ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಗಲ್ ಹ್ಯಾಂಗೌಟಲ್ಲಿ ಸದಾನಂದ ಗೌಡ ಚಿಟ್ಚಾಟ್

By Prasad
|
Google Oneindia Kannada News

ಬೆಂಗಳೂರು, ಏ. 2 : "ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಾಗ ರಾಜಕೀಯ ಇನ್ನು ಸಾಕು ಅನಿಸಿದೆ ಎಂದು ಹೇಳಿದ್ದು ನಿಜ. ಆದರೆ, ದೇಶದ ಜನರು ಬದಲಾವಣೆ ಕೇಳುತ್ತಿದ್ದಾರೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ನಾಯಕ ಮೋದಿ ರೂಪದಲ್ಲಿ ಸಿಕ್ಕಿದ್ದಾನೆ. ಹಾಗಾಗಿ ಚುನಾವಣಾ ಕಣಕ್ಕೆ ಮರಳಿ ಇದು ಬಹುದೊಡ್ಡ ಕಾರಣವಾಗಿದೆ" ಎಂದು ಸದಾನಂದ ಗೌಡ ಅದೇ ನಗುಮೊಗದಿಂದ ಮತಯಾಚನೆಗೆ ನಿಂತಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಟ್ಟು, ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ದಕ್ಕಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ 60 ವರ್ಷದ ದೇವರಗುಂಡ ವೆಂಕಪ್ಪ ಗೌಡ ಸದಾನಂದ ಗೌಡ (ಮಾರ್ಚ್ 18 ಹುಟ್ಟಿದ ದಿನ) ಅವರು, ಒನ್ಇಂಡಿಯಾ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ಸುದ್ದಿ ವಾಹಿನಿ ನಡೆಸಿದ ಗೂಗಲ್ ಹ್ಯಾಂಗೌಟ್ ವಿಡಿಯೋ ಸಂವಾದದಲ್ಲಿ, ಮತ್ತೆ ಚುನಾವಣೆಗಿಳಿದಿರುವ ಉದ್ದೇಶ ಮತ್ತು ಮುಂದಿನ ಯೋಜನೆಗಳನ್ನು ಹಂಚಿಕೊಂಡರು.

ಸುಮಾರು 1 ಗಂಟೆ ಕಾಲ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಸಂಪಾದಕ ಎಚ್ ಆರ್ ರಂಗನಾಥ್, ಒನ್ಇಂಡಿಯಾ ಕನ್ನಡ ಸಂಪಾದಕ ಎಸ್ ಕೆ ಶಾಮ ಸುಂದರ ಮತ್ತು ಒನ್ಇಂಡಿಯಾ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿರುವ ಶರೋನ್ ಸುಪ್ರಿಯಾ ಅವರು ಪಾಲ್ಗೊಂಡಿದ್ದರು. ಹ್ಯಾಂಗೌಟಲ್ಲಿ ಭಾಗವಹಿಸಿದ್ದ ಹಲವಾರು ನೆಟ್ಟಿಗರು ಪ್ರಶ್ನೆ ಕೇಳಿದ್ದರಾದರೂ ಸಮಯಾಭಾವದಿಂದ ಅವುಗಳನ್ನು ಕೇಳಲಾಗಲಿಲ್ಲ. ಕೆಲವರು ಹ್ಯಾಂಗೌಟ್ ನಡೆಸುವುದಾದರೂ ಏಕೆ ಎಂದು ಕೂಡ ಪ್ರಶ್ನಿಸಿದರು. ಈ ಸಂವಾದದ ಸಾರಾಂಶ ಇಲ್ಲಿದೆ. [ಸದಾನಂದ ಗೌಡರ ಸಂದರ್ಶನ]

Conversation with DV Sadananda Gowda on Google hangout

ಇಲ್ಲಿಗ್ಯಾಕೆ ಬಂದ್ರಿ, ನಿಮ್ಮ ಕ್ಷೇತ್ರದ ಮೇಲೆ ಪ್ರೀತಿ ಇಲ್ಲವೆ ಎಂಬ ಪ್ರಶ್ನೆಗೆ, "ತಮ್ಮ ಊರು ಸುಳ್ಯದ ಮೇಲೆ ಈಗಲೂ ಅಷ್ಟೇ ಪ್ರೀತಿಯಿದೆ. ಆದರೆ, ಡಿಲಿಮಿಟೇಷನ್ ಆದ ಮೇಲೆ ಅದು ಮೀಸಲು ಕ್ಷೇತ್ರವಾದ್ದರಿಂದ ಸ್ಪರ್ಧಿಸಲು ಆಗಲಿಲ್ಲ. ನಂತರ ಉಡುಪಿ-ಚಿಕ್ಕಮಗಳೂರಿನಂಥ ದೊಡ್ಡ ಕ್ಷೇತ್ರ ಪ್ರತಿನಿಧಿಸಿದೆ. ಆಗಲೂ ಅವಧಿ ಪೂರ್ತಿ ಮಾಡಲು ಆಗಲಿಲ್ಲ. ಮುಖ್ಯಮಂತ್ರಿ ಆಗಬೇಕೆಂದು ಕರೆಸಿದರು. ಮುಖ್ಯಮಂತ್ರಿ ಪಟ್ಟ ಕಳೆದುಕೊಂಡ ಮೇಲೆ ವಿಧಾನಪರಿಷತ್ ಸದಸ್ಯನಾದೆ. ಈಗ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವರಿಷ್ಠರು ಟಿಕೆಟ್ ನೀಡಿದ್ದಾರೆ" ಎಂಬ ಉತ್ತರ ಕೊಟ್ಟರು.

ನೀವು ಎಲ್ಲಿಯೂ ಗಟ್ಟಿ ನಿಲ್ಲುವುದಿಲ್ಲ. ಅಂಡಮಾನ್ ನಿಕೋಬಾರ್ ಹೋಗೆಂದ್ರೂ ಹೋಗ್ತೀರಾ? ಉಡುಪಿ ಜನ ಯಾಕೆ ಹೋಗ್ತೀರಿ ಎಂದು ಕೇಳಲಿಲ್ಲವೆ? ಎಂದು ರಂಗ ಅವರು ಕೇಳಿದ ಪ್ರಶ್ನೆಗೆ, "ಬಿಜೆಪಿಯ ರಾಜ್ಯಾಧಕ್ಷನಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ 6 ಕೋಟಿ ಜನರ ಪ್ರೀತಿಯನ್ನು ಗಳಿಸಿದ್ದೇನೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಟ್ಟು ಇಲ್ಲಿಗ್ಯಾಕೆ ಬಂದಿರಿ ಅಂತ ಬೆಂಗಳೂರು ಉತ್ತರ ಕ್ಷೇತ್ರದ ಜನರು ಎಂದೂ ಕೇಳಿಲ್ಲ. ಇಲ್ಲಿ ಬಂದಿದ್ದೇ ಒಳ್ಳೆಯದಾಯಿತು ಎಂದು ಹರಸಿದ್ದಾರೆ" ಎಂಬ ವಿವರಣೆ ನೀಡಿದರು. [ಬೆಂಗಳೂರು ಉತ್ತರ ಕ್ಷೇತ್ರದ ಪರಿಚಯ]

ಚುನಾವಣೆ ಬಂದಾಗ ಖರ್ಚಿಗೆ ಹಣ ಬೇಕಾಗತ್ತೆ, ಸಾರ್ವಜನಿಕರಿಂದ ಹಣ ಪಡೆಯುವುದು ರೂಢಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹಫ್ತಾ ವಸೂಲಿ ಮಾಡ್ತಾರೆ ಅಂತ ಹೇಳಿದ್ದಿರಿ. ಹಫ್ತಾ ಎಂದರೇನು? ವಿವರಿಸಿ ಎಂಬ ಶಾಮ್ ಅವರ ಪ್ರಶ್ನೆಗೆ, ಚುನಾವಣೆ ಘೋಷಣೆಯಾದ ಮೇಲೆ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ 700 ಕೋಟಿ ರು. ಬಿಡುಗಡೆ ಮಾಡಲಾಯಿತು. ಕಾಂಟ್ರಾಕ್ಟರುಗಳು ತಮ್ಮ ಮೇಲೆ ಸರಕಾರ ಒತ್ತಡ ಹೇರುತ್ತಿದ್ದಾರೆ ಎಂಬ ಮಾತು ಕೇಳಿಬಂದಾಗ ತಕ್ಷಣ ಚುನಾವಣಾ ಕಮಿಷನರಿಗೆ ಪತ್ರ ಬರೆದೆ. ಇದನ್ನು ಚುನಾವಣಾ ಆಯೋಗ ತನಿಖೆ ಮಾಡಬೇಕು ಎಂದು ಗೌಡರು ತಮ್ಮ ಮಾತನ್ನು ಸಮರ್ಥಿಸಿಕೊಂಡರು.


ಅಳುವ ಗಂಡಸರನ್ನು ನಗುವ ಹೆಂಗಸನ್ನು ನಂಬಬಾರದು ಅಂತ ಸಿದ್ದರಾಮಯ್ಯ ಅವರು ಹೇಳಿದ್ದು ತುಂಬಾ ಬೇಜಾರಾಯಿತು. ಮನುಷ್ಯನಾಗಿ ಹುಟ್ಟಿದವನಿಗೆ ಭಾವನೆ ವ್ಯಕ್ತಪಡಿಸುವಾಗ ಖುಷಿಯಾದಾಗ ನಗು, ದುಃಖವಾದಾಗ ಅಳು ಬರುವುದು ಸಹಜ. ನಾನು ಮುಖ್ಯಮಂತ್ರಿ ಆಗಿದ್ದವನು. ಆ ಸ್ಥಾನಕ್ಕೆ ಗೌರವ ಕೊಡಬೇಕು. ಇಂಥ ಮಾತುಗಳು ಸಿದ್ದರಾಮಯ್ಯ ಅವರಿಗೆ ಶೋಭೆ ನೀಡುವುದಿಲ್ಲ. ನಾನೇ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ನಗಿಸಲು ಯತ್ನಿಸಿದ್ದೆ. ಆದರೆ ಅವರು ನಕ್ಕಿದ್ದು ನೋಡಿಲ್ಲ ಎಂದು ಸದಾನಂದ ಗೌಡರು ಮಾರ್ಮಿಕವಾಗಿ ನುಡಿದರು.

ಈ ನಡುವೆ ಹ್ಯಾಂಗೌಟ್ ನಲ್ಲಿ, ಸಂಸತ್ತಿನಲ್ಲಿ ಯಾರನ್ನು ನಗಿಸುತ್ತೀರಿ, ಸಂಸದರಾಗಿ ಆಯ್ಕೆಯಾದ ಮೇಲೆ ಮತ್ತೆ ಮುಖ್ಯಮಂತ್ರಿ ಪಟ್ಟ ಸಿಕ್ಕರೆ ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ, ಗೌಡರ ಕಥೆಯನ್ನು ಕಟ್ ಮಾಡಿ ಪ್ರಶ್ನೆಗಳನ್ನು ಜಾಸ್ತಿ ಕೇಳಿರಿ ರಂಗ ಅವರೇ, ಬೆಂಗಳೂರು ಬಸ್ ಸಂಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು, ಮೋದಿ ಹಿಂದೂತ್ವದ ಬಗ್ಗೆ ಮಾತಾಡುತ್ತಾರೆ, ನಿಮಗೆ ಕ್ಷೇತ್ರದಲ್ಲಿನ ಮುಸ್ಲಿಂ ಬಗ್ಗೆ ಆತಂಕವಿದೆಯೆ ಮುಂತಾದ ಪ್ರಶ್ನೆಗಳು ಬರುತ್ತಲೇ ಇದ್ದವು. ಆದರೆ ಅವು ಪ್ರಶ್ನೆಗಳಾಗಿಯೇ ಉಳಿದಿದ್ದು ಅನೇಕರಿಗೆ ನಿರಾಶೆ ತಂದಿತು.

ನಂತರ, ಶರೋನ್ ಅವರು ಉದ್ಯೋಗಸ್ಥ ಮಹಿಳೆಯರು, ಅವರ ಸುರಕ್ಷತೆಯ ಕುರಿತು ಪ್ರಶ್ನೆ ಕೇಳಿದರು. ಅದಕ್ಕೆ ಡಿವಿಎಸ್ ಅವರು, ಈಗ ರಾತ್ರಿ 1 ಗಂಟೆಯವರೆಗೆ ಬಾರ್ ಮತ್ತು ಪಬ್ ತೆರೆಯಲು ಅವಕಾಶ ನೀಡಲಾಗಿದೆ. ಇವುಗಳು ಗೂಂಡಾಗಳ ಅಡ್ಡಾಗಳಾಗಿವೆ. ಇವುಗಳನ್ನು ರಾತ್ರಿ 11ಕ್ಕೇ ಬಂದ್ ಮಾಡಬೇಕೆಂದು ಮುಖ್ಯಮಂತ್ರಿಗೆ ಸಲಹೆ ನೀಡುತ್ತೇನೆ. ಜೊತೆಗೆ ಮಹಿಳೆಯರೇ ಜನರನ್ನು ಸೇರಿಸಿ ಮೀಟಿಂಗ್ ಕರೆಯಬೇಕು. ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಒಬ್ಬ ಸಂಸದನಾಗಿ ಕಾನೂನು ಇಂಪ್ಲಿಮೆಂಟ್ ಮಾಡಲು ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಅವರು ವಿವರಿಸಿದರು.

ರಂಗ ಅವರು, ಭ್ರಷ್ಟಾಚಾರವೆಂಬುದು ತುಲಾ ರಾಶಿಯಂತಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ತಕ್ಕಡಿಯಲ್ಲಿ ತೂಗುವಂತೆ ತೂಗುತ್ತಿವೆ ಎಂಬ ಪ್ರಶ್ನೆ ಎತ್ತಿದಾಗ, ಭ್ರಷ್ಟಾಚಾರ ಪ್ರಮುಖ ಪಿಡುಗಾಗಿದೆ. ಮೋದಿ ಅವರ ನಾಯಕತ್ವದಲ್ಲಿ ಭ್ರಷ್ಟಾಚಾರ ನಿಗ್ರಹಿಸಲು ತಕ್ಕ ಕ್ರಮ ತೆಗೆದುಕೊಳ್ಳಾತ್ತಾರೆ ಎಂಬ ವಿಶ್ವಾಸವಿದೆ. ಆದರೆ, ಮೋದಿ ಅವರದು ಸರ್ವಾಧಿಕಾರ ಎಂಬುದನ್ನು ನಾನು ಒಪ್ಪುವುದಿಲ್ಲ. ಅಲ್ಲಿ ರಾಜನಾಥ್, ಅಡ್ವಾಣಿ, ಜೋಶಿ ಮುಂತಾದ ನಾಯಕರುಗಳೂ ಇದ್ದಾರೆ ಎಂದು ಡಿವಿಎಸ್ ನುಡಿದರು.

ಶಾಮ್ ಅವರು ಕಡೆಯದಾಗಿ, ಬೆಂಗಳೂರಿನ ನಾಲ್ಕೂ ಲೋಕಸಭಾ ಕ್ಷೇತ್ರಗಳಲ್ಲಿನ ಸಂಸದರು ಬೆಂಗಳೂರಿನಲ್ಲಿಯೇ ಮಿನಿ ಪಾರ್ಲಿಮೆಂಟ್ ರಚಿಸಿ, ಕಚೇರಿ ತೆರೆದು ಸಂವಾದ ನಡೆಸಬೇಕು ಎಂಬ ವಿಷಯ ಪ್ರಸ್ತಾಪಿಸಿದ್ದನ್ನು, ಸದಾನಂದ ಗೌಡರು ಶ್ಲಾಷಿಸಿದರು. ಇದು ನಿಜಕ್ಕೂ ಇನೊವೇಟಿವ್ ಐಡಿಯಾ. ಬೆಳಗಾವಿ, ಕಾವೇರಿಯಂಥ ಪ್ರಶ್ನೆಗಳು ಸಂಸತ್ತಿನಲ್ಲಿ ಪ್ರಸ್ತಾಪವಾದಾಗ ಎಲ್ಲ ಸಂಸದರೂ ಒಗ್ಗಟ್ಟಾಗುತ್ತೇವೆ. ಇಲ್ಲಿಯೂ ಒಗ್ಗಟ್ಟಿನಿಂದ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಲು ಯತ್ನಿಸುತ್ತೇವೆ ಎಂಬ ಭರವಸೆಯನ್ನು ಗೌಡರು ನೀಡಿದರು.

English summary
Lok Sabha Election 2014 : Conversation with DV Sadananda Gowda, Bangalore North BJP candidate. DVS shares his views and visions in Google hangout organized by Public TV in association with Oneindia-Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X