ಬಹುಮತ ಬಂದರೂ ಸಿಎಂ ಯಾರೆಂದು ಘೋಷಿಸದ ಕಾಂಗ್ರೆಸ್‌ನಲ್ಲಿ ಹೊಂದಾಣಿಯೇ ಇಲ್ಲ: ಬೊಮ್ಮಾಯಿ ಪ್ರತಿಕ್ರಿಯೆ
ಬೆಂಗಳೂರು, ಮೇ 17: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತವಿದ್ದರೂ ಕಾಂಗ್ರೆಸ್‌ನವರು ಸರ್ಕಾರ ರಚನೆ ಮಾಡುತ್ತಿಲ್ಲ. ಮುಂದೆ ಕಾಂಗ್ರೆಸ್ ನವರು ಲಿಂಗಾಯತರಿಗೆ ಯಾವ ಹುದ್ದೆ ಕೊಡುತ್ತಾರೆ ಎಂದು ನೋಡೋಣ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಚುನಾವಣೆ ವೇಳೆ ಕಾಂಗ್ರೆಸ್ ನವರು ಲಿಂಗಾಯತರ ಕುರಿತು ಬಹಳ ಮಾತನಾಡಿದ್ದಾರೆ. ಈಗ ಅವರಿಗೆ ಬಹುಮತ ಬಂದಿದೆ. ಸರ್ಕಾರ ರಚನೆ ವೇಳೆ ಅವರು ಲಿಂಗಾಯತ ನಾಯಕರಿಗೆ ಯಾವ ಸ್ಥಾನ ಕೊಡುತ್ತಾರೆ? ನೋಡೊಣ ಎಂದು ಅವರು ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪೂರ್ಣ ಬಹುಮತ ಇದ್ದರೂ ಮುಖ್ಯಮಂತ್ರಿ ಆಯ್ಕೆ ನಿರ್ಧಾರ ಮಾಡದೇ ಇರುವುದು ಪಕ್ಷದಲ್ಲಿನ ಹೊಂದಾಣಿಕೆ ಸರಿ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ತಮ್ಮ ರಾಜಕೀಯ ಬಿಟ್ಟು ಆದಷ್ಟು ಬೇಗ ಮುಖ್ಯಮಂತ್ರಿ ಆಯ್ಕೆ ಮಾಡಿ, ಸರ್ಕಾರ ರಚಿಸಿ ಜನರ ಸೇವೆ ಮಾಡಲಿ ಎಂದು ಅವರು ಸಲಹೆ ನೀಡಿದರು.
ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಮತ್ತು ರಾಜ್ಯದ ಅಭಿವೃದ್ಧಿ ಮಾಡಲಿ. ಅವರಿಗೆ ಇಲ್ಲಿಯವರೆಗೂ ಮುಖ್ಯಮಂತ್ರಿ ಆಯ್ಕೆ ಮಾಡಲು ಅಗುತ್ತಿಲ್ಲ. ಬೇಗ ಮುಖ್ಯಮಂತ್ರಿ ಆಯ್ಕೆ ಮಾಡಿ ಸರ್ಕಾರ ರಚಿಸಲಿ. ನಂತರ ಅವರು ಲಿಂಗಾಯತ ಸಮುದಾಯ ನಾಯಕರಿಗೆ ಯಾವ ಯಾವ ಸ್ಥಾನ ನೀಡುತ್ತಾರೆ ಕಾದು ನೋಡೋಣ ಎಂದರು.
ಕಾಂಗ್ರೆಸ್‌ಗೆ ಮತ್ತೆ ಕಗ್ಗಂಟಾದ ಸಿಎಂ ಆಯ್ಕೆ ವಿಚಾರ
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರೆಂಬುದಕ್ಕೆ ಉತ್ತರ ಕಳೆದ ನಾಲ್ಕು ದಿನಗಳಿಂದಲೂ ಸಿಕ್ಕಿಲ್ಲ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಜೊತೆಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಆದರೆ ಇದುವರೆಗೂ ಸಿಎಂ ಸ್ಥಾನ ಯಾರೆಗಿಂದು ಬಹಿರಂಗವಾಗಿಲ್ಲ.

ಇನ್ನೇನು ಸಿಎಂ ಸ್ಥಾನ ಸಿದ್ದರಾಮಯ್ಯನವರಿಗೆ ಎಂಬುದು ಅಂತಿಮವಾಯಿತು ಎನ್ನಷ್ಟುವಷ್ಟರದಲ್ಲಿ ಆರಂಭದಿಂದ ಬಿಗಿಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಅವರು ಪಟ್ಟು ಸಡಿಲಿಸಿಲ್ಲ. ನನಗೇ ಸಿಎಂ ಹುದ್ದೆ ಕೊಡಿ ಇಲ್ಲವಾದರೆ ಯಾವ ಹುದ್ದೆ ಬೇಡ ಎಂದವರು, ಇದೀಗ ನನಗೇ ಸಿಎಂ ಸ್ಥಾನ ಕೊಡಿ, ಇಲ್ಲ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಹಠ ಹಿಡಿದಿದ್ದಾರೆ ಎಂದು ದೆಹಲಿ ಮೂಲಗಳು ತಿಳಿಸಿವೆ.












Click it and Unblock the Notifications