ಎಸಿಬಿ ದಾಳಿಗೆ ರಾಜಕೀಯ ಬಣ್ಣ ಹಚ್ಚೋದು ಕಾಂಗ್ರೆಸ್ ಸ್ಲೋಗನ್: ಬೊಮ್ಮಾಯಿ
ಬೆಂಗಳೂರು, ಜುಲೈ 05: ಶಾಸಕ ಜಮೀರ್ ಮನೆ ಮೇಲೆ ದಾಳಿ ಮಾಡಲು ತೆರಳಿದ ಎಸಿಬಿ ಅಧಿಕಾರಿಗಳಿಗೆ ಅಡಚನೆ ಉಂಟು ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ನಡೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. 'ಕರ್ತವ್ಯ ಮಾಡಲು ಹೋದಾಗ ಅಡಚಣೆ ಮಾಡಿ ಅದಕ್ಕೆ ರಾಜಕೀಯ ಬಣ್ಣ ನೀಡುವುದು ಸರ್ವೇಸಾಮಾನ್ಯ. ಇದು ಕಾಂಗ್ರೆಸ್‌ನ ಸ್ಲೋಗನ್. ಅವರು ಪ್ರಕರಣದ ಬಗ್ಗೆ ಮಾತನಾಡದೇ ಬೇರಲ್ಲವನ್ನು ಮಾತನಾಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಶಾಸಕ ಜಮೀರ್ ಮನೆ ಮೇಲಿನ ಎಸಿಬಿ ದಾಳಿ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎಸಿಬಿ ದಾಳಿ ನಿರಂತರ ಪ್ರತಿಕ್ರಿಯೆ. ಉಚ್ಛ ನ್ಯಾಯಾಲಯವು ಎಸಿಬಿ ಬಾಕಿ ಪ್ರಕರಣಗಳನ್ನು ತನಿಖೆ ಮಾಡಬೇಕು ಎಂದು ಸೂಚಿಸಿದ್ದರ ಹಿನ್ನೆಲೆಯಲ್ಲಿ ಸಮಯ, ಸಾಕ್ಷಿ ಆಧಾರ ಸಮೇತವಾಗಿ ಎಸಿಬಿ ಕೆಲಸ ಮಾಡುತ್ತಿದೆ. ಇದು ನಿರಂತರವಾಗಿ ಮಾಡುವ ಕೆಲಸ ಎಂದರು.
ಪರಪ್ಪನ ಅಗ್ರಹಾರ: ಸೂಕ್ತ ಕ್ರಮ ಜರುಗಿಸಲಾಗುವುದು:
ಪರಪ್ಪನ ಅಗ್ರಹಾರದಲ್ಲಿ ಕೈದಿಗಳೂ ವಿಡಿಯೋ ಕಾಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಪರಪ್ಪನ ಅಗ್ರಹಾರ ಕೇಸಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತರಿಸಿ, ಕ್ರಮ ಕೈಗೊಳ್ಳಲಾಗುವುದು. ಈ ರೀತಿಯ ಅವಾಂತರಗಳು ನಡೆಯುತ್ತಿವೆ. ಅಲ್ಲಿ ವ್ಯವಸ್ಥಿತವಾಗಿ ಒಂದು ಗುಂಪು ಈ ರೀತಿಯ ಕೆಲಸ ಮಾಡುತ್ತಿದೆ ಎಂದು ಕಾಣುತ್ತಿದೆ. ಹಿಂದೆ ಕೂಡ ಈ ಬಗ್ಗೆ ವರದಿ ಬಂದಿತ್ತು. ಅವರು ಅಪರಾಧಿಗಳ ಬಗ್ಗೆ ಸ್ನೇಹ, ಭ್ರಷ್ಟಾಚಾರ ಇದೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಈ ಬಗ್ಗೆ ವರದಿ ತರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಚಂದ್ರಶೇಖರ್ ಗುರೂಜಿ ಹತ್ಯೆ: ಸಿಎಂ ಪ್ರತಿಕ್ರಿಯೆ
"ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಹೀನ ಕೃತ್ಯವಾಗಿದ್ದು, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯನ್ನು ನೀಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಹೀನ ಕೃತ್ಯ ಹಾಗೂ ದುರದೃಷ್ಟಕರವಾಗಿದೆ. ಸಿಸಿಟಿವಿ ವಿಡಿಯೋದಲ್ಲಿ ಎಲ್ಲ ಸ್ಪಷ್ಟವಾಗಿದೆ. ನಗರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಸಿಸಿಟಿವಿ ವಿಡಿಯೋದಲ್ಲಿರುವ ಕೊಲೆಪಾತಕರನ್ನು ಬಂಧಿಸಲು ತಿಳಿಸಲಾಗಿದ್ದು, ಪ್ರಕ್ರಿಯೆ ನಡೆದಿದೆ. ಕೊಲೆ ನಡೆದಿರುವ ಕಾರಣ ತನಿಖೆಯಿಂದ ತಿಳಿದು ಬರಲಿದೆ. ಬಹಿರಂಗವಾಗಿ ಇಂತಹ ಘಟನೆಗಳು ಅತ್ಯಂತ ಖಂಡನೀಯ ಎಂದರು.