ಬೆಂಗಳೂರು; ಕೋವಿಡ್ ನಿಯಂತ್ರಣಕ್ಕೆ ಯೋಜನೆ ಸಿದ್ಧ
ಬೆಂಗಳೂರು, ಅಕ್ಟೋಬರ್ 08 : ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸತತ ಎರಡು ದಿನಗಳಿಂದ ನಗರದಲ್ಲಿ ಐದು ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಬಿಬಿಎಂಪಿ ಅಧಿಕಾರಿಗಳು ವಲಯವಾರು ಸಭೆಗಳನ್ನು ನಡೆಸಿ, ಸೋಂಕಿನ ನಿಯಂತ್ರಣಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ.
ಬಿಬಿಎಂಪಿಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರ ಆರೈಕೆಗೆ ಸಂಬಂಧಿಸಿದಂತೆ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಸಭೆ ನಡೆಯಿತು. ಸೋಂಕಿನ ನಿಯಂತ್ರಣಕ್ಕೆ ಬಿಬಿಎಂಪಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಲಾಯಿತು.
ಜನಸಂದಣಿ ಹೆಚ್ಚು ಇರುವ ಕಡೆ ಹೆಚ್ಚು ಕೋವಿಡ್-19 ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಪೂರ್ವ ವಲಯದಲ್ಲಿ ಮರಣ ಪ್ರಮಾಣ ಕಳೆದ 14 ದಿನಗಳಲ್ಲಿ 0.99 ಹಾಗೂ ಒಂದು ವಾರದಲ್ಲಿ ಶೇ 0.61ಕ್ಕೆ ಇಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸೋಂಕು ಕಾಣಿಸಿಕೊಂಡ ತಕ್ಷಣ ಸೂಕ್ತ ಆರೈಕೆಗೆ ಕ್ರಮ ಕೈಗೊಂಡರೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಇದುವರೆಗೆ ಯಾವುದೇ ಲಸಿಕೆ ಲಭ್ಯವಾಗಿಲ್ಲದ ಕಾರಣ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕುರಿತು ಜನರಿಗೆ ಅರಿವು ಮೂಡಿಸಲು ಮಾರ್ಷಲ್‌ಗಳನ್ನು ನಿಯೋಜನೆ ಮಾಡಬೇಕು. ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಬೇಕು ಎಂದು ಚರ್ಚೆ ನಡೆಸಲಾಯಿತು.
ಬೆಂಗಳೂರು ನಗರದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿ ಪ್ರತಿದಿನ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಆದ್ದರಿಂದ, ಬಿಬಿಎಂಪಿ ಆಯುಕ್ತರು ವಲಯವಾರು ಸಭೆಗಳನ್ನು ನಡೆಸುತ್ತಿದ್ದಾರೆ.
ಬಿಬಿಎಂಪಿ ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಬುಧವಾರ ಒಂದೇ ದಿನ ನಗರದಲ್ಲಿ 35,183 ಮಂದಿಗೆ ಪರೀಕ್ಷೆ ನಡೆಸಲಾಗಿದೆ. 5 ಸಾವಿರ ಹೊಸ ಪ್ರಕರಣಗಳು ನಗರದಲ್ಲಿ ದಾಖಲಾಗಿವೆ.
ಬೆಂಗಳೂರು ನಗರದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,62,241. ಸಕ್ರಿಯ ಪ್ರಕರಣಗಳ ಸಂಖ್ಯೆ 58,624. ನಗರದಲ್ಲಿ ಇದುವರೆಗೂ 3190 ಜನರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತರು ಇರುವುದು ಬೆಂಗಳೂರಿನಲ್ಲಿಯೇ.












Click it and Unblock the Notifications