ಹೊಸ ಚಪ್ಪಲಿ ಖರೀದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಅಂದಹಾಗೆ ಗೌರಿಬಿದನೂರಿನಿಂದ ಸತತವಾಗಿ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿರುವ, ಪ್ರಸ್ತುತ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆಗಿರುವ ಎನ್ಎಸ್ ಶಿವಶಂಕರ ರೆಡ್ಡಿ ಅವರ ಪುತ್ರಿಯ ವಿವಾಹ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿತ್ತು. ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಕಮರ್ಷಿಯಲ್ ಸ್ಟ್ರೀಟ್ ನತ್ತ ಹೆಜ್ಜೆ ಹಾಕಿದ ಸಿಎಂ ಸಿದ್ದು ಅಲ್ಲಿನ ಮೆಟ್ರೋ ಮಾಲ್ ಗೆ ತೆರಳಿ ಐದಾರು ಜತೆ ಚಪ್ಪಲಿ ಖರೀದಿಸಿದ್ದಾರೆ. (ಪಕ್ಕದ ಚಿತ್ರದಲ್ಲಿ ಎನ್ಎಸ್ ಶಿವಶಂಕರ ರೆಡ್ಡಿ)
ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಎಲ್ಲ ಸರಕಾರಿ ಕಾರ್ಯಕಲಾಪಗಳಿಗೆ ಬ್ರೇಕ್ ಬಿದ್ದಿದೆ. ಇತ್ತ, ಲೋಕಸಭೆ ಚುನಾವಣೆಯೂ ಇನ್ನೂ ಕಾವೇರಿಲ್ಲ. ಹಾಗಾಗಿ ರಜಾ ಮೂಡಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಸಂಜೆ ನಗರದಲ್ಲಿ ಶಾಪಿಂಗ್ ನಡೆಸಿದ್ದಾರೆ. ನಿನ್ನೆ ಇಡೀ ದಿನ ಬಿಡುವಾಗಿದ್ದ ಸಿದ್ದರಾಮಯ್ಯ ಬಹಳ ದಿನಗಳ ನಂತರ ಶಾಪಿಂಗ್ ಎಂಜಾಯ್ ಮಾಡಿದ್ದಾರೆ.
ಸದಾ ಕಾಲ ರಾಜಕೀಯ ಮತ್ತು ಸರಕಾರಿ ಕಾರ್ಯಕಲಾಪಗಳಲ್ಲೇ ಮುಳುಗಿ ಹೋಗಿರುವ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಿಂದಲೂ ಬಿಡುವು ಎಂಬ ಮಾತೇ ಇರಲಿಲ್ಲ. ನಿನ್ನೆ ಬೆಳಗ್ಗೆ ಕೆಲ ಮಾಧ್ಯಮಗಳಿಗೆ ವಿಶೇಷ ಸಂದರ್ಶನ ನೀಡಿದ್ದ ಅವರು, ಸಂಜೆ 7 ಗಂಟೆಯ ನಂತರ ಮದುವೆಗೆ ಹೊರಟಿದ್ದಾರೆ. ಸಾಕಷ್ಟು ಬಿಡುವು ಇದ್ದರಿಂದ ತಮ್ಮ ಆಪ್ತರಾದ ಬಿಎಸ್ ಶಿವಣ್ಣ, ಪಿ ರಮೇಶ್, ಅವರ ಜತೆ ಮೆಟ್ರೋ ಮಾಲ್ ಗೆ ತೆರಳಿದ್ದಾರೆ. ತಮಗಿಷ್ಟವಾದ ಚಪ್ಪಲಿಗಳನ್ನು ಖರೀದಿಸಿ, ಬಿಲ್ ಪಾವತಿಸಿ ಹೊರ ಬಂದಿದ್ದಾರೆ.
ಮೆಟ್ರೋ ಮಾಲ್ ಸಿಬ್ಬಂದಿ ಫೋಟೋ ತೆಗೆಸಿಕೊಳ್ಳಬೇಕೆಂದು ಬಯಸಿದಾಗ ಖುಷಿಯಿಂದ ಫೋಸು ಕೊಟ್ಟಿದ್ದಾರೆ. ಸಾಮಾನ್ಯವಾಗಿ ಸಿದ್ದರಾಮಯ್ಯ ಅವರು ಸರಳ ಜೀವನ ಆಚರಣೆಯಲ್ಲಿದ್ದು, ಯಾವಾಗಲೂ ಜುಬ್ಬಾ, ಪಂಚೆ ಮತ್ತು ಶಲ್ಯಧಾರಿ. ಬಹುತೇಕ ಇವು ಖಾದಿ ಉತ್ಪನ್ನಗಳಾದ್ದರಿಂದ ಶಾಪಿಂಗ್ ಗೆ ಹೋಗಿ ಖರೀದಿಸುವ ಪರಿಪಾಠ ಬೆಳೆಸಿಕೊಂಡಿಲ್ಲ.












Click it and Unblock the Notifications