ಮಳೆ, ಪ್ರವಾಹ: ಮುಂಜಾಗ್ರತೆಗಾಗಿ 50 ಕೋಟಿ ಬಿಡುಗಡೆಗೆ ಸಿಎಂ ಸೂಚನೆ
ಬೆಂಗಳೂರು, ಆಗಸ್ಟ್ 6: ಮಳೆ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಮುಂಚಿತವಾಗಿಯೇ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಸಿಎಂ ಯಡಿಯೂರಪ್ಪ ಬುಧವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
Recommended Video
ರಾಜ್ಯದಾದ್ಯಂತ ಭಾರಿ ಮಳೆಯ ಮುನ್ಸೂಚನೆ ಇದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಿಎಂ ಚರ್ಚಿಸಿದ್ದು, ಮಳೆಯ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಿರಿ, ನಿರಂತರ ಸಂಪರ್ಕದಲ್ಲಿರುವಂತೆ ಆದೇಶಿಸಿದ್ದಾರೆ.

ಸದ್ಯ, ಕೊರೊನಾ ಸೋಂಕಿಗೆ ಒಳಗಾಗಿರುವ ಸಿಎಂ ಯಡಿಯೂರಪ್ಪ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಎಂ ಬುಧವಾರ ಕೆಲವು ಜಿಲ್ಲಾಧಿಕಾರಿಗಳ ಜೊತೆ ಫೋನ್‌ನಲ್ಲಿ ಮಾತನಾಡಿ ಮಾಹಿತಿ ಪಡೆದಿದ್ದಾರೆ.
ಈಗಾಗಲೇ ಮೈಸೂರು ಜಿಲ್ಲೆಯ ಕೆಲವು ಹಳ್ಳಿಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದ್ದು, ಕಬಿನಿ ಅಣೆಕಟ್ಟಿನಿಂದ 40,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಲಾಗಿದೆ. ಅಣೆಕಟ್ಟಿನ ಗರಿಷ್ಠ ಸಾಮರ್ಥ್ಯ 2,284 ಅಡಿಗಳಾಗಿದ್ದರೂ, ಭಾರಿ ಮಳೆಯಿಂದಾಗಿ ಅದರ ನೀರಿನ ಮಟ್ಟ 2,280 ಅಡಿ ತಲುಪಿತ್ತು.












Click it and Unblock the Notifications