ವಿ.ಸೋಮಣ್ಣ ಕಾಂಗ್ರೆಸ್ ಸೇರ್ತಾರಾ?: ಇದಕ್ಕೆ ಸಿಎಂ ಬೊಮ್ಮಾಯಿ ಏನಂದ್ರು?
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಇತ್ತ ಬಿಜೆಪಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಇದಕ್ಕೆ ತೆರೆಎಳೆಯುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, ಮಾರ್ಚ್ 14: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರ ಹೆಚ್ಚು ಚರ್ಚೆಗೆ ಬರುತ್ತಿದೆ. ಆದರೆ ಈ ಊಹಾಪೋಹಗಳನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಹೊತ್ತಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಲಿ ವಸತಿ ಸಚಿವರಾದ ವಿ.ಸೋಮಣ್ಣ ಪಕ್ಷ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಕೆಲ ದಿನಗಳಿಂದ ಆಗಾಗ್ಗೆ ವಿ.ಸೋಮಣ್ಣ ಪಕ್ಷಾಂತರ ಮಾತು ರಾಜಕೀಯ ವಲಯದಲ್ಲಿ ಓಡಾಡುತ್ತಲೆ ಇದೆ. ಸೋಮಣ್ಣ ಅತೃಪ್ತರಾಗಿದ್ದು, 2009ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಯೋಚನೆಯಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಈ ಸಂಬಂಧ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ವಸತಿ ವಿ ಸೋಮಣ್ಣ ಕುರಿತ ಊಹಾಪೋಹಳ್ಳನ್ನು ತಳ್ಳಿಹಾಕಿದ್ದಾರೆ. ವಿ.ಸೋಮಣ್ಣ ಅವರು ಬಿಜೆಪಿಯನ್ನು ತೊರೆಯುವುದಿಲ್ಲ. ಅವರು ಪಕ್ಷದಲ್ಲೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ ಈ ಮೂಲಕ ಕಾಂಗ್ರೆಸ್ ಸೇರುವ ಯೋಚನೆಯಲ್ಲಿದ್ದಾರೆ ಎಂದವರಿಗೆ ತಿರುಗೇಟು ನೀಡಿದ್ದಾರೆ.
ಸೋಮಣ್ಣ ಮತ್ತೆ ನಾವು ಹಳೆಯ ಸ್ನೇಹಿತರು. ನಾವು ನಿರಂತರವಾಗಿ ಚರ್ಚೆ ನಡೆಸುತ್ತೇವೆ. ಅವರು ನಮ್ಮೊಂದಿಗಿದ್ದಾರೆ ಮತ್ತು ನಮ್ಮೊಂದಿಗೆ ಇರುತ್ತಾರೆ, ಯಾವುದೇ ಊಹಾಪೋಹದ ಅಗತ್ಯವಿಲ್ಲ ಎಂದು ತಿಳಿಸಿದರು. ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಹಾಗೂ ಚುನಾವಣಾ ನಿರ್ವಹಣಾ ಸಮಿತಿಗೆ ಹಿರಿಯ ಸಚಿವ ಸೋಮಣ್ಣ ಸೇರ್ಪಡೆಯಾಗದಿರುವುದು ಪಕ್ಷ ತೊರೆಯುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸೋಮಣ್ಣ ಹೇಳಿಕೆಯಿಂದಲೇ ಈ ಚರ್ಚೆ
ಬಿಜೆಪಿ ಶಾಸಕ ವಿ.ಸೋಮಣ್ಣ ಅವರು ಇತ್ತೀಚೆಗಷ್ಟೇ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. ಸೋಮಣ್ಣ ನಿಂತ ನೀರಲ್ಲ. ಹರಿಯುತ್ತಿದ್ದಾನೆ.... ಎಂದು ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಬಿಜೆಪಿ ತೊರೆಯುವ ಬಗ್ಗೆ ತಾನು ಏನನ್ನೂ ಮಾತನಾಡಿಲ್ಲ ಎಂದು ಹೇಳಿರುವ ಅವರು, ಪಕ್ಷದ ನಾಯಕತ್ವದೊಂದಿಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
ಇದಾದ ಬೆನ್ನಲ್ಲೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿ.ಸೋಮಣ್ಣ ಇಬ್ಬರು ಅಕ್ಕಪಕ್ಕ ಕೂತು ಮಾತನಾಡುತ್ತಿರುವ ಫೋಟೊ ವೈರಲ್ ಆಗಿದೆ. ಇದರಿಂದ ಸೊಮಣ್ಣ ಕಾಂಗ್ರೆಸ್ ಸೇರುವುದು ಖಚಿತ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿ.ಸೋಮಣ್ಣನವರು ಆ ಪೋಟೊ ಯಾವದೋ ಕಾಲದ್ದು ಎಂದು ತಿಳಿಸಿದ್ದಾರೆ.












Click it and Unblock the Notifications