Kundapura Kannada : ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಕಾಂಗ್ರೆಸ್ ಒತ್ತಾಯ
ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ವಿಧಾನಮಂಡಲ ಅಧಿವೇಶನದ ಮೇಲ್ಮನೆ ಕಲಾಪದಲ್ಲಿ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು, ಫೆಬ್ರವರಿ. 15: ಇತ್ತೀಚೆಗೆ ತುಳು ಭಾಷೆಯನ್ನು ಕರ್ನಾಟಕದ 2ನೇ ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸರ್ಕಾರ ಸಮಿತಿ ರಚಿಸಿದೆ. ಇದರ ಬೆನ್ನಲ್ಲೇ ಕುಂದಾಪ್ರ ಕನ್ನಡಕ್ಕೂ ಮನ್ನಣೆ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ.
ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸುವಂತೆ ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಒತ್ತಾಯಿಸಿದ್ದಾರೆ.
ಮಂಗಳವಾರ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ವಿಧಾನಮಂಡಲ ಅಧಿವೇಶನದ ಮೇಲ್ಮನೆ ಕಲಾಪದ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಮನವಿ ಮಾಡಿದ್ದಾರೆ. ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಕರಾವಳಿ ಭಾಗದಲ್ಲಿ ಕುಂದಾಪುರ ಕನ್ನಡ ಭಾಷೆ ಮಾತನಾಡುವ 25 ಲಕ್ಷ ಜನರಿದ್ದು, ಅವರ ಆಶಯದಂತೆ ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಬೇಕೆಂದು ಸರ್ಕಾರಕ್ಕೆ ತಿಳಿಸಿದ್ದಾರೆ.
ಭಾಷೆ ಹಾಗು ಸಂಸ್ಕೃತಿ ವಿಚಾರದಲ್ಲಿ ತನ್ನದೆ ವೈಶಿಷ್ಟ ಹೊಂದಿರುವ ಕುಂದಾಪುರದ ಜನರು ಮಾತಾಡುವ ಈ ಕುಂದಾಪ್ರ ಕನ್ನಡವನ್ನು ಬೈದೂರಿನಿಂದ ಬ್ರಹ್ಮಾವರದ ತನಕ, ಬಸ್ರೂರಿನಿಂದ ಹೆಬ್ರಿ ತನಕ ಮಲೆನಾಡು ಮತ್ತು ಕರಾವಳಿಯ 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಂದಾಪ್ರ ಕನ್ನಡವನ್ನು ಮಾತನಾಡುತ್ತಾರೆ ಎಂದು ವಿವರಿಸಿದ್ದಾರೆ.
ಜನರ ಸಂಸ್ಕೃತಿ, ಆಟ ಪಾಠಗಳಲ್ಲಿ, ಮೀನುಗಾರಿ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಕಂಬಳ, ಕೋಲ, ಹೋಳಿ ಆಚರಣೆಗಳಲ್ಲಿ ಭಾಷಾ ಸೋಬಗು ಕಾಣಿಸುತ್ತದೆ ಎಂದಿದ್ದು, ಭಾಷಾ ಅಕಾಡಮಿ ಸ್ಥಾಪನೆ ಮಾಡಿದರೇ ಭಾಷೆ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ವೇಳೆಯೂ ವಿಧಾನಪರಿಷತ್‌ನ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ನಡೆದಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ್ದ ಬಿ.ಕೆ. ಹರಿಪ್ರಸಾದ್, ಕುಂದಗನ್ನಡ ಭಾಷಾ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲಾಗುವುದು. ಪ್ರತ್ಯೇಕ ಪ್ರಾಧಿಕಾರ ರಚಿಸಿ, ಅದರ ಅಧ್ಯಯನಕ್ಕೆ ಉಪಯೋಗವಾಗುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಇನ್ನು ತುಳು ಭಾಷೆಯನ್ನು ಕರ್ನಾಟಕದ 2ನೇ ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ನೀಡುವಂತೆ ಡಾ.ಮೋಹನ್ ಆಳ್ವ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿದೆ.
ಡಾ.ಮೋಹನ್ ಆಳ್ವ ನೇತೃತ್ವದಲ್ಲಿ ಡಾ.ಕೇಶವ ಬಂಗೇರಾ, ಡಾ.ಮಾಧವ ಕೊಣಾಜೆ, ಗಣೇಶ್ ಅಮೀನ್ ಸಂಕಮಾರ್, ಪೃಥ್ವಿರಾಜ್ ಕವತ್ತಾರು ಮಣಿಪಾಲ, ವಸಂತ್ ಶೆಟ್ಟಿ ಉಡುಪಿ, ಚಂದ್ರಹಾಸ ಕಣಂತೂರು, ಸಂಧ್ಯಾ ಆಳ್ವಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಈ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.












Click it and Unblock the Notifications