ರೆಡ್ಡಿ ರಾಜೀನಾಮೆ ಅಂಗೀಕರಿಸೋಲ್ಲ, ಮೋದಿಗೆ ರಾಜಕೀಯ ಬಿಟ್ಟು ಜನತೆಗಾಗಿ ಕೆಲಸ ಮಾಡೋಣವೆಂದ ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಖಾತೆ ಹಂಚಿಕೆ ಆಗುತ್ತಿದ್ದಂತೆ ನೂತನ ಸಚಿವರಾದ, ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ವಿಚಾರ ಭಾರೀ ಸದ್ದು ಮಾಡಿತ್ತು. ಆ ಸಮಸ್ಯೆ ಈಗ ಬಗೆಹರಿದಿದೆ ಎಂದು ಖುದ್ದು ಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. 'ಅವರು ನನ್ನ ಸ್ನೇಹಿತರು, ಅವರೊಂದಿಗೆ ಮಾತನಾಡಿದ್ದೇನೆ. ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ಯಾವುದೇ ಕಾರಣಕ್ಕೂ ಅವರ ರಾಜಿನಾಮೆ ಅಂಗೀಕರಿಸುವುದಿಲ್ಲ' ಎಂದು ಹೇಳಿದರು.

ಶನಿವಾರ ವಿಧಾನಸೌಧದಲ್ಲಿ ಮಾಜಿ ಸಿಎಂ ದೇವರಾಜ ಅರಸು ಅವರ ಪುಣ್ಯಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮುಖ್ಯಮಂತ್ರಿಗಳು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವರ ಆಯ್ಕೆ ಬೆನ್ನಲ್ಲೆ ಖಾತೆ ಹಂಚಿಕೆಯಲ್ಲಿ ತಲೆನೋವಾಗಿತ್ತು. ಇದೇ ವೇಳೆ ಜಲಸಂಪನ್ಮೂಲ ಇಲಾಖೆ ಖಾತೆಯನ್ನು ಮನಸ್ಸಿಲ್ಲದೇ ನಿರ್ವಹಿಸುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ನೀಡಿದ್ದರು.

CM DK Shivakumar

ಶುಕ್ರವಾರ ರಾತ್ರಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಅನಗತ್ಯವಾಗಿ ತಲೆಕೆಡಿಸಿಕೊಂಡು ಏನೇನೋ ಸ್ಟೋರಿ ಮಾಡಬೇಡಿ. ಅವರು ರಾಜಿನಾಮೆಯನ್ನು ವಾಟ್ಸಪ್ ನಲ್ಲಿ ಕಳಿಸಿಕೊಟ್ಟಿದ್ದು ನಿಜ. ಈಗ ಆ ವಿಚಾರ ಬಗೆಹರಿಸಲಾಗಿದೆ ಎಂದು ಹೇಳಿದರು. ರಾಜೀನಾಮೆ ಬಳಿಕ ತಮಿಳುನಾಡಿಗೆ ತೆರಳಿದ್ದ ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ರಾತ್ರಿ ಜಯನಗರ ಹೋಟೆಲ್ ಒಂದರಲ್ಲಿ ಇರುವುದು ಗೊತ್ತಾಗುತ್ತಿದ್ದಂತೆ ಡಿಕೆ ಶಿವಕುಮಾರ್ ತೆರಳಿ ಭೇಟಿ ಮಾಡಿದರು. ತಡರಾತ್ರಿ 1.30ರವರೆಗೆ ಮಾತುಕತೆ ನಡೆಸಿದ್ದು, ಸಂಧಾನ ಯಶಸ್ವಿಯಾಗಿದೆ ಎನ್ನಲಾಗಿದೆ.

PM Modi: ಕೇಂದ್ರ ಸರ್ಕಾರದ ಸಹಕಾರ ಕೋರಿದ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್
PM Modi: ಕೇಂದ್ರ ಸರ್ಕಾರದ ಸಹಕಾರ ಕೋರಿದ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್

ರಾಜ್ಯಸಭೆಗೆ 3, ಎಂಎಲ್‌ಸಿಗೆ 5 ಅಭ್ಯರ್ಥಿಗಳು

ವಿಧಾನಪರಿಷತ್ ಚುನಾವಣೆಗಾಗಿ ಐವರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆಗಿದೆ. ರಾಜ್ಯ ಸಭೆ ಚುನಾವಣೆಗೆ 3 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಶುಕ್ರವಾರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಪವನ್ ಖೇರಾ ಅವರನ್ನು ನಮ್ಮ ರಾಜ್ಯದಿಂದ ಕಣಕ್ಕೆ ಇಳಿಸಲಾಗಿದೆ. ಜೊತೆಗೆ ಎಐಸಿಸಿ ಕಾರ್ಯದರ್ಶಿ, ಯುವ ಮುಖಂಡ ಮನ್ಸೂರ್ ಅಲಿ ಖಾನ್ ಅವರಿಗೂ ಅವಕಾಶ ನೀಡಿದ್ದೇವೆ. ಕೆಪಿಸಿಸಿ ಅಧ್ಯಕ್ಷರೂ ಸೇರಿದಂತೆ ವಿಧಾನ ಪರಿಷತ್ ಚುನಾವಣೆಯ ಎಲ್ಲ ೫ ಸ್ಥಾನಗಳಿಗೂ ಕಾಂಗ್ರೆಸ್ ಕಾರ್ಯಕರ್ತರಿಗೇ ಅವಕಾಶ ನೀಡಲಾಗಿದೆ ಎಂದು ಅವರು ಮಾಹಿತಿ ಕೊಟ್ಟರು.

ರಾಜಕೀಯ ಬಿಟ್ಟು ಜನಹಿತಕ್ಕಾಗಿ ಕೆಲಸ ಮಾಡೋಣ

ಕರ್ನಾಟಕ ನಾಯಕತ್ವ ಬದಲಾವಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದರು. ಸಿದ್ದರಾಮಯ್ಯ ಅವರ ಸರಕಾರದ ವಿರುದ್ಧ ಜನರ ಆಕ್ರೋಶದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಿಎಂ ಬದಲಾವಣೆಯಾಗಿದೆ ಎಂದು ಅವರು ಹೇಳಿದ್ದರು. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಡಿಕೆಶಿ, 'ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಶುಭ ಕೋರಿದ್ದಾರೆ. ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾನು ಗೌರವಯುತವಾಗಿ ಹೋಗಿ ಅವರನ್ನು ಭೇಟಿ ಮಾಡುವೆ. ಅವರು ರಾಜಕಾರಣ ಮಾಡುವುದು ಬೇಡ, ನಾವು ರಾಜಕಾರಣ ಮಾಡುವುದು ಬೇಡ. ರಾಜ್ಯದ ಜನತೆಯ ಹಿತಕ್ಕಾಗಿ ನಾವು ಎಲ್ಲರೂ ಸೇರಿ ಏನು ಕೆಲಸ ಮಾಡಬೇಕೋ ಅದನ್ನು ಮಾಡೋಣ' ಎಂದು ಹೇಳಿದರು.

ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಅರಸು ಕಾರಣ

ದಿವಂಗತ ದೇವರಾಜ ಅರಸು ಅವರು ನಮ್ಮ ರಾಜ್ಯದ ಪ್ರಗತಿಗೆ ಅಡಿಪಾಯ ಹಾಕಿದ್ದಾರೆ. 100 ವರ್ಷವಾದರೂ ಸಾಧನೆಗಳ ಮೂಲಕ ಅವರು ಜೀವಂತವಾಗಿರುತ್ತಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದೇವರಾಜ ಅರಸು ಅವರು ನಮ್ಮನ್ನು ಅಗಲಿ 45 ವರ್ಷಗಳಾಗಿವೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಅವರ ಭಾಷಣಗಳನ್ನು ಕೇಳಿದ್ದೇನೆ. ಅವರು ರಾಜಿನಾಮೆ ಕೊಟ್ಟಾಗ ಮಾಡಿದ ಕೊನೇ ಭಾಷಣ ನನ್ನ ಕಿವಿಯಲ್ಲಿ ಹಾಗೆ ಉಳಿದಿದೆ. ಅವರು ಯಾವ ಭಾವನೆಯೊಂದಿಗೆ ರಾಜಕಾರಣ, ಅಧಿಕಾರ ನಡೆಸಿದ್ದರು ಎಂದು ಅವರು ಹೇಳಿದ್ದರು. ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಅರಸು ಅವರ ನಾಯಕತ್ವದಲ್ಲಿ ಉಳುವವನಿಗೆ ಭೂಮಿ ನೀಡಬೇಕು ಎಂದು ತಂದ ಭೂ ಸುಧಾರಣಾ ಕಾಯ್ದೆ ದೇಶಕ್ಕೆ ಒಂದು ಮಾದರಿ. ಅದೊಂದು ಕ್ರಾಂತಿ. ಅರಸು ಅವರೊಬ್ಬ ಧೀಮಂತ ನಾಯಕ. ಅವರು ಎಲ್ಲಾ ಜನಾಂಗದವರನ್ನು ಬೆಳೆಸಿ, ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಿಂದುಳಿದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಸಲು ಅವರು ಕ್ರಮ ಕೈಗೊಂಡರು ಎಂದು ಡಿಕೆ ಶಿವಕುಮಾರ್ ಸ್ಮರಿಸಿದರು.

ಆವತ್ತಿಗೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಗೆ ಅಡಿಪಾಯ ಹಾಕಿದ್ದು ಅರಸ ಅವರೇ. ರೈತರು ಮಾತ್ರವಲ್ಲ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರು ಕೊಡುಗೆಯನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಎಲ್ಲಾ ನಾಯಕರಿಗೆ ನಮನ ಅರ್ಪಿಸಿದ್ದೇನೆ. ಇಂದು ಅರಸು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ ಎಂದು ಕರೆ ಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+