Inidra Canteen: ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ ಕಾಂಗ್ರೆಸ್ ಸೂಚನೆ, ಬಿಬಿಎಂಪಿಯಿಂದ ಶೀಘ್ರವೇ ಟೆಂಡರ್
ಬೆಂಗಳೂರು, ಮೇ 25: ಬಡವರಿಗೆ ಅತೀ ಕಡಿಮೆ ಬೆಲೆಯಲ್ಲಿ ಅನ್ನ ನೀಡುವ 'ಇಂದಿರಾ ಕ್ಯಾಂಟೀನ್' (Indira Canteen) ಅನ್ನು ಕಡೆಗಣಿಸಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೆ ಕ್ಯಾಂಟೀನ್‌ಗಳಿಗೆ ಮತ್ತ ಮರುಜೀವ ಸಿಗಲಿದೆ. ಈ ಸಂಬಂಧ ಅಗತ್ಯ ಸಿದ್ಧತೆಗಳು ಆರಂಭವಾಗಿದೆ.
ಕಾಂಗ್ರೆಸ್‌ನ ವಿವಿಧ ಯೋಜನೆಗಳಲ್ಲಿ ಒಂದಾದ 'ಇಂದಿರಾ ಕ್ಯಾಂಟೀನ್' ಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನುದಾನ ಪೂರೈಕೆ ನಿಲ್ಲಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ 2023ರ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದು, ಇಂದಿರಾ ಕ್ಯಾಂಟೀನ್ ಪುನಾರಂಭಿಸುವಂತೆ ಬಿಬಿಎಂಪಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚನೆ ನೀಡಿದೆ.

ಇದರ ಬೆನ್ನೆಲ್ಲೆ ಇದೀಗ 'ಇಂದಿರಾ ಕ್ಯಾಂಟೀನ್'ಗಳಿಗೆ ಮರುಜೀವ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಭರದ ಸಿದ್ಧತೆಗಳನ್ನು ನಡೆಸುತ್ತಿದೆ. ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಕೋಣೆಗಳನ್ನು ಕೂಲಂಕಷವಾಗಿ ಪರಿಶೀಲನೆಗೆ ಹಾಗೂ ಪುನಃ ಮೊದಲಿನಂತೆ ಬಡವರಿಗೆ ಕಡಿಮೆ ಬೆಲೆ ಆಹಾರ ತಯಾರಿಸಿ ನೀಡುವಂತೆ ಸಜ್ಜುಗೊಳಿಸಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ.
ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪ್ರತಿಕ್ರಿಯಿಸಿದ್ದು, ಮೊಬೈಲ್ ಕ್ಯಾಂಟೀನ್‌ಗಳನ್ನು ಮರು ಆರಂಭಿಸುವ ಮತ್ತು ಆಹಾರದ ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ಶೀಘ್ರದಲ್ಲೇ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಟೆಂಡರ್ ಪ್ರಕ್ರಿಯೆ ಶೀಘ್ರ: ಬೆಲೆ ಕ್ವಾಂಟಿಟಿ ಹೆಚ್ಚಳಕ್ಕೆ ಕ್ರಮ
ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ ರಾಯಪುರ ಅವರು, 'ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಪ್ರತಿ 243 ವಾರ್ಡ್ ಗಳಿಗೂ ವಿಸ್ತರಿಸಬೇಕು ಎಂಬ ಉದ್ದೇಶವಿದೆ. ಅಲ್ಲದೇ ಮುಖ್ಯವಾಗಿ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಉಪಹಾರ, ಊಟ ನೀಡುವ ಪ್ರಮಾಣ ಹೆಚ್ಚಿಸಬೇಕಿದೆ. ಆದಷ್ಟು ಶೀಘ್ರವೇ ಬಿಬಿಎಂಪಿ ಕ್ಯಾಂಟೀನ್‌ಳ ಆರಂಭ ಸಂಬಂಧ ಮರು ಟೆಂಡರ್ ಪ್ರಕ್ರಿಯೆ ಆರಂಭಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 120-130 ಇಂದಿರಾ ಕ್ಯಾಂಟೀನ್‌ಗಳು ಇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ 10 ಮೊಬೈಲ್ ಕ್ಯಾಂಟೀನ್‌ಗಳ ಮುಚ್ಚಿದ್ದವು. ಹಾಲಿ ಕ್ಯಾಂಟೀನ್‌ಗಳ ಪುನಾರಂಭ ಜೊತೆಗೆ 243 ವಾರ್ಡ್‌ಗಳಿಗೂ ಕ್ಯಾಂಟೀನ್ ವಿಸ್ತರಣೆಗೆ ಸರ್ಕಾರ ಸಿದ್ಧತೆ ನಡೆದಿದೆ. ಅಲ್ಲದೇ ಆಹಾರದ ಪ್ರಮಾಣ (ಕ್ವಾಂಟಿಟಿ), ಗುಣಮಟ್ಟ ಹೆಚ್ಚಿಸಲಿದೆ. ಇದರಿಂದ ಬೆಲೆ ಸಹ 5-10 ರೂಪಾಯಿ ಹೆಚ್ಚಾಗಬಹುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.












Click it and Unblock the Notifications