ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಜಿರಳೆ ಬಿದ್ದ ಪೊಂಗಲ್ ಬೆಲೆ ಎಷ್ಟು ಗೊತ್ತಾ?
KIA Rameshwaram Cafe: ಜನಪ್ರಸಿದ್ಧ ಕೆಫೆಗಳಲ್ಲಿ ರಾಮೇಶ್ವರಂ ಕೂಡ ಒಂದಾಗಿದೆ. ಆದರೆ, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಇದೇ ಕೆಫೆಯಲ್ಲಿ ನೀಡುವ ಪೊಂಗಲ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎನ್ನುವ ಗಂಭೀರ ಆರೋಪ ಎದುರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಕೂಡ ಈಗಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಈ ತಿಂಡಿಯ ಬಿಲ್ ಸಹ ಭಾರೀ ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಸಣ್ಣಪುಟ್ಟ ಹೋಟೆಲ್‌ಗಳಲ್ಲಿ ಇಂತಹ ತಪ್ಪುಗಳು ನಡೆದರೆ, ಗ್ರಾಹಕರು ಕೆಂಡಕಾರಿಬಿಡುತ್ತಾರೆ. ಅದರಲ್ಲೂ ಇಂತಹ ಪ್ರಸಿದ್ಧ ಹೋಟೆಲ್‌ಗಳಲ್ಲಿ ಇಂತಹ ತಪ್ಪುಗಳು ನಡೆದರೆ, ಸುಮ್ಮನೆ ಬಿಡುತ್ತಾರಾ. ಬದಲಿಗೆ ಕೊಟ್ಟ ಹಣಕ್ಕೆ ತಕ್ಕಂತೆ ಆಹಾರ ನೀಡಲಾಗುವುದಿಲ್ಲ.. ಸುಮ್ನೆ ಯಾಕೆ ಇಷ್ಟೊಂದು ಹಣ ಕೀಳುತ್ತೀರ ಎಂದು ಆಕ್ರೋಶಗಳನ್ನು ಹೊರಹಾಕಿಬಿಡುತ್ತಾರೆ. ಹಾಗೆಯೇ ಇದೀಗ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರೊಬ್ಬರು ಹೇಳಿರುವ ಪ್ರಕಾರ, ಜಿರಳೆ ಪತ್ತೆಯಾಗಿದೆ ಎನ್ನಲಾದ ಒಂದು ಪ್ಲೇಟ್ ಪೊಂಗಲ್ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಖರೀದಿಸಿದ ಪೊಂಗಲ್‌ನಲ್ಲಿ ಜಿರಳೆ ಪತ್ತೆ ಆಗಿದ್ದು, ಇದರಿಂದ ಕೆಫೆ ವಿರುದ್ಧ ಗ್ರಾಹಕರು ತೀವ್ರ ಆಕ್ರೋಶ ಹೊರಹಾಕಿದ ಘಟನೆ ಜುಲೈ 24ರ ಬೆಳಗ್ಗೆ ನಡೆದಿತ್ತು. ಲೋಕನಾಥ್ ಎಂಬುವವರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಿಂದ 300 ರೂಪಾಯಿ ಹಣ ನೀಡಿ ಪೊಂಗಲ್ ಮತ್ತು 180 ರೂಪಾಯಿಗೆ ಫಿಲ್ಟರ್ ಕಾಫಿ ಖರೀದಿ ಮಾಡಿದ್ದರು. ಒಟ್ಟು ಬಿಲ್ 504 ರೂಪಾಯಿ ಆಗಿತ್ತು ಎಂದು ವರದಿ ಆಗಿತ್ತು.
ಇನ್ನೂ ಪೊಂಗಲ್‌ನಲ್ಲಿ ಜಿರಳೆ ಕಾಣಿಸಿಕೊಂಡಾಗಿನಿಂದ ರಾಮೇಶ್ವರಂ ಕೆಫೆ ವಿರುದ್ಧ ಗ್ರಾಹಕರ ವಲಯದಲ್ಲಿ ಭಾರೀ ಆಕ್ರೋಶಗಳು ಭುಗಿಲೆದ್ದಿವೆ. ಮತ್ತೊಂದೆಡೆ ಜಿರಳೆ ಬಿದ್ದ ಪೊಂಗಲ್‌ಗೆ 300 ರೂಪಾಯಿ ಪಡಯುತ್ತಾರಲ್ಲ ಇವರಿಗೆ ಏನು ಅನ್ನಬೇಕು ಎಂದು ಪ್ರಶ್ನಿಸುವ ಮೂಲಕ ಕೆಂಡಕಾರುತ್ತಿದ್ದಾರೆ. ಸದ್ಯ ಅಂದಿನ ಬಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮತ್ತೊಂದೆಡೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಪತ್ತೆ ಆರೋಪ ಪ್ರಕರಣ ಸಂಬಂಧ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಆದರೆ, ಗ್ರಾಹಕರು ಹೇಳುವ ಪ್ರಕಾರ ತಪ್ಪಾಗಿರುವುದು ಕೆಫೆ ಕಡೆಯಿಂದ.. ಅಲ್ಲಿನ ಸಿಬ್ಬಂದಿಯೇ ನಮ್ಮಿಂದ ತಪ್ಪಾಗಿದೆ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ. ಈ ಬಿಡಿಯೋ ಕೂಡ ಇದೆ.
ಆದರೂ, ಇವರದ್ದೇ ತಪ್ಪು ಇಟ್ಟುಕೊಂಡು ಕೆಫೆ ಹೆಡ್ ದೂರು ದಾಖಲಿಸಿದ್ದಾರಲ್ಲ ಇವರಿಗೇನು ಹೇಳಬೇಕೋ ಗೊತ್ತಿಲ್ಲ ಅಂತಲೂ ಗ್ರಾಹಕ ವಲಯದಲ್ಲಿ ಆಕ್ರೋಶಗಳು ಭುಗೆಲೆದ್ದಿವೆ. ಬೆಂಗಳೂರು ವಿಭಾಗದ ರಾಮೇಶ್ವರಂ ಕೆಫೆ ಹೆಡ್ ಸುಮಂತ್ ಕೊಟ್ಟ ದೂರನ್ನು ಆಧರಿಸಿ ಎಫ್ಐಆರ್ ದಾಖಲಾಗಿದೆ. ಜಿರಳೆ ಪತ್ತೆ ಬೆನ್ನಲ್ಲೇ ಕೆಲವು ಅಪರಿಚಿತರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕಳಿಬಂದಿದೆ. ಊಟ ಕೆಟ್ಟದಾಗಿದೆ ಎಂದು ಆರೋಪಿಸಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹೋಟೆಲ್ ಬಗ್ಗೆ ಕೆಟ್ಟದಾಗಿ ಬಿಂಬಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಫೋನ್ ಮಾಡಿ 25 ಲಕ್ಷ ರೂಪಾಯಿಗೆ ಬೇಟಿಕೆ ಇಟ್ಟಿದ್ದಾರೆ. ಬ್ರಿಗೇಡ್ ರಸ್ತೆಗೆ ಹಣ ತಂದುಕೊಡು ಎಂದು ಅಪರಿಚಿತ ವ್ಯಕ್ತಿ ಕರೆ ಮಾಡುತ್ತಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಇನ್ನು ಈ ದೂರು ಆಧರಿಸಿ ಪೊಲೀಸರು ಸತ್ಯ ಏನು ಎನ್ನುವುದನ್ನಯ ಪತ್ತೆ ಮಾಡಲು ಮುಂದಾಗಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ತಿಂಡಿ ತೆಗೆದುಕೊಂಡಾಗ ಹುಳ ಪತ್ತೆಯಾಗಿದ್ದಾಗಿರುವ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರಿಗೆ ತಪ್ಪಾಯ್ತು ಅಂತಾ ಕ್ಷಮೆ ಕೇಳುತ್ತಿದ್ದಾರೆ. ಇದು ಇದೀಗ ಗ್ರಾಹಕರೊಬ್ಬರು ತೆಗೆದುಕೊಂಡ ಕಾಫಿ, ಪೊಂಗಲ್ ಬಿಲ್ ಸಹಿತ ವೈರಲ್ ಆಗುತ್ತಿದೆ. ಆದರೂ, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಏನೆಂದು ತಿಳಿದುಬರಬೇಕಿದೆ.












Click it and Unblock the Notifications