ವಿನಯ್ ಗುರೂಜಿ ವಿರುದ್ದ ಟ್ರೋಲ್ ಮಾಡಿದವರ ಮೇಲೆ ಕೇಸ್
ಬೆಂಗಳೂರು, ಜುಲೈ 26: ಅವಧೂತ ವಿನಯ್ ಗುರೂಜಿಯನ್ನು ಅವಹೇಳನ ಮತ್ತು ಅವಾಚ್ಯವಾಗಿ ನಿಂದಿಸುತ್ತ ಟ್ರೋಲ್ ಮಾಡುತ್ತಿದ್ದವರ ವಿರುದ್ದವಾಗಿ ದೂರು ದಾಖಲಾಗಿದೆ. ವಿನಯ್ ಗುರೂಜಿ ಪರವಾಗಿ ಅವರ ಆಪ್ತ ದೂರನ್ನು ದಾಖಲಿಸಿದ್ದಾರೆ. ವಿನಯ್ ಗುರೂಜಿ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯಾಗುವಂತೆ ಟ್ರೋಲ್ ಮಾಡುತ್ತಿದ್ದವರ ಮೇಲೆ ದೂರನ್ನು ನೀಡಲಾಗಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಟ್ರೋಲ್ ಮಾಡುತ್ತಿದ್ದವರ ಮೇಲೆ ಎಫ್ಐಆರ್ ದಾಖಲಾಗಿದೆ.
ಅವಧೂತ ವಿನಯ್ ಗುರೂಜಿಯವರಿಗೆ ರಾಜ್ಯದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ದಿಗ್ಗಜ ರಾಜಕಾರಣಿಗಳು ಸಹ ವಿನಯ್ ಗುರಜಿಯವರ ಭಕ್ತವೃಂದದಲ್ಲಿದ್ದಾರೆ. ಅವಧೂತರಾಗಿ ಪ್ರವಚನಗಳನ್ನು ನೀಡುವ ಮೂಲಕ ಭಕ್ತರನ್ನು ಸೆಳೆಯುವ ಶಕ್ತಿಯನ್ನು ಹೊಂದಿರುವ ವಿನಯ್ ಗುರೂಜಿಯವರ ಪಾದ ಸ್ಪರ್ಷದಿಂದ ಜೀವನ ಪಾವನ ಅನ್ನೋ ಭಕ್ತರು ಇದ್ದಾರೆ.
ವಿನಯ್ ಗುರೂಜಿಯವರು ಭಕ್ತನೊಬ್ಬನ ತಲೆಯ ಮೇಲೆ ತಮ್ಮ ಪಾದವನ್ನಿಟ್ಟು ಆಶೀರ್ವದಿಸುತ್ತಿರುವ ಫೋಟೋ ಕೂಡ ವೈರಲ್ ಆಗಿತ್ತು. ಆ ಫೋಟೋವನ್ನು ಇಟ್ಟುಕೊಂಡಿರುವ ಟ್ರೋಲ್ ಪೇಜಿಗರು ವಿನಯ್ ಗುರೂಜಿಯವರನ್ನು ನಿಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ವಿರುದ್ದ ಕ್ರಮವನ್ನು ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೇಳಿಕೊಳ್ಳಲಾಗಿದೆ. ಟ್ರೋಲ್ ಮಾಡುತ್ತಿದ್ದ 22 ಕ್ಕೂ ಹೆಚ್ಚು ಟ್ರೋಲ್ ಪೇಜ್ ಮತ್ತು ಜನರ ವಿರುದ್ದ ಪ್ರಕರಣ ದಾಖಲಾಗಿದೆ.

ಟ್ರೋಲ್ ಮಾಡಿದವರ ವಿರುದ್ದ ಕೇಸ್
ವಿನಯ್ ಗುರೂಜಿಯ ಬಳಿಯಲ್ಲಿ ಪಬ್ಲಿಕ್ ರಿಲೇಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಅನಿರೀತ್ ಎಂಬುವವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅವಧೂತ ವಿನಯ್ ಗುರೂಜಿಯವರು ಧಾರ್ಮಿಕ ಆಧ್ಯಾತ್ಮಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದು, ಲಕ್ಷಾಂತರ ಭಕ್ತರನ್ನು ಹೊಂದಿರುವ ಅವರ ತೇಜೋವಧೆಯನ್ನು ಮಾಡಿ ಧಾರ್ಮಿಕ ಭಾವನೆಗಳನ್ನು ಕದಡಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ದುರುದ್ದೇಶದಿಂದ ಆರೋಪಿ ಸುರೇಶ್ ಕೋಣೆಮನೆ ಎಂಬುವವರು ವಿನಯ್ ಗುರೂಜಿ ವಿಡಿಯೋವೊಂದನ್ನು ಫೇಸ್ ಬುಕ್‌ನಲ್ಲಿ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದಾರೆ ಎಂದು ದೂರನ್ನು ನೀಡಲಾಗಿದೆ.

ವಿನಯ್ ಗುರೂಜಿಗೆ ನಿಂದನೆ
"ರಾತ್ರಿ ಕುಡಿದ ಫುಲ್ ಬಾಟಲ್ ಹೆಂಡದ ಅಮಲಿನಲ್ಲಿ ತಲೆಯ ಮೇಲೆ ಕಾಲಿಡುತ್ತಿರುವ ವಿನಯ್ ಗುರೂಜಿ, ನಶೆಯಲ್ಲಿ ಸರಿಯಾಗಿ ನಿಲ್ಲಲೂ ಆಗುತ್ತಿಲ್ಲ ಅವನಿಗೆ, ಇವನು ದೇವರ ಅವತಾರ ಅವತಾರ ಎಂದು ಒಪ್ಪಿದರೆದೇವರು ಹೆಂಡ ಕುಡಿತಾನೆ, ಹುಡುಗಿಯರ ಸಂಗ ಮಾಡುತ್ತಾನೆ, ಗಾಂಜಾ ಸಿಗರೇಟು ಸೇದುತ್ತಾನೆ, ಅಂತಲೂ ಒಪ್ಪಿಕೊಳ್ಳಬೇಕಾಗುತ್ತದೆ. ತಾನೂ ಗುರೂಜಿ ಎಂದು ಹೇಳುವ ಬಹುತೇಕರು ಸ್ಟಾರ್ ಹೊಟೇಲ್‌ಗಳಲ್ಲಿ ರಹಸ್ಯವಾಗಿ ಆಡುವ ರಂಗಿನಾಟ ಇದೆ" ಎಂದು ಸುರೇಶ್ ಕೋಣೆಮನೆ ಎಂಬುವವರು ಅವಾಚ್ಯವಾಗಿ ನಿಂದನೆಯನ್ನು ಮಾಡಿದ್ದಾರೆ ಮತ್ತು ಕಮೆಂಟ್ ಮಾಡಿದ್ದಾರೆ.

ಮನೋಜ್ ಕಾಮೆಂಟ್ ಏನು?
ಎಡಿಬಿ ಮನೋಜ್ ಪಂಡಿತ್ ಎಂಬುವವರು ವಿನಯ್ ಗುರೂಜಿ ಫೇಸ್‌ಬುಕ್‌ನಲ್ಲಿ "ಜನ ಕಾಲೆಳೆದಿದ್ದಕ್ಕೆ ಈಗ ಚಡ್ಡಿ ಹೋಗಿ ಚೂಡಿದಾರ್ ಬಂದಿದೆ, ಮೊದಲೇ ಹೆಣ್ಣಿನ ಧ್ವನಿ ಅದರ ಮೇಲೆ ಚೂಡಿದಾರ್ ದೇವರೆ ಗತಿ" ಎಂದು ಪೋಸ್ಟ್ ಮಾಡಿ ವಿನಯ್ ಗುರೂಜಿಯವರ ತೇಜೋವಧೆಯನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯಾರ ಯಾರ ವಿರುದ್ದ ದೂರು
ಸುರೇಶ್ ಕೋಣೆಮನೆ, ಎಡಿಬಿ ಮನೋಜ್ ಪಂಡಿತ್, ಸಮೀರ್ , ಸ್ವಾಮಿ, ಟ್ರೆಂಡಿಂಗ್ ಕನ್ನಡ, ಗಿರೀಶ್ ಗೌಡ ಎಂಟಿ, ಕೆಪಿಸಿಸಿ ಆನೇಕಲ್ ವಿಧಾನಸಭಾ ಕ್ಷೇತ್ರ ಸಾಮಾಜಿಕ ಜಾಲತಾಣ, ಸಿರಿ ವಿಜಯ ಟಿವಿ 24, ಸುರೇಶ, ಯಲ್ಲಪ್ಪ ಹೆಗಡೆ, ಪ್ರಭುತ್ವ ನಾವು ದ್ರಾವಿಡ ಕನ್ನಡಿಗರು, ಕರ್ನಾಟಕ ಲಿಂಗಾಯತ ಯುವ ಒಕ್ಕೂಟ, ಮನಸೇ ಮಹಾ ಮರ್ಕಟ, ವಿ2ಕನ್ನಡ ನ್ಯೂಸ್, ಪ್ರತಿಭಟನೆ ನ್ಯೂಸ್, ವಿಜಯ ಟೈಮ್ಸ್, ಹಾಸನ್ ಟ್ರಾಲ್ಸ್ ಟ್ರೋಲ್ ಭರಾಟೆ, ನನ್ನೂರು ಮೈಸೂರು, ಅಭಿನವ ಸುಬ್ರಮಣ್ಯ, ನಿರಂಜನ್ ಕುಗ್ವೆ ಹಾಗೂ ಇತರೆ ಸಾಮಾಜಿಕ ಜಾಲ ತಾಣಗಳನ್ನು ನಿರ್ವಹಿಸುವ ವ್ಯಕ್ತಿಗಳು ಕೂಡ ಗುರೂಜಿಯವರ ತೇಜೋವಧೆಯನ್ನು ಮಾಡಿ ಧಾರ್ಮಿಕ ಭಾವನೆಯನ್ನು ಕದಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು ಇಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯನ್ನು ಮಾಡಿಕೊಳ್ಳಲಾಗಿದೆ. ಇವರ ವಿರುದ್ದ ಐಪಿಸಿ ಸೆಕ್ಷನ್ 1860(U/s153A,295A,504) ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
Download











Click it and Unblock the Notifications