸ್ ಇದೀಗ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಉಪ ಚುನಾವಣೆ ಹಾಗೂ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇದ್ದ ಹಿನ್ನೆಲೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿರಲಿಲ್ಲ. ಇದೀಗ ರಾಜ್ಯ ಸರ್ಕಾರವು ಗುರುವಾರ ಸಚಿವ ಸಂಪುಟ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಅದರಲ್ಲಿ ಡ್ರೈವಿಂಗ್ ಲೈಸೆನ್ಸ್ ಸ್ಮಾರ್ಟ್ ಕಾರ್ಡ್ ಮತ್ತು ನೋಂದಣಿ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ, ಪ್ರವಾಸೋದ್ಯ ಹಾಗೂ ಸಾರಿಗೆ ಇಲಾಖೆಗೆ ಸಂಬಂಧಿಸಿದ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಈಚೆಗೆ ರಾಜ್ಯ ಸರ್ಕಾರದ ಯಾವುದಾದರೂ ಪ್ರಮುಖ ಮಾಹಿತಿಯನ್ನು ರಾಜ್ಯಪಾಲರಿಗೆ ನೀಡಬೇಕಾದರೂ, ಅದನ್ನು ಸಚಿವ ಸಂಪುಟ ಸಭೆಯ ಮುಂದೆ ಇರಿಸಿಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಲಾಗಿತ್ತು. ಹೀಗಾಗಿ, ಅದೇ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಪ್ರವಾಸೋದ್ಯಮಕ್ಕೆ ಭರ್ಜರಿ: ಇನ್ನು ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಬೊಂಬಾಟ ಗಿಫ್ಟ್‌ಗಳನ್ನು ನೀಡುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಅನುಸರಿಸುತ್ತಿದೆ. ಅದರಲ್ಲಿ ಹಂಪಿ ಹಾಗೂ ಮೈಸೂರಿನ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಈ ಭಾಗದ ಪ್ರವಾಸಿ ತಾಣಗಳಿಗೆ ಜನರಲ್ಲಿ ಆಕರ್ಷಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಸ್ವದೇಶ್ ದರ್ಶನ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರು ಸರ್ವಿಸ್ ಟ್ಯಾಕ್ಸ್
ಇನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ (Goods and Service Tax) ಗೂಡ್ಸ್ & ಸರ್ವಿಸ್ ಟ್ಯಾಕ್ಸ್ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ 2024 ಮಂಡನೆಯಾಗುವ ಸಾಧ್ಯತೆ ಇದೆ. ಯಾವ ತಿದ್ದುಪಡಿ ಮಾಡಲಾಗುತ್ತದೆ ಇದರಿಂದ ಜನರಿಗೆ ಆಗುವ ಅನುಕೂಲ ಅಥವಾ ಹೊರೆ ಏನು ಎನ್ನುವ ನಿಖರ ಮಾಹಿತಿ ಸಚಿವ ಸಂಪುಟ ಸಭೆಯ ನಂತರ ತಿಳಿಯಲಿದೆ. ಕರ್ನಾಟಕ ಸಾರ್ವಜನಿಕ ಶಾಲೆಗಳ ಅಭಿವೃದ್ಧಿಗೆ ಹೂಡಿಕೆ ಆಕರ್ಷಿಸುವುದಕ್ಕೂ ಕೆಲವು ತೀರ್ಮಾನಗಳನ್ನು ಇಂದು ತೆಗೆದುಕೊಳ್ಳುವ ನಿರ್ಧಾರ ಅಜೆಂಡಾದಲ್ಲಿ ಇದೆ ಎನ್ನಲಾಗಿದೆ.

ಪ್ರಮುಖ ನಿರ್ಧಾರಗಳ ಸಾಧ್ಯತೆ
* ಕರ್ನಾಟಕದ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ.
* ಚಾಣಕ್ಯ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ನಿರೀಕ್ಷೆ.
* ಕಬ್ಬು ಬೆಳೆಗಾರರಿಗೆ ಗುಡ್‌ನ್ಯೂಸ್ ನೀಡುವ ಸಾಧ್ಯತೆ. ಕಬ್ಬು ತೂಕವನ್ನು ನೋಡಲು ಡಿಜಿಟಲ್ ಯಂತ್ರಗಳನ್ನು ಅಳವಡಿಸಿಕೊಳ್ಳಲು ಅನುದಾನ ಮಂಜೂರು ಮಾಡಲು ಅನುಮತಿ ನೀಡುವ ಸಾಧ್ಯತೆ.
* ಸ್ವದೇಶ್ ದರ್ಶನ್ 2.0ಗೆ ಉತ್ತೇಜನ.
* ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಉತ್ತೇಜನ.
ಬೆಳಗಾವಿ ಅಧಿವೇಶನಕ್ಕೆ ಸಿದ್ಧತೆ: ಡಿಸೆಂಬರ್ 9ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಹೀಗಾಗಿ, ಈ ಅಧಿವೇಶನದ ದೃಷ್ಟಿಯಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ವಿರೋಧ ಪಕ್ಷಗಳು ಮುಗಿಬೀಳದಂತೆ ಹಾಗೂ ಯಾವುದೇ ವಿವಾದಗಳು ಸೃಷ್ಟಿಯಾಗದಂತೆ ಅಳೆದು ತೂಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications