ರಾಹುಲ್ ಗಾಂಧಿ ಬಗ್ಗೆ ಅವಹೇಳನ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕಾಂಗ್ರೆಸ್ ನೋಟಿಸ್
ಬೆಂಗಳೂರು, ಮಾರ್ಚ್ 10: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸಭ್ಯವಾಗಿ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕಾಂಗ್ರೆಸ್ ಕಾನೂನು ಘಟಕ ನೋಟಿಸ್ ಕಳುಹಿಸಿದೆ. ಇತ್ತೀಚೆಗಷ್ಟೇ ನಳಿನ್ ಕುಮಾರ್ ಕಟೀಲ್, ರಾಹುಲ್ ಗಾಂಧಿ ಮದುವೆ ಮತ್ತು ಮಕ್ಕಳ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ಕಾನೂನು ಘಟಕ ನೋಟಿಸ್ ಕಳುಹಿಸಿದೆ. ನೋಟಿಸ್‌ನಲ್ಲಿ ಬೇಷರತ್ ಕ್ಷಮೆಯಾಚನೆ ಮಾಡಬೇಕು ಎಂದೂ ಆಗ್ರಹಿಸಿದೆ. ಇದರ ಜೊತೆಗೆ ನಳಿನ್ ಕುಮಾರ್ ಕಟೀಲ್ ಪರಿಹಾರ ಮತ್ತು ಕ್ಷಮೆ ಕೇಳದಿದ್ದರೇ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದೆ.

ಇತ್ತೀಚೆಗೆ ರಾಮನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ್ದ ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್, "ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಡಿ, ಬಂಜೆತನಕ್ಕೆ ಕಾರಣವಾಗುತ್ತದೆ, ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಜನರಿಗೆ ಹೇಳಿದರು. ಆದರೆ ಅವರೇ ಲಸಿಕೆಯನ್ನು ಕದ್ದುಮುಚ್ಚಿ ಹಾಕಿಸಿಕೊಂಡರು. ಹೀಗಾಗಿ ನಮ್ಮ ಎಂಎಲ್‌ಸಿ ಮಂಜುನಾಥ್ ಅವರು ಹೇಳಿದ್ದು, ಲಸಿಕೆ ತೆಗೆದುಕೊಂಡಿದ್ದರಿಂದ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ. ಏಕೆಂದರೆ ಹೇಗೋ ಅವರಿಗೆ ಮಕ್ಕಳಾಗುವುದಿಲ್ಲ ಅಂತ" ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು.
"@RahulGandhi & @siddaramaiah asked people not to take Covid19 vaccines saying it would make them infertile, but they secretly took it themselves, MLC Manjunath told me Rahul Gandhi is not getting married b'coz he cannot have children" : BJP K'taka State President @nalinkateel pic.twitter.com/KJNSiRobkq
— Deepak Bopanna (@dpkBopanna) March 6, 2023
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬಳಿಕ ಕಾಂಗ್ರೆಸ್ ನಾಯಕರು ನಳಿನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದ್ದರು. ಬಿಜೆಪಿ ಶೀಘ್ರವಾಗಿ ಗುಣಮುಖವಾಗಲಿ ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಕೂಡ ರಾಜ್ಯದಲ್ಲಿ ಚುನಾವಣಾ ಆರೋಪಗಳು ಇಷ್ಟು ಕೀಳುಮಟ್ಟಕ್ಕೆ ಇಳಿದಿವೆ ಎಂದು ಬೇಸವ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು "ಟಿಪ್ಪು-ಸಾವರ್ಕರ್, ಕೊಲ್ಲು ಮತ್ತು ಹಲ್ಲೆ ಬಗ್ಗೆ ಮಾತು ನಿಂತಾಗ, ಪ್ರತಿಸ್ಪರ್ಧಿ ಪಕ್ಷದ ನಾಯಕರ ಮದುವೆ, ಮಕ್ಕಳ ಜೀವನದ ಆಯ್ಕೆಗಳ ಬಗ್ಗೆ ಮಾತನಾಡಿ ಮತ್ತು ವೈಯಕ್ತಿಕ ದಾಳಿ ಮಾಡಿ ಅವರ ಬಗ್ಗೆ ಜೋಕ್ ಮಾಡಿ ಹಂಚುತ್ತಾರೆ. ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ರಾಜಕೀಯ ಚರ್ಚೆಯ ಮಟ್ಟವು ಪ್ರತಿದಿನ ಕೆಳಮಟ್ಟಕ್ಕೆ ಇಳಿಯುತ್ತಿದೆ" ಎಂದು ಟೀಕಿಸಿದ್ದರು.












Click it and Unblock the Notifications