ಬೆಂಗಳೂರಿನ 8 ವಲಯಗಳಲ್ಲಿ 8 ಕೊವಿಡ್-19 ನಿಯಂತ್ರಣ ಕೇಂದ್ರ: ಇಲ್ಲಿದೆ ವಿವರ
ಬೆಂಗಳೂರು, ಜನವರಿ 3: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 1,000ಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ವರದಿಯಾಗಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊವಿಡ್-19 ಸಂಬಂಧಿತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಎಂಟು ವಲಯಗಳಲ್ಲಿ ಒಟ್ಟು ಕೊರೊನಾವೈರಸ್ ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ನಗರದ ಎಲ್ಲಾ ನಾಗರೀಕರು ಕೊವಿಡ್-19 ಸಂಬಂಧಿಸಿದಂತೆ ಟ್ರಯಾಜಿಂಗ್, ಕೊವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲಾಗುವ, ಲಸಿಕೆ ಪಡೆಯುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯು ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ.
ಕೊರೊನಾವೈರಸ್ ಸೋಂಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಪ್ರಶ್ನೆಗಳನ್ನು ಹಾಗೂ ಗೊಂದಲಗಳನ್ನು ನಿವಾರಿಸಿಕೊಳ್ಳಲು ಈ ಕೇಂದ್ರಗಳನ್ನು ಸಂಪರ್ಕಿಸಬಹುದು. ಆ ಮೂಲಕ ನಾಗರೀಕರು ಇದರ ಸದುಪಯೋಗಪಡಿಸಿಕೊಂಡು ನಗರದಲ್ಲಿ ಕೊವಿಡ್ ಸೋಂಕನ್ನು ನಿಯಂತ್ರಿಸಲು ಸಹಕರಿಸಬೇಕಾಗಿ ಕೋರಲಾಗಿದೆ.

ಬಿಬಿಎಂಪಿ ವಲಯವಾರು ಕೊರೊನಾವೈರಸ್ ಸಹಾಯವಾಣಿ ಸಂಖ್ಯೆ
ಕ್ರ.ಸಂಖ್ಯೆ - ವಲಯ - ದೂ.ಸಂಖ್ಯೆ
1. ಬೊಮ್ಮನಹಳ್ಳಿ - 8884666670
2. ದಾಸರಹಳ್ಳಿ - 94806 83132
3. ಪೂರ್ವ - 9480685163
4. ಮಹದೇವಪುರ - 08023010102
5. ಆರ್.ಆರ್.ನಗರ - 08028601050.
6. ದಕ್ಷಿಣ - 8431816718
7. ಪಶ್ಚಿಮ - 08068248454
8. ಯಲಹಂಕ - 9480685961

ಬಿಬಿಎಂಪಿ ವ್ಯಾಪ್ತಿಯಲ್ಲಿ 15-17 ವರ್ಷದ ಮಕ್ಕಳಿಗೆ ಲಸಿಕೆ
ವಲಯ - ಎಷ್ಟು ಮಕ್ಕಳಿಗೆ ಲಸಿಕೆ?
1. ದಾಸರಹಳ್ಳಿ - 2025
2. ಆರ್.ಆರ್.ನಗರ - 3444
3. ಬೊಮ್ಮನಹಳ್ಳಿ - 3812
4. ಮಹದೇವಪುರ - 2706
5. ಪಶ್ಚಿಮ - 7265
6. ಯಲಹಂಕ - 3113
7. ದಕ್ಷಿಣ - 3291
8. ಪೂರ್ವ - 3767

ಸಿಲಿಕಾನ್ ಸಿಟಿಯಲ್ಲಿ 1000ಕ್ಕೂ ಹೆಚ್ಚು ಕೊವಿಡ್ ಕೇಸ್
ಬೆಂಗಳೂರು ನಗರವೊಂದರಲ್ಲಿ ಕಳೆದ ಒಂದು ದಿನದಲ್ಲಿ 1041 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1266392ಕ್ಕೆ ಏರಿಕೆಯಾಗಿದೆ. 3 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 16408ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ 9575 ಸಕ್ರಿಯ ಪ್ರಕರಣಗಳಿವೆ. ಸಿಲಿಕಾನ್ ಸಿಟಿಯಲ್ಲಿ ಈವರೆಗೂ ಸೋಂಕು ತಗುಲಿದ 1240408 ಮಂದಿ ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ ಕೊರೊನಾವೈರಸ್ ಹೊಸ ದಾಖಲೆ
ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 1,200ದ ಗಡಿ ದಾಟಿದ್ದು, ಪಾಸಿಟಿವಿಟಿ ದರ ಶೇ.1.60ರಷ್ಟಾಗಿದೆ. ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 0.38ರಷ್ಟಿದೆ. ಕಳೆದ ಒಂದೇ ದಿನದಲ್ಲಿ 1290 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 232 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 5 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 38351 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3010847ಕ್ಕೆ ಏರಿಕೆಯಾಗಿದೆ. ಒಟ್ಟು 2961122 ಸೋಂಕಿತರು ಗುಣಮುಖರಾಗಿದ್ದು. 11345 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications