India T20 Squad: ಭಾರತ ಟಿ20 ಕ್ರಿಕೆಟ್‌ಗೆ ಹೊಸ ನಾಯಕನ ಘೋಷಣೆ, ವೈಭವ್ ಸೂರ್ಯವಂಶಿಗೆ ಸ್ಥಾನ, ಸೂರ್ಯಕುಮಾರ್ ಔಟ್
India T20 Squad Announced: ಜೂನ್ ತಿಂಗಳ ಕೊನೆಯಲ್ಲಿ ನಡೆಯಲಿರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಸರಣಿಗಳಿಗೆ ಭಾರತ ಟಿ20 ಕ್ರಿಕೆಟ್ ತಂಡ ಪ್ರಕಟವಾಗಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡಲಾಗಿದ್ದು, ಶ್ರೇಯಸ್ ಅಯ್ಯರ್‌ಗೆ ನಾಯಕನ ಪಟ್ಟ ಕಟ್ಟಲಾಗಿದೆ. ತಿಲಕ್ ವರ್ಮಾ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ವಿಶೇಷ ಅಂದ್ರೆ ಈ ಬಾರಿಯ ಐಪಿಎಲ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅವರು ಈ ಟೀಂನಲ್ಲಿ ಇರುವುದು.
ಮುಂಬರುವ ಜೂನ್ 26 ಮತ್ತು 28ರಂದು ನಡೆಯಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿ ಹಾಗೂ ಆ ಬಳಿಕ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಉಪನಾಯಕನ ಜವಾಬ್ದಾರಿಯನ್ನು ತಿಲಕ್ ಹೆಗಲಿಗೆ ಕಟ್ಟಿದೆ. ಈ ತಂಡದಲ್ಲಿ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಿಂಚಿದ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಲಾಗಿದೆ. ಆದರೆ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸುತ್ತಾರೆಯೋ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಸೂರ್ಯಕುಮಾರ್ ಯಾದವ್ ಕೈಬಿಡಲು ಕಾರಣ
ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಮತ್ತು ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಸೂರ್ಯಕುಮಾರ್ ಯಾದವ್ ಕಳೆದ ಒಂದೂವರೆ ವರ್ಷದಿಂದ ಬ್ಯಾಟಿಂಗ್‌ನಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದರು. ಈ ಬಾರಿಯ ಐಪಿಎಲ್‌ನಲ್ಲೂ ಸಹ ಮುಂಬೈ ಇಂಡಿಯನ್ಸ್ ಪರ ಆಡಿದಾಗಲೂ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ನಾಯಕನಾಗಿ ಯಶಸ್ವಿಯಾಗಿದ್ದರೂ ವೈಯಕ್ತಿಯವಾಗಿ ಲಯಕ್ಕೆ ಮರಳದ ಹಿನ್ನೆಲೆಯಲ್ಲಿ ಬಿಸಿಸಿಐ ಅವರನ್ನು ಕೈಬಿಟ್ಟಿದೆ ಎನ್ನಲಾಗಿದೆ.
ಅಯ್ಯರ್, ತಿಲಕ್ ವರ್ಮಾ ಆಯ್ಕೆ ಆಗಿದ್ದೇಕೆ?
ಐಪಿಎಲ್‌ನಲ್ಲಿ ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ವರೆಗೂ ತೆಗೆದುಕೊಂಡು ಹೋಗಿದ್ದ ಅನುಭವಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ನೂತನ ನಾಯಕರನ್ನಾಗಿ ಆಯ್ಕೆ ಮಾಡಿದೆ. ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭರವಸೆ ಮೂಡಿಸಿರುವ ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾಗೆ ಉಪನಾಯಕನ ಪಟ್ಟ ಕಟ್ಟಿದೆ.
ವೈಭವ್ ಸೂರ್ಯವಂಶಿಗೆ ಸ್ಥಾನ
ಮತ್ತೊಂದೆಡೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ಬಾಲಕ ವೈಭವ್ ಸೂರ್ಯವಂಶಿ ಅವರನ್ನು ಭಾರತದ ಸೀನಿಯರ್ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ವಿಶ್ವಾದ್ಯಂತ ಕ್ರಿಕೆಟ್ ದಿಗ್ಗಜರ ಮನಗೆದ್ದಿರುವ ವೈಭವ್‌ಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಗಿದೆ.
ಒಂದು ವೇಳೆ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಇವರೊಂದಿಗೆ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮತ್ತೊಬ್ಬ ಯುವ ಆಟಗಾರ ಪ್ರಿನ್ಸ್ ಯಾದವ್ ಅವರಿಗೂ ಬಿಸಿಸಿಐ ಮಣೆ ಹಾಕಿದ್ದು, ತಂಡದಲ್ಲಿ ಅವಕಾಶ ಕಲ್ಪಿಸಿದೆ.
ಭಾರತ ಟಿ20 ಕ್ರಿಕೆಟ್ ತಂಡದಲ್ಲಾದ ಬದಲಾವಣೆಗಳು
* ಹೊಸ ನಾಯಕ: ಶ್ರೇಯಸ್ ಅಯ್ಯರ್ (ನಾಯಕ)
* ಉಪನಾಯಕ: ತಿಲಕ್ ವರ್ಮಾ
* ಸೂರ್ಯುಮಾರ್ ಯಾದವ್ ಔಟ್: ವೈಯಕ್ತಿಯ ಕಳಪೆ ಫಾರ್ಮ್‌ನಿಂದಾಗಿ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
* ಯುವ ಆಟಗಾರರಿಗೆ ಸ್ಥಾನ: ವೈಭವ್ ಸೂರ್ಯವಂಶಿ, ಪ್ರಿನ್ಸ್ ಯಾದವ್
ಮೊದಲು ಐರ್ಲೆಂಡ್ ವಿರುದ್ಧ 2 ಟಿ20 ಪಂದ್ಯಗಳು ಜೂನ್ 26, 28 ಹಾಗೂ ನಂತರ ಇಂಗ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳು ನಡೆಯಲಿವೆ. ಭವಿಷ್ಯದ ಟಿ20 ವಿಶ್ವಕಪ್ ಟೂರ್ನಿ ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಮಾಡಿರುವ ಈ ಮಹತ್ವದ ಬದಲಾವಣೆಗಳು ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡಲಿವೆ ಎಂಬುದನ್ನು ನೋಡಬೇಕಿದೆ.
ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಪ್ರಿನ್ಸ್ ಯಾದವ್.












Click it and Unblock the Notifications