ಭ್ರೂಣಹತ್ಯೆ ಪ್ರಕರಣ: ಶಾಸಕ ಸಿದ್ದು ಸವದಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ
ಬೆಂಗಳೂರು, ನವೆಂಬರ್ 30: ಶಾಸಕ ಸಿದ್ದು ಸವದಿಯಿಂದ ಭ್ರೂಣಹತ್ಯೆಯಾಗಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಪುರಸಭೆ ಸದಸ್ಯೆಯರ ನೂಕಾಟದಲ್ಲಿ ಕೆಳಗೆ ಬಿದ್ದಿದ್ದ ಗರ್ಭಿಣಿ ಸದಸ್ಯೆ ಚಾಂದಿನಿ ನಾಯಕ್ ಅವರಿಗೆ ಮಹಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಪಾತವಾಗಿದೆ.
ನ.9ರಂದು ಜಿಲ್ಲೆಯ ಮಹಾಲಿಂಗಪುರದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಆ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿಯ ಮೂವರು ಸದಸ್ಯೆಯರು, ತಮಗೆ ಅವಕಾಶ ಸಿಗದೇ ಇದ್ದ ಕಾರಣಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದರು.

ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಬಿಜೆಪಿಯ ಸದಸ್ಯರಾದ ಗೋದಾವರಿ, ಚಾಂದಿನಿ ನಾಯ್ಕ ಹಾಗೂ ಸವಿತಾ ಹುರಕಡ್ಲಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು.
ಮಹಿಳೆಯ ಮೇಲೆ ದೌರ್ಜನ್ಯವಾಗಿದ್ದರೂ ಪ್ರಕರಣ ದಾಖಲಾಗಿದ್ದರೂ ಶಾಸಕರ ಬಂಧನ, ವಿಚಾರಣೆಯಾಗದಿರುವುದು ಬಿಜೆಪಿ ಸರ್ಕಾರದ ಲಜ್ಜೆಗೆಟ್ಟತನಕ್ಕೆ ನಿರ್ದೇಶನಕ ಎಂದು ಕಿಡಿಕಾರಿದೆ.
ಒಬ್ಬ ಮಹಿಳಾ ಜನಪ್ರತಿನಿಧಿಯ ಗೌರವಕ್ಕೆ ಧಕ್ಕೆಯಾಗಿದ್ದರೂ, ಒಂದು ಭ್ರೂಣಹತ್ಯೆಯಾಗಿದ್ದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳದಿರುವುದು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಅವರ ಪಕ್ಷದಲ್ಲಿ ಮಹಿಳೆಯರಿಗೆ ಗೌರವ ಇಲ್ಲದಿರುವುದನ್ನು ಸಾಬೀತು ಮಾಡುತ್ತದೆ ಎಂದು ಹೇಳಿದೆ.












Click it and Unblock the Notifications