ಕಡಿಮೆಯಾಗಲಿದೆ ಬಿಡಿಎ ಅಪಾರ್ಟ್‌ಮೆಂಟ್ ಬೆಲೆ
ಬೆಂಗಳೂರು, ಸೆ.25 : ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ಸಿದ್ದರಾಮಯ್ಯ, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಡಿಎ ಅಪಾರ್ಟ್ ಮೆಂಟ್ ಗಳ ದರ ಇಳಿಸಲು ಸೂಚನೆ ನೀಡಿದ್ದಾರೆ.
ಮಂಗಳವಾರ ಸಿಎಂ ಸಿದ್ದರಾಮಯ್ಯ ಬಿಡಿಎ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಎರಡು ಗಂಟೆಗಳಿಗೂ ಹೆಚ್ಚುಕಾ ನಡೆದ ಸಭೆಯಲ್ಲಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗುತ್ತಿರುವ ಕಾಮಗಾರಿಗಳ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ.

ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿರುವ ಬಿಡಿಎ ಅಧ್ಯಕ್ಷ ಶ್ರೀನಿವಾಸಚಾರಿ, ಬಿಡಿಎ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನಿರ್ಮಿಸುತ್ತಿರುವ 550 ಚದರಡಿಯ ಅಪಾರ್ಟ್ ಮೆಂಟ್ ಗಳ ಬೆಲೆ 8.20 ಲಕ್ಷವಿತ್ತು.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಇದರಿಂದ ಬಿಡಿಎ ಮನೆಗಳ ಬೆಲೆ ಕಡಿಮೆಯಾಗಲಿದೆ ಎಂದು ಹೇಳಿದರು.
ವಾರ್ಷಿಕ ಆದಾಯ ಮಿತಿ 1 ಲಕ್ಷ ರೂ.ಗಳಿತ್ತು. ಸಿದ್ದರಾಮಯ್ಯ ಅವರು ಅದನ್ನು 3.5 ಲಕ್ಷ ರೂ.ಗಳಿಗೆ ಏರಿಸುವಂತೆ ಆದೇಶಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಫೆರಿಫರಲ್ ರಿಂಗ್ ರಸ್ತೆಯ ಅಧಿಸೂಚನೆ ಪೂರ್ಣಗೊಂಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದೆ ಎಂದರು.
ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ ನಡೆಯುತ್ತಿರುವ ಹೊಸ ಮಾಲ್ ನಿರ್ಮಾಣ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಸಿಎಂ, ಸ್ಥಳೀಯ ವ್ಯಾಪಾರಿಗಳಿಗೆ ಹೊಸ ಮಾಲ್ ನಲ್ಲಿ ಸ್ಥಳಾವಕಾಶ ನೀಡಲು ಬಿಬಿಎಂಪಿಗೆ ಸೂಚನೆ ನೀಡುವಂತೆ ಸಿಎಂ ಆದೇಶ ನೀಡಿದ್ದಾರೆ.
ಅರ್ಕಾವತಿಗೆ ಮುಕ್ತಿ : ಅರ್ಕಾವತಿ ಬಡಾವಣೆಯಲ್ಲಿ ನಾಲ್ಕು ಸಾವಿರ ನಿವೇಶನಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು ಮುಂದಿನ ಎರಡು ತಿಂಗಳಿನಲ್ಲಿ ಅವುಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಒಟ್ಟು ಅರ್ಕಾವತಿ ಬಡಾವಣೆಯಲ್ಲಿ 8,800 ನಿವೇಶಗಳನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ 5,000 ನಿವೇಶಗಳಗಳು ನೋಂದಣಿಯಾಗಿವೆ.ಎಲ್ಲಾ ಫಲಾನುಭವಿಗಳಿಗೆ ಶೀಘ್ರದಲ್ಲೇ ನಿವೇಶನ ಹಂಚಿಕೆ ಮಾಡಲು ಪ್ರಯತ್ನಿಸುವುದಾಗಿ ಅಧಿಕಾರಿಗಳು ಸಿಎಂಗೆ ಭರವಸೆ ನೀಡಿದ್ದಾರೆ.












Click it and Unblock the Notifications